ಡಿಸೆಂಬರ್ 21, 2018 ರ ದಿನವನ್ನು ಸ್ಯಾಂಡಲ್ವುಡ್ ಹೇಗೆ ತಾನೇ ಮರೆಯಲು ಸಾಧ್ಯ?? ಏಕೆಂದರೆ ಆ ದಿನ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಕನ್ನಡ ಮಾತ್ರವೇ ಅಲ್ಲದೇ ಅನ್ಯ ಭಾಷೆಗಳಲ್ಲಿ ಸಹಾ ಬಿಡುಗಡೆಯಾಗಿ, ಅನಂತರ ದೊಡ್ಡ ಮಟ್ಟದ ಯಶಸ್ಸನ್ನು ಕಂಡು ಹಾಗೂ ಹೊಸ ದಾಖಲೆಯನ್ನು ಬರೆದ ಸಿನಿಮಾವಾಯಿತು. ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದರು. ಕೆಜಿಎಫ್ ಭಾರತೀಯ ಚಿತ್ರರಂಗದ ಗಮನವನ್ನು ಸ್ಯಾಂಡಲ್ವುಡ್ ಕಡೆಗೆ ಸೆಳೆಯಿತು.
ಅಂದಿನ ಅದೇ ದಿನ ಬಾಲಿವುಡ್ ನಲ್ಲಿ ಸ್ಟಾರ್ ನಟ ಎನಿಸಿಕೊಂಡಿರುವ ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ಜೀರೋ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಕೆಜಿಎಫ್ ಅಬ್ಬರದ ಮುಂದೆ ಜೀರೋ ಮಂಕಾಗಿ ಹೋಗಿತ್ತು. ಸುಮಾರು 200 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಸಿದ್ದವಾಗಿದ್ದ ಭರ್ಜರಿ ಸಿನಿಮಾ ಜೀರೋ 180 ಕೋಟಿಗಳನ್ನು ಗಳಿಸುವಲ್ಲಿ ಹೈರಾಣಾಗಿತ್ತು. ಆದರೆ ಸುಮಾರು 80 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಕೆಜಿಎಫ್ 1, 250 ರಿಂದ 350 ಕೋಟಿ ಗಳಿಸಿದೆ ಎಂದು ಸುದ್ದಿಯಾಗಿತ್ತು.
ಹೀಗೆ ಕೆಜಿಎಫ್ 1 ದೊಡ್ಡ ಯಶಸ್ಸನ್ನು ಪಡೆದ ನಂತರ ಸಹಜವಾಗಿಯೇ ಕೆಜಿಎಫ್ 2 ಕಡೆಗೆ ಇನ್ನಷ್ಟು ನಿರೀಕ್ಷೆಗಳು ಹೆಚ್ಚಿವೆ. ಕೆಜಿಎಫ್ 1 ರ ಬಿಡುಗಡೆ ದಿನ ಶಾರೂಖ್ ಅಭಿನಯದ ಜೀರೋ ಸ್ಪರ್ಧೆ ಒಡ್ಡಿತ್ತು. ಈಗ ಈ ಬಾರಿ ಅಂದರೆ ಕೆಜಿಎಫ್ 2 ಬಿಡುಗಡೆಯ ಅದೇ ದಿನದಂದು ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಲಾಲ್ ಸಿಂಗ್ ಚಡ್ಡಾ ಕೂಡ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 14, 2022ಕ್ಕೆ ಕೆಜಿಎಫ್ 2 ಬಿಡುಗಡೆಗೆ ಸಜ್ಜಾಗಿದ್ದು, ಇದೇ ದಿನ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಕೂಡಾ ತೆರೆ ಕಾಣಲಿದೆ.
ಎರಡು ದೊಡ್ಡ ಸಿನಿಮಾಗಳು ಏಪ್ರಿಲ್ 14 ರಂದು ಬಿಡುಗಡೆಯಾಗುತ್ತಿರುವುದು ಬಾಕ್ಸಾಫೀಸಿನಲ್ಲಿ ದೊಡ್ಡ ಕ್ಲಾಷ್ ಅನ್ನು ಖಂಡಿತ ಸೃಷ್ಟಿಸಲಿದೆ. ಕಳೆದ ಬಾರಿ ಶಾರುಖ್ ಖಾನ್ ಸಿನಿಮಾವನ್ನು ಹಿಂದಿಕ್ಕಿ ಕೆಜಿಎಫ್ ದೊಡ್ಡ ಗೆಲುವನ್ನು ಸಾಧಿಸಿತ್ತಿ. ಇನ್ನು ಈ ಬಾರಿ ಯಶ್ ಹಾಗೂ ಅಮೀರ್ ಖಾನ್ ಇಬ್ಬರ ಸಿನಿಮಾಗಳಲ್ಲಿ ಯಾವ ಸಿನಿಮಾ ಸ್ಪರ್ಧೆಯಲ್ಲಿ ಗೆಲ್ಲಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ರೋಚಕ ಎನಿಸಿದೆ.