ರೈಲು ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಲೇ, ಕೆಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಸಾಧಕ

0 0

ನಮ್ಮ ದೇಶದಲ್ಲಿ ಬಡತನ ಯಾವ ಮಟ್ಟಕ್ಕೆ ಬೇರು ಬಿಟ್ಟಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. ಇಂತಹ ಬಡತನದ ಕಾರಣದಿಂದಾಗಿಯೇ ಭಾವೀ ಐಎಎಸ್ ಅಧಿಕಾರಿಯೊಬ್ಬರು ಸಂಕಷ್ಟದ ಕಾರಣದಿಂದ ರೈಲ್ವೆ ಪ್ಲಾಟ್ ಫಾರಂ ನಲ್ಲಿ ಕೆಲಸ ಮಾಡುತ್ತಲೇ, ಬಿಡುವಿನ ವೇಳೆಯಲ್ಲಿ ಅಲ್ಲಿಯೇ ಕುಳಿತು ಓದುವ ಮೂಲಕ ತನ್ನ ಶಿಕ್ಷಣವನ್ನು ಪೂರ್ತಿ ಮಾಡಬೇಕಾಯಿತು. ಅಲ್ಲದೇ ಆತನ ಶ್ರಮಕ್ಕೆ ಇಂದು ಫಲ ಕೂಡಾ ಆತನಿಗೆ ದಕ್ಕಿದೆ. ಯಾವುದೇ ನೋಟ್ಸ್, ಬುಕ್ಸ್ ಆಗಲೀ, ಕೋಚಿಂಗ್ ಆಗಲೀ ಇಲ್ಲದೇ ಅದ್ಯಯನ ಮಾಡಿದ ಆತನ ಬಳಿ ಇದ್ದದ್ದು ಒಂದೇ, ಅದೇ ಆತನ ಕನಸು, ಆತನ ಗುರಿ ಹಾಗೂ ಅದಕ್ಕಾಗಿ ಶ್ರಮ ಪಡುವುದು.

ತನ್ನ ಕನಸನ್ನು ಸಾಕಾರ ಮಾಡಿಕೊಳ್ಳಲು ದಿನವೊಂದಕ್ಕೆ ಅದೆಷ್ಟೋ ಜನ ಸೂಟು ಬೂಟು ಧರಿಸಿದವರ ಲಗ್ಗೇಜನ್ನು ತನ್ನ ಹೆಗಲ ಮೇಲೆ ಹೊತ್ತ ಆತ, ಆ ಮೂಲಕ ತನ್ನ ಹೆಗಲ ಮೇಲೆ ಸ್ಟಾರ್ ಗಳನ್ನು ಪಡೆದುಕೊಂಡು, ಮುಂದೆ ಒಂದು ದಿನ ತಾನು ಕೂಡಾ ಸೂಟ್ ಬೂಟ್ ಧರಿಸುವ ದಿನಕ್ಕಾಗಿ ನಿರೀಕ್ಷೆ ಇಟ್ಟುಕೊಂಡಿದ್ದರು. ಹಾಗಾದರೆ ಬನ್ನಿ ಕೂಲಿ ಕೆಲಸ ಮಾಡುತ್ತಾ ಕೇರಳ ಪಬ್ಲಿಕ್ ಸರ್ವೀಸ್ ಕಮೀಷನ್ ಪಾಸ್ ಮಾಡಿದ ಸಾಧಕನ ಬಗ್ಗೆ ನಾವಿಂದು ತಿಳಿಯೋಣ. ಕೇರಳ ಮೂಲದ ಶ್ರೀನಾಥ್ ಕಡು ಬಡುತನದ ಕುಟುಂಬದಿಂದ ಬಂದ ವ್ಯಕ್ತಿ. ಹತ್ತನೇ ತರಗತಿ ವರೆಗೆ ಓದಿದ ನಂತರ ಬೇರೆ ದಾರಿಯಿಲ್ಲದೆ ಕುಟುಂಬಕ್ಕೆ ನೆರವಾಗಲು ಎರ್ನಾಕುಲಂ ನಲ್ಲಿ ರೈಲ್ವೆ ಕೂಲಿಯಾಗಿ ವೃತ್ತಿ ಆರಂಭಿಸಿದರು.

ಓದುವ ಆಸೆ ಇದ್ದರೂ, ಮನೆಯ ಪರಿಸ್ಥಿತಿಯ ಕಾರಣ ಕೂಲಿ ಕೆಲಸ ಮಾಡಲೇಬೇಕಿತ್ತು. ಆದರೆ ಮನಸ್ಸಿನಲ್ಲಿ ಓದುವ ಆಸೆ, ಭವಿಷ್ಯದ ಬಗ್ಗೆ ಕನಸುಗಳು ನೂರು ಹಾಗೆ ಇದ್ದವು‌. ಆದರೆ ಓದಲು ಅವಶ್ಯಕವಾದ ಸೌಲಭ್ಯಗಳು ಇರಲಿಲ್ಲ. ಈ ವೇಳೆಯಲ್ಲೇ ರೈಲು ನಿಲ್ದಾಣದಲ್ಲಿ ಉಚಿತ ವೈ ಫೈ ಸೇವೆ ಆರಂಭವಾಯಿತು. ಆಗ ಅದನ್ನೇ ಬಳಸಿಕೊಳ್ಳಲು ಶ್ರೀನಾಥ್ ನಿರ್ಧಾರ ಮಾಡಿದರು. ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಕೂಲಿ ಕೆಲಸ ಮಾಡಿ, ಸುಸ್ತಾದ ಅವರಿಗೆ ರಾತ್ರಿ ಓದುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಶ್ರೀನಾಥ್ ಗುರಿಯನ್ನು ಬಿಡಲು ಸಿದ್ಧವಿರಲಿಲ್ಲ.

ಶ್ರೀನಾಥ್ ತನ್ನ ಕೆಲಸದ ನಡುವೆ ಸಮಯ ಸಿಕ್ಕಾಗ ಫ್ರೀ ವೈ ಫೈ ಮೂಲಕ ವೀಡಿಯೋ ಲೆಕ್ಚರರ್ ಕೇಳಿದರು, ತಾನೇ ನೋಟ್ಸ್ ಮಾಡಿಕೊಂಡರು. ಬಿಡುವು ಸಿಕ್ಕಾಗಲೆಲ್ಲಾ ಓದಿದರು. ಕೆಲಸದ ವೇಳೆ ಹೆಡ್ ಫೋನ್ ಧರಿಸಿ ಆಡಿಯೋ ಲೆಕ್ಚರರ್ ಕೇಳಿದರು. ಹೀಗೆ ಓದಿನೊಂದಿಗೆ ನಿರಂತರ ಸಂಪರ್ಕ ದಲ್ಲಿ ಇದ್ದರು. ಹೀಗೆ ಶಿಕ್ಷಣ ಪಡೆದ ಅವರು ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದರು ಆದರೆ ಸಫಲತೆ ದೊರೆಯಲಿಲ್ಲ. ಆದರೆ ನಿರಾಶರಾಗಲಿಲ್ಲ ಶ್ರೀನಾಥ್. ಮತ್ತೆ ತಮ್ಮ ಅಧ್ಯಯನ ಹಾಗೂ ತಯಾರಿಯನ್ನು ಮುಂದುವರೆಸಿದರು.

ಹೀಗೆ ಪ್ರಯತ್ನ ಮುಂದುವರೆಸಿದ ಶ್ರೀ ನಾಥ್ ಅವರ ಪರಿಶ್ರಮಕ್ಕೆ ಫಲ ದಕ್ಕುವ ದಿನ ಬಂತೇ ಬಂತು ಅವರು 2018 ರಲ್ಲಿ ಕೆಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿದರು. ಅವರ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಜನರು ಶ್ರೀನಾಥ್ ಅವರ ಈ ಸಾಧನೆ ಕಂಡು ಆಶ್ಚರ್ಯ ಪಟ್ಟರು. ರೈಲ್ವೆ ಕೂಲಿ ಕೆಲಸ ಮಾಡುತ್ತಲೇ ಎಲ್ಲಾ ಸವಾಲುಗಳನ್ನು ಎದುರಿಸಿ, ಗುರಿಯತ್ತ ಸಾಗಿದ ಶ್ರೀನಾಥ್ ಅವರ ಸಾಧನೆಯನ್ನು ಜನರು ಮೆಚ್ಚಿದ್ದಾರೆ. ಶ್ರೀನಾಥ್ ಅಕ್ಷರಶಃ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

Leave A Reply

Your email address will not be published.