ರೈತರನ್ನು ವ್ಯಾಕ್ಸಿನ್ ಪಡೆಯಲು ಕಳಿಸಿ, ಅವರ ಬದಲಿಗೆ ತಾವೇ ಕೆಸರು ಗದ್ದೆಗಳಿದು ಭತ್ತ ನಾಟಿ ಮಾಡಿದ ಶಿಕ್ಷಕರು

Entertainment Featured-Articles Health News
42 Views

ಕೊರೊನಾ ವಿರುದ್ಧದ ಹೋರಾಟದಲ್ಲಿ ವ್ಯಾಕ್ಸಿನ್ ಪಡೆಯುವುದು ಪ್ರಮುಖವಾದ ಅ ಸ್ತ್ರ ಎನಿಸಿಕೊಂಡಿದೆ. ಇಡೀ ದೇಶದಲ್ಲಿ ಈಗಾಗಲೇ ವ್ಯಾಕ್ಸಿನ್ ಅಭಿಯಾನವು ನಡೆಯುತ್ತಿದೆ. ದೇಶದ ಬಹಳಷ್ಟು ಜನರು ಈಗಾಗಲೇ ಎರಡು ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಇನ್ನೂ ಅನೇಕರು ಮೊದಲ ಡೋಸ್ ಪಡೆದಾಗಿದ್ದು, ಅನೇಕ ಮಂದಿ ಎರಡನೆಯ ಡೋಸ್ ನ ನಿರೀಕ್ಷಣೆಯಲ್ಲಿ ಇದ್ದಾರೆ. ಆದರೆ ರೈತರು ಮತ್ತು ಕೂಲಿ ಕಾರ್ಮಿಕರಿಗೆ ವ್ಯಾಕ್ಸಿನ್ ಪಡೆಯಲು ತಮ್ಮ ಕೆಲಸವನ್ನು ಬಿಟ್ಟು, ಆಸ್ಪತ್ರೆಗಳ ಬಳಿ ಹೋಗಿ ಕಾಯುವುದು ಅಸಾಧ್ಯವಾದ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಜಿಲ್ಲೆಯೊಂದರಲ್ಲಿ ನಡೆದಿರುವ ಘಟನೆಯು ಇಡೀ ದೇಶದ ಗಮನವನ್ನು ಸೆಳೆದಿದೆ. ರೈತರು ಹಾಗೂ ಕೃಷಿ ಕಾರ್ಮಿಕರನ್ನು ವ್ಯಾಕ್ಸಿನ್ ಗಾಗಿ ಕಳುಹಿಸಿ ಅವರ ಕೆಲಸವನ್ನು ಶಾಲಾ ಶಿಕ್ಷಕರು ಮಾಡಲು ಮುಂದಾಗಿರುವ ಒಂದು ಅದ್ಭುತ ಬೆಳವಣಿಗೆಯೊಂದು ನಡೆದಿದ್ದು, ಇದು ಅಪಾರ ಮೆಚ್ಚುಗೆಯನ್ನು ಗಳಿಸುತ್ತಿದೆ.

ಹೌದು, ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ಸ್ಥಳೀಯ ಆರೋಗ್ಯ ಇಲಾಖೆಗೆ ತಾವು ತಮ್ಮ ಕೆಲಸವನ್ನು ಮುಗಿಸುವವರೆಗೂ ಕೂಡಾ ವ್ಯಾಕ್ಸಿನ್ ಪಡೆಯಲು ಬರುವುದಿಲ್ಲ ಎನ್ನುವ ಸೂಚನೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ರೈತರು ಹಾಗೂ ಕೃಷಿ ಕಾರ್ಮಿಕರನ್ನು ವ್ಯಾಕ್ಸಿನ್ ಪಡೆಯಲು ಕಳುಹಿಸಿದ ಶಿಕ್ಷಕರು ತಾವೇ ಗದ್ದೆಯಲ್ಲಿ ಭತ್ತವನ್ನು ನಾಟಿ ಮಾಡಿದ್ದಾರೆ. ಶಾಲಾ ಶಿಕ್ಷಕರು ಮಾಡಿದಂತಹ ಇಂತಹದೊಂದು ಕಾರ್ಯದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದೆ.

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ 380 ಕಿಲೋಮೀಟರ್ ದೂರದಲ್ಲಿರುವ ಮಾಣಿಕ್ ಪುರ ಎನ್ನುವ ಹಳ್ಳಿಯಲ್ಲಿ ಆಗಸ್ಟ್ 7 ಸೋಮವಾರದ ದಿನದಂದು ಶಿಕ್ಷಕರು ಗದ್ದೆಗಳಲ್ಲಿ ಭತ್ತವನ್ನು ನಾಟಿ ಮಾಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ತಮ್ಮ ವ್ಯಾಕ್ಸಿನೇಷನ್ ಗಾಗಿ ಸುತ್ತಾಡುತ್ತಾ, ಗ್ರಾಮದಲ್ಲಿ ತೆರೆಯಲಾಗಿದ್ದ ವ್ಯಾಕ್ಸಿನ್ ಬೂತ್ ಬಳಿ ಬಂದಾಗ ಅದು ಖಾಲಿ ಇರುವುದನ್ನು ನೋಡಿ ಆಶ್ಚರ್ಯ ಪಟ್ಟಿದ್ದಾರೆ. ಅವರು ಅದರ ಕುರಿತಾಗಿ ವಿಚಾರಿಸಿದಾಗ ಆರೋಗ್ಯ ಕಾರ್ಯಕರ್ತರು, ಗ್ರಾಮದಲ್ಲಿ 33 ಜನರು ಸೆಕೆಂಡ್ ಡೋಸ್ ಪಡೆಯ ಬೇಕಾಗಿದೆ ಹಾಗೂ ಅನೇಕರಿಗೆ ಮೊದಲನೇ ಡೋಸ್ ವಿಚಾರದಲ್ಲಿ ಜಾಗೃತಿಯನ್ನು ಮೂಡಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

ಅಲ್ಲದೇ ಒಂದಷ್ಟು ಜನರು ಹೊಲಗದ್ದೆಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡಿದ್ದು, ಅವರು ಕೆಲಸ ಮುಗಿಯುವವರೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ ಎಂದು ವಿವರಿಸಿದ್ದಾರೆ. ಆಗ ಶಿಕ್ಷಕರು ಗ್ರಾಮದ ಹೊಲ ಗದ್ದೆಗಳ ಕಡೆಗೆ ಹೋಗಿ ರೈತರು ಹಾಗೂ ಕೃಷಿ ಕಾರ್ಮಿಕರ ಜತೆ ಮಾತನಾಡಿದ್ದಾರೆ. ಆ ವೇಳೆಯಲ್ಲಿ
ರೈತರು ತಮ್ಮ ಕೃಷಿ ಕಾರ್ಯದ ಬಗ್ಗೆ ತಿಳಿಸಿದ್ದಾರೆ. ಮೂಲತಃ ಗ್ರಾಮದಿಂದಲೇ ಬಂದಂತಹ ಕೆಲವು ಶಿಕ್ಷಕರಿಗೆ ರೈತರ ಸಮಸ್ಯೆ ಅರ್ಥವಾಗಿ ಮಾತುಕತೆ ಮುಗಿದ ನಂತರ ರೈತರ ಹೊಲ-ಗದ್ದೆಗಳಲ್ಲಿ ತಾವು ಕೆಲಸ ಮಾಡುವುದಾಗಿ ಭರವಸೆ ಯನ್ನು ನೀಡಿ, ಸೆಕೆಂಡ್ ಡೋಸ್ ಪಡೆಯಬೇಕಾಗಿದ್ದ ರೈತರು ಹಾಗೂ ಕೃಷಿ ಕಾರ್ಮಿಕರನ್ನು ವ್ಯಾಕ್ಸಿನ್ ಪಡೆಯಲು ಕಳುಹಿಸುವ ಮೂಲಕ ಅವರ ಹೊಲ ಗದ್ದೆಗಳಲ್ಲಿ ಭತ್ತ ನಾಟಿ ಮಾಡುವ ಕೆಲಸವನ್ನು ಮಾಡಿ ಮುಗಿಸಿದ್ದಾರೆ.

ಈ ಮೂಲಕ ಸಮಾಜದಲ್ಲಿ ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಶಿಕ್ಷಕರು ಒಂದು ಉತ್ತಮ ಮಾದರಿ ಎನಿಸುವ ಕೆಲಸವನ್ನು ಮಾಡಿ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಎಲ್ಲೆಡೆ ಇಂತಹ ಜಾಗೃತಿ ಕಾರ್ಯಕ್ರಮಗಳು ಹಾಗೂ ಸಹಕಾರ ಮನೋಭಾವ ಮಾಡಿದರೆ ಒಂದು ಧನಾತ್ಮಕ ಬದಲಾವಣೆ ಎನ್ನುವುದು ನಮ್ಮ‌ ಸಮಾಜದಲ್ಲಿ ಖಂಡಿತ ಮೂಡುತ್ತದೆ. ಎಲ್ಲರೂ ತಾವಾಯಿತು,‌ ತಮ್ಮ‌ ಕೆಲಸವಾಯಿತು ಎಂದುಕೊಂಡರೆ, ಸಹಕಾರ ತತ್ವ ಎನ್ನುವುದು ಒಂದು ಪುಸ್ತಕದ ಸಾಲಾಗಿ ಉಳಿಯುವುದಷ್ಟೇ.

Leave a Reply

Your email address will not be published. Required fields are marked *