ಲೈಗರ್ ಸೋಲಿನಿಂದ ಕಂಗಾಲಾದ ನಿರ್ದೇಶಕ ಪೂರಿ ಜಗನ್ನಾಥ್: ಮನೆ ಬಾಡಿಗೆ ಹೊರೆ ಎಂದು ಮುಂಬೈಗೆ ಗುಡ್ ಬೈ!

Entertainment Featured-Articles Movies News

ನಟ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಹೀನಾಯ ಸೋಲನ್ನು ಕಂಡಿದೆ. ಅದು ಸಾಲದೆಂಬಂತೆ ಈ ವರ್ಷದ ಅತ್ಯಂತ ಕಳಪೆ ಸಿನಿಮಾಗಳ ಸಾಲಿಗೆ ಸಹಾ ಲೈಗರ್ ಸೇರ್ಪಡೆಯಾಗಿದೆ.‌ ಪೂರಿ ಜಗನ್ನಾಥ್ ನಿರ್ದೇಶನದ ಈ ಸಿನಿಮಾದಲ್ಲಿ ಅನನ್ಯಾ ಪಾಂಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾಕ್ಕೆ ನಟಿ ಚಾರ್ಮಿ ಕೌರ್, ಪೂರಿ ಜಗನ್ನಾಥ್ ಮತ್ತು ಕರಣ್ ಜೋಹರ್ ಮೂವರು ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದರು. ಬಿಡುಗಡೆಗೆ ಮುನ್ನು ಭರ್ಜರಿ ಸದ್ದು ಮಾಡಿದ್ದ ಸಿನಿಮಾ, ಬಿಡುಗಡೆಯ ನಂತರ ವಿಫಲವಾಗಿದೆ. ಈ ಹೀನಾಯ ಸೋಲನ್ನು ಅರಗಿಸಿಕೊಳ್ಳುವುದು ನಿರ್ಮಾಪಕರಿಗೆ ಈಗ ಸಾಧ್ಯವಾಗುತ್ತಿಲ್ಲ.

ಲೈಗರ್ ಸೋಲಿನ ಹಿನ್ನೆಲೆಯಲ್ಲಿ ಇದೇ ಚಿತ್ರ ತಂಡದಿಂದ ಮೂಡಿ ಬರಲಿದ್ದ ಹೊಸ ಸಿನಿಮಾ ಜನಗಣ ಮನಕ್ಕೆ ಸದ್ಯಕ್ಕಂತೂ ಬ್ರೇಕ್ ಬಿದ್ದಾಗಿದೆ. ಸಿನಿಮಾ ಚಿತ್ರೀಕರಣ ಆರಂಭವಾಗುವುದೋ ಇಲ್ಲವೋ ಎನ್ನುವ ಅನುಮಾನವನ್ನು ಸಹಾ ಹುಟ್ಟು ಹಾಕಿದೆ. ನಟಿ ಚಾರ್ಮಿ ಕೌರ್ ಸಿನಿಮಾದ ಸೋಲಿಗೆ ಕಂಗೆಟ್ಟು ಸೋಶಿಯಲ್ ಮೀಡಿಯಾಗಳಿಂದ ವಿರಾಮ ಪಡೆದುಕೊಂಡಿದ್ದಾರೆ. ಅಲ್ಲದೇ ನಟ ವಿಜಯ ದೇವರಕೊಂಡ ತಮ್ಮ ಸಂಭಾವನೆಯಲ್ಲಿ ಒಂದಷ್ಟು ಹಣವನ್ನು ಹಿಂತಿರುಗಿಸುವ ನಿರ್ಧಾರವನ್ನು ಸಹಾ ಮಾಡಿದ್ದಾರೆ ಎನ್ನುವ ವಿಚಾರ ಕೂಡಾ ಸುದ್ದಿಯಾಗಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಹೊಸ ಸುದ್ದಿಯೊಂದು ಹೊರ ಬಂದಿದೆ.

ಲೈಗರ್ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಮೂಲಕ ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಪೂರಿ ಜಗನ್ನಾಥ್ ಮುಂಬೈನಲ್ಲಿ ಸಮುದ್ರದ ನೋಟ ಇರುವ, 4 BHK ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು. ಅಪಾರ್ಟ್ಮೆಂಟ್ ಬಾಡಿಗೆ ತಿಂಗಳಿಗೆ 10 ಲಕ್ಷ, ಅದರ ಜೊತೆಗೆ ನಿರ್ವಹಣೆ ವೆಚ್ಚವೂ ಲಕ್ಷಾಂತರ ರೂಪಾಯಿಗಳಿಗಿಂತ ಕಡಿಮೆ ಏನೆಲ್ಲ ಎನ್ನಲಾಗಿದೆ. ಆದರೆ ಲೈಗರ್ ಸೋಲಿನಿಂದ ವಿತರಕರು ನಿರ್ದೇಶಕನ ಬೆನ್ನು ಬಿದ್ದಿದ್ದಾರೆ. ಬಾಲಿವುಡ್ ನಲ್ಲಿ ಮೊದಲ ಪ್ರಾಜೆಕ್ಟ್ ನಲ್ಲೇ ಕಂಡ ಸೋಲು ಅವರ ಮುಂದಿನ ಪ್ರಾಜೆಕ್ಟ್ ಗಳಿಗೆ ದೊಡ್ಡ ಅಡ್ಡಗಾಲನ್ನೇ ಹಾಕಿದೆ ಎನ್ನುವುದು ಸತ್ಯ.

ಈಗ ಅಪಾರ್ಟ್ಮೆಂಟ್ ನ ಬಾಡಿಗೆ ಹೊರೆಯಾಗಿ ಪರಿಣಮಿಸಲಿದೆ ಎನ್ನುವ ಕಾರಣಕ್ಕೆ ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ಮುಂಬೈ ನಿವಾಸವನ್ನು ಖಾಲಿ ಮಾಡಿ ಹೈದ್ರಾಬಾದ್ ನ ಜೂಬಿಲಿ ಹಿಲ್ಸ್ ನಲ್ಲಿರುವ ತಮ್ಮ ಮನೆ ಐಕಾನಿಕ್ ಕೇವ್ ಗೆ ಹಿಂತಿರುಗಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಲೈಗರ್ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳ ಮಾರಾಟದಿಂದ ದೊಡ್ಡ ಮೊತ್ತದ ಹಣವನ್ನು ಪಡೆದಿದ್ದು, ಇದರಿಂದ ನಿರ್ದೇಶಕನ ಮೇಲೆ ಹೊರೆ ಆಗುವುದಿಲ್ಲ ಎನ್ನಲಾಗಿದೆಯಾದರೂ, ಸದ್ಯಕ್ಕೆ ಪೂರಿ ಜಗನ್ನಾಥ್ ತಮ್ಮ ಮುಂಬೈ ವಾಸಕ್ಕೆ ಗುಡ್ ಬೈ ಹೇಳಲು ಸಜ್ಜಾಗಿದ್ದಾರೆ.

Leave a Reply

Your email address will not be published.