ವಾಸ್ತು ಪ್ರಕಾರ ಈ ತಪ್ಪುಗಳು ನಿಮ್ಮನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತವೆ ಎಚ್ಚರವಾಗಿರಿ

Written by Soma Shekar

Published on:

---Join Our Channel---

ಇತ್ತೀಚಿನ ವರ್ಷಗಳಲ್ಲಿ ಜನರು ತಮ್ಮ ಮನೆಗಳಲ್ಲಿ ವಾಸ್ತುವಿಗೆ ಸಂಬಂಧಿಸಿದಂತಹ ವಿಚಾರಗಳಿಗೆ ಸಾಕಷ್ಟು ಮಹತ್ವವನ್ನು ನೀಡುತ್ತಾರೆ. ಮನೆಯಲ್ಲಿರುವ ವಸ್ತುಗಳು ವಾಸ್ತು ಪ್ರಕಾರ ಇದ್ದರೆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದರ ಜೊತೆಗೆ ಸುಖ ಸಮೃದ್ಧಿ ಗಳು ಜೀವನವನ್ನು ಸಂತೋಷವಾಗಿ ಇಡುತ್ತದೆ ಎಂದು ನಂಬುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ನಾವು ನಮಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ತಪ್ಪುಗಳಿಂದಾಗಿ ವಾಸ್ತುದೋಷ ಸಂಭವಿಸಿ ನಾವು ಸಾಲದ ಸುಳಿಯಲ್ಲಿ ಸಿಲುಕಿ ಬಿಡುತ್ತೇವೆ. ಹೀಗೆ ನಮ್ಮನ್ನು ಸಾಲದ ಸುಳಿಗೆ ಸಿಲುಕಿಸುವ ಈ ತಪ್ಪುಗಳನ್ನು ನೀವು ಎಂದಿಗೂ ಮಾಡಬೇಡಿ.

ವಾಸ್ತುವಿನ ಪ್ರಕಾರ ನಿಮ್ಮ ಮನೆಯ ಹೊರಗೆ ಅಥವಾ ಮನೆಯ ಪ್ರವೇಶದ್ವಾರದಲ್ಲಿ ಕಸದ ಬುಟ್ಟಿಯನ್ನು ಎಂದಿಗೂ ಇಡಬೇಡಿ. ಹಾಗೆ ಇದ್ದರೆ ಅದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಉಂಟಾಗುವುದು ಮಾತ್ರವಲ್ಲದೇ ಅದು ಐಶ್ವರ್ಯದ ಒಡತಿಯಾಗಿರುವ ದೇವತೆ ಶ್ರೀ ಮಹಾಲಕ್ಷ್ಮಿಗೆ ಕೋಪವನ್ನು ತರಿಸುತ್ತದೆ ಎಂದು ಹೇಳಲಾಗಿದ್ದು, ಮನೆಯ ಮುಖ್ಯದ್ವಾರವನ್ನು ಸದಾ ಸ್ವಚ್ಛವಾಗಿ, ಅಚ್ಚುಕಟ್ಟಾಗಿ ಇಟ್ಟುಕೊಂಡರೆ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಗಳು ದೊರೆಯುತ್ತವೆ ಎಂದು ಹೇಳಲಾಗಿದೆ.

ವಾಸ್ತು ಪ್ರಕಾರ ಸಂಜೆಯ ವೇಳೆಯಲ್ಲಿ ಹೊರಗಿನ ಯಾವುದೇ ವ್ಯಕ್ತಿಗೂ ಕೂಡಾ ಹಾಲು, ಮೊಸರು ಅಥವಾ ತುಪ್ಪವನ್ನು ಎಂದಿಗೂ ನೀಡಬಾರದು. ಹಾಗೇನಾದರೂ ನೀಡಿದರೆ ಅದು ನಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಕೆಟ್ಟದಾದ ಪರಿಣಾಮವನ್ನು ಬೀರುತ್ತದೆ ಹಾಗೂ ನಮ್ಮನ್ನು ಸಾಲಗಳ ಸಂಕೋಲೆಯಲ್ಲಿ ಸಿಲುಕುವಂತೆ ಮಾಡುತ್ತದೆ ಎಂದು ವಾಸ್ತು ಹೇಳುತ್ತದೆ. ಆದ್ದರಿಂದ ಸಂಜೆಯ ವೇಳೆ ಈ ವಸ್ತುಗಳನ್ನು ಹೊರಗಿನ ವ್ಯಕ್ತಿಗಳಿಗೆ ನೀಡುವುದನ್ನು ಆದಷ್ಟು ಕಡಿಮೆ ಮಾಡಿ.

ಮನೆಯ ಅಂಗಳದಲ್ಲಿ ಯಾವುದಾದರೂ ಗಿಡವು ಸತ್ತಿದ್ದರೆ, ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುವ ಸಾಧ್ಯತೆಗಳು ಇರುತ್ತವೆ ಎಂದು ವಾಸ್ತುವಿನಲ್ಲಿ ಹೇಳಲಾಗುತ್ತದೆ. ಆದ್ದರಿಂದಲೇ ಸತ್ತ ಗಿಡಗಳನ್ನು ಕೂಡಲೇ ನೆಲದಿಂದ ತೆಗೆದು ಸೂಕ್ತ ಸ್ಥಳದಲ್ಲಿ ಅದನ್ನು ಹಾಕಿ ಬಿಡಿ. ಇಲ್ಲವೇ ಸಸ್ಯಗಳು ಒಣಗಿ ಸಾಯದಂತೆ ಸೂಕ್ತವಾದ ಕಾಳಜಿಯನ್ನು ವಹಿಸಿ ಮರಗಳ ಆರೈಕೆಯನ್ನು ಮಾಡಿ.

ರಾತ್ರಿ ವೇಳೆ ಅಡುಗೆಮನೆಯಲ್ಲಿ ಕೊಳಕು ಪಾತ್ರೆಗಳನ್ನು ಹಾಗೂ ಊಟ ಮಾಡಿರುವ ತಟ್ಟೆಗಳನ್ನು ಹಾಗೆ ಬಿಟ್ಟು ಮುಂಜಾನೆ ತೊಳೆಯುವ ಅಭ್ಯಾಸ ಕೆಲವರಿಗಿರುತ್ತದೆ. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ ಎಂದು ಹೇಳಲಾಗಿದೆ. ಆದ್ದರಿಂದಲೇ ರಾತ್ರಿ ಮಲಗುವ ಮುನ್ನ ಎಲ್ಲಾ ಮುಸುರೆ ಪಾತ್ರೆಗಳನ್ನು ತೊಳೆದು, ಅಡುಗೆಮನೆಯನ್ನು ಸ್ವಚ್ಛವಾಗಿಟ್ಟರೆ ಆರ್ಥಿಕ ಸಮಸ್ಯೆಗಳು ದೂರಾಗುತ್ತವೆ ಎಂದು ಹೇಳಲಾಗಿದೆ.

ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಹಾಗೂ ಬಚ್ಚಲಮನೆಯಲ್ಲಿ ಖಾಲಿ ನೀರಿನ ಪಾತ್ರೆಗಳನ್ನು ಇಡಬಾರದು. ಬಚ್ಚಲಮನೆಯಲ್ಲಿ ಕನಿಷ್ಠ ಒಂದು ಬಕೆಟ್ ನೀರು ಆದರೂ ತುಂಬಿ ಇಡಬೇಕು. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವುದರ ಜೊತೆಗೆ ಮನೆಯ ಆರ್ಥಿಕ ಉತ್ತಮವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ. ಮನೆಯಲ್ಲಿ ಯಾವುದಾದರೂ ನಲ್ಲಿ ಸುರಿಯುತ್ತಲಿದ್ದರೆ ಕೂಡಲೇ ಅದನ್ನು ದುರಸ್ತಿ ಮಾಡಿಸಬೇಕು. ಇಲ್ಲವಾದರೆ ಹನಿ ಹನಿ ನೀರು ಹೋದಂತೆ ನಿಮ್ಮ ಬಳಿ ಇರುವ ಹಣವು ಖಾಲಿಯಾಗುತ್ತದೆ ಎಂದು ವಾಸ್ತು ಹೇಳುತ್ತದೆ.

ಕೆಲವರಿಗೆ ಹಾಸಿಗೆಯ ಮೇಲೆ ಕುಳಿತು ತಿನ್ನುವ ಅಭ್ಯಾಸವಿರುತ್ತದೆ. ಆದರೆ ವಾಸ್ತು ಪ್ರಕಾರ ಈ ಅಭ್ಯಾಸ ಒಳ್ಳೆಯದಲ್ಲ ಎಂದು ಹೇಳಲಾಗಿದ್ದು, ಹೀಗೆ ಹಾಸಿಗೆ ಮೇಲೆ ಕುಳಿತು ತಿನ್ನುವವರಿಗೆ ಆರ್ಥಿಕ ಸಮಸ್ಯೆಗಳು ಎದುರಾಗುತ್ತದೆ. ಇದೊಂದು ತಪ್ಪು ವ್ಯಕ್ತಿಯನ್ನು ಬಡವನನ್ನಾಗಿ ಮಾಡುತ್ತದೆ ಮತ್ತು ಇದು ಆತನ ಸಮೃದ್ಧಿಗೆ ಕೂಡಾ ಅಡ್ಡಗಾಲಾಗಿ ಪರಿಣಮಿಸುವ ಸಾಧ್ಯತೆಗಳಿರುತ್ತವೆ.

Leave a Comment