ರಾಜಾ ರಾಣಿ ಸೀಸನ್ 2 ಗೆ ಅನುಪಮಾ ಯಾಕಿಲ್ಲ? ಅಸಲಿ ಕಾರಣ ಬಿಚ್ಚಿಟ್ಟ ಅನುಪಮಾ ಗೌಡ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ರಾಜಾ ರಾಣಿ ಯ ಹೊಸ ಸೀಸನ್ ಅಂದ್ರೆ ಸೀಸನ್ 2 ಆರಂಭವಾಗಿದೆ. ಮೊದಲ ಸೀಸನ್ ಸೃಜನ್ ಲೋಕೇಶ್, ನಟಿ ತಾರಾ ಅವರ ತೀರ್ಪುಗಾರಿಕೆಯಲ್ಲಿ, ಜೋಡಿಗಳ ಭರ್ಜರಿ ಪರ್ಫಾಮೆನ್ಸ್ ಹಾಗೂ ಅನುಪಮಾ ಗೌಡ ಅವರ ನಿರೂಪಣೆಯಲ್ಲಿ ದೊಡ್ಡ ಯಶಸ್ಸನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಅಂದರೆ ಸೀಸನ್ ಎರಡರಲ್ಲಿ ಒಂದು ಮುಖ್ಯ ಬದಲಾವಣೆ ಆಗಿದೆ. ಅದೇನೆಂದರೆ ಈ ಹೊಸ ಸೀಸನ್ ಗೆ ನಿರೂಪಕಿ ಬದಲಾಗಿದ್ದಾರೆ. ಅನುಪಮಾ ಅವರ ಜಾಗಕ್ಕೆ ಬೇರೊಬ್ಬ ನಿರೂಪಕಿಯ ಎಂಟ್ರಿ ಆಗಿದೆ.
ಈ ಬಾರಿ ಜಾನ್ವಿ ರಾಯಲ ರಾಜಾ ರಾಣಿ ಶೋ ನಿರೂಪಕಿಯಾಗಿದ್ದು, ಪ್ರೇಕ್ಷಕರು ಅನುಪಮಾ ಗೌಡ ಏಕೆ ಈ ಬಾರಿ ಇಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವಿಷಯವಾಗಿ ಒಂದು ಚರ್ಚೆ ಹುಟ್ಟುಕೊಂಡಿದೆ. ಈಗ ಇವೆಲ್ಲವುಗಳ ಬೆನ್ನಲ್ಲೇ ಅನುಪಮ ಗೌಡ ಅವರು ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ತಾನೇಕೆ ಶೋ ಮಾಡುತ್ತಿಲ್ಲ ಎನ್ನುವ ಕಾರಣವನ್ನು ಅವರು ವಿವರಿಸಿದ್ದಾರೆ. ಅನುಪಮಾ ಅವರು, ಎಲ್ಲೆಲ್ಲೂ ರಾಜಾ ರಾಣಿ ಶೋ ಬಗ್ಗೆ ಕೇಳುತ್ತಿದ್ದಾರೆ, ಎಲ್ಲೆಡೆ ಕಾಮೆಂಟ್ ಗಳನ್ನು ಮಾಡ್ತಾ ಇದ್ದಾರೆ.
ಯೂಟ್ಯೂಬ್ ಚಾನೆಲ್ ಗಳಲ್ಲಿ ಚರ್ಚೆ ನಡೀತಾ ಇದೆ. ನಾನು ಜೀ ಕನ್ನಡ ಹಾಗೂ ಸುವರ್ಣ ವಾಹಿನಿಗಳಲ್ಲಿ ಹೊಸ ಶೋ ಮಾಡುತ್ತಿದ್ದೇನೆ ಎನ್ನುವ ಸುದ್ದಿಗಳು ಹರಿದಾಡಿವೆ. ಆದರೆ ನಾನು ಆ ಶೋ ಗಳಲ್ಲಿ ಮಾಡುತ್ತಿದ್ದರೆ ಈ ಹೊತ್ತಿಗೆ ಚಿತ್ರೀಕರಣ ಆರಂಭವಾಗಬೇಕಿತ್ತು. ಅದರ ಬಗ್ಗೆ ಅಪ್‌ಡೇಟ್ ನೀಡಿಲ್ಲ ಮತ್ತು ಮಾತನಾಡಿಲ್ಲ ಅಂದ್ರೆ ಖಂಡಿತವಾಗಿ ನಾನು ಅಲ್ಲಿ ಯಾವುದೇ ಶೋ ಮಾಡುತ್ತಿಲ್ಲ ಎಂದು ಅನುಪಮಾ ಹೇಳಿದ್ದಾರೆ. ಇನ್ನು ರಾಜಾ ರಾಣಿ ಯಾಕೆ ಮಾಡ್ತಿಲ್ಲ ಅಂತ ಕೇಳ್ತಾ ಇದ್ದೀರಿ.
ನನಗೂ ಗೊತ್ತಿಲ್ಲ. ವೈಯಕ್ತಿಕವಾಗಿ ನಾನು ಬ್ಯುಸಿ ಇದ್ದೆ. ಇನ್ನೂ ಏನೇನೋ ಕಾರಣಗಳಿದ್ದವು, ಆದರೆ ಒಂದು ಸ್ಪಷ್ಟನೆ ಏನೆಂದರೆ, ನಾನು ರಾಜಾ ರಾಣಿ ಶೋವನ್ನು ಬಿಟ್ಟಿಲ್ಲ. ನನಗೆ ಅಲ್ಲಿಂದ ಕರೆ ಬಂದಿದ್ದರೆ, ಬಹಳ ಖುಷಿಯಿಂದ ಇಷ್ಟಪಟ್ಟು ಶೋ ಮಾಡ್ತಿದ್ದೆ. ಎಲ್ಲರೂ ಸೀಸನ್ 1 ಅನ್ನು ಇಷ್ಟಪಟ್ಟಿದ್ರಿ. ನನಗೆ ಕರೆ ಬಂದಿಲ್ಲ. ಹಾಗಾಗಿ ನಾನು ಸೀಸನ್ 2 ಶೋ ನಿರೂಪಣೆ ಮಾಡುತ್ತಿಲ್ಲ ಎಂದಿರುವ ಅನುಪಮಾ ಅವರು ಅದು ಬಿಟ್ಟರೆ ಬೇರೇನೂ ದೊಡ್ಡ ವಿಚಾರಗಳಿಲ್ಲ ಎಂದಿದ್ದಾರೆ.
ಇದೇ ವೇಳೆ ಅವರು ತಾನು ಇನ್ನೊಂದಷ್ಟು ವಿಚಾರಗಳನ್ನು ನಾನು ಚರ್ಚೆ ಮಾಡೋದಕ್ಕೂ ಇಷ್ಟಪಡೋದಿಲ್ಲ ಎಂದು ಹೇಳಿದ್ದಾರೆ. ನಾನೇಕೆ ಈ ಬಾರಿ ಶೋ ಮಾಡುತ್ತಿಲ್ಲ ಎನ್ನುವುದಕ್ಕೆ ಈ ಮೂಲಕ ನಿಮಗೆ ಸ್ಪಷ್ಟನೆ ಸಿಕ್ಕಿದೆ ಎಂದು ನಾನು ಭಾವಿಸಿದ್ದೇನೆ. ನೀವೆಲ್ಲರೂ ಎಷ್ಟು ಬೇಜಾರಾಗಿದ್ದೀರೋ ನಾನು ಅಷ್ಟೇ ಶೋ ವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ರಾಜಾ ರಾಣಿ ಸ್ಟೇಜ್ ಮೇಲೆ ಬಂದು ತಾರಮ್ಮ, ಸೃಜನ್, ಜೋಡಿಗಳು ಎಲ್ಲರನ್ನೂ ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಾನು ಮತ್ತೊಂದು ಉತ್ತಮ ಶೋ ಜೊತೆಗೆ ಬರುತ್ತೇನೆ ಎಂದು ಅನುಪಮಾ ಅವರು ಹೇಳಿದ್ದಾರೆ.