ರಶ್ಮಿಕಾ ಮಾಡಿದ ಅದೊಂದು ನಿರ್ಧಾರ ಬುಡಕ್ಕೆ ಕೊಡಲಿ ಪೆಟ್ಟಾಯ್ತಾ? ಇತ್ತೀಚಿಗೆ ನಟಿಯ ಸದ್ದು ಕಡಿಮೆಯಾಗಿದ್ದೇಕೆ?

Entertainment Featured-Articles Movies News

ಪುಷ್ಪ ಸಿನಿಮಾ ನಂತರ ನಟಿ ರಶ್ಮಿಕಾ ಮಂದಣ್ಣ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕನ್ನಡ ಸಿನಿಮಾ ರಂಗದಿಂದ ನಟನೆಗೆ ಎಂಟ್ರಿ ನೀಡಿದ ರಶ್ಮಿಕಾ ಅದೃಷ್ಟ ಖಂಡಿತ ಅನ್ಯ ನಟಿಯರಿಗಿಂತ ತುಸು ಹೆಚ್ಚಾಗಿಯೇ ಇತ್ತು ಎನ್ನುವಂತೆ ಬಹಳ ಬೇಗ ತೆಲುಗು ಇಂಡಸ್ಟ್ರಿಗೆ ಪ್ರವೇಶ ನೀಡಿ, ಅಲ್ಲಿನ ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡು, ಅನಂತರ ತಮಿಳು, ಮಲೆಯಾಳಂಗಳಿಗೂ ಎಂಟ್ರಿ ನೀಡಿದ ರಶ್ಮಿಕಾ ಪಯಣ ಪ್ರಸ್ತುತ ಬಾಲಿವುಡ್ ಅಂಗಳದಲ್ಲೂ ಜೋರಾಗಿದೆ ಎನ್ನುವ ಸುದ್ದಿಗಳು ಆಗಾಗ ಸದ್ದು ಮಾಡುತ್ತವೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಎಲ್ಲೆಲ್ಲೂ ರಶ್ಮಿಕಾ ಕುರಿತಾಗಿ ಸುದ್ದಿಗಳು ಇರುತ್ತಿದ್ದವು, ರಶ್ಮಿಕಾ ಇದ್ದಲ್ಲಿ ಸುದ್ದಿ ಎನ್ನುವಂತೆ ಮಾದ್ಯಮಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದರು ರಶ್ಮಿಕಾ.

ಆದರೆ ಇವೆಲ್ಲವುಗಳ ನಡುವೆಯೇ ಕಳೆದ ಕೆಲವು ದಿನಗಳಿಂದಲೂ ನಟಿ ರಶ್ಮಿಕಾ ಕುರಿತಾಗಿ ಅಂತಹ ಆಸಕ್ತಿಕರ ಅಪ್ಡೇಟ್ ಗಳು ಯಾವುದು ಇಲ್ಲ ಎನ್ನುವುದು ಅಚ್ಚರಿ ಯನ್ನು ಮೂಡಿಸಿದೆ. ದಕ್ಷಿಣದಲ್ಲಿ ಸದ್ಯಕ್ಕೆ ನಟಿ ರಶ್ಮಿಕಾ ಯಾವ ಸ್ಟಾರ್ ನಟನ ಸಿನಿಮಾ ಕೂಡಾ ಮಾಡುತ್ತಿಲ್ಲ ಎನ್ನುವಂತೆ ಕಾಣುತ್ತಿದೆ.‌ ತಮಿಳು ನಟ ವಿಜಯ್ ಜೊತೆ ಒಂದು ಸಿನಿಮಾ ಮತ್ತು ಪುಷ್ಪ 2 ಬಿಟ್ಟರೆ ರಶ್ಮಿಕಾ ಅಭಿನಯಿಸುವ ಯಾವುದೇ ಹೊಸ ಸಿನಿಮಾಗಳ ಘೋಷಣೆ ಆಗಿಲ್ಲ. ದಕ್ಷಿಣದಲ್ಲಿ ಸಾಲು ಸಾಲು ಸ್ಟಾರ್ ಗಳ ಜೊತೆ ಕಾಣಿಸಿಕೊಳ್ಳುತ್ತಿದ್ದ ನಟಿ ಬಾಲಿವುಡ್ ಕಡೆ ಮುಖ ಹಾಕಿದ ಮೇಲೆ ದಕ್ಷಿಣದಲ್ಲಿ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರಾ? ಎನ್ನುವ ಅನುಮಾನ ಖಂಡಿತ ಮೂಡಿದೆ.

ಹೌದು, ಬಾಲಿವುಡ್ ನಲ್ಲಿ ರಶ್ಮಿಕಾ ಅಭಿನಯದ ಮಿಶನ್ ಮಜ್ನು, ಅಮಿತಾಬ್ ಬಚ್ಚನ್ ಜೊತೆಗಿನ ಗುಡ್ ಬೈ ಸಿನಿಮಾಗಳು ಇನ್ನೂ ಬಿಡುಗಡೆಯಾಗಿಲ್ಲ. ಗುಡ್ ಬೈ ಸಿನಿಮಾದ ಟ್ರೈಲರ್ ಇತ್ತೀಚಿಗೆ ಬಿಡುಗಡೆಯಾಗಿದ್ದು, ಅದರ ಬಗ್ಗೆ ಹೆಚ್ಚು ಸುದ್ದಿಗಳೇನೂ ಇಲ್ಲ. ಮತ್ತೊಂದು ಕಡೆ ರಣಬೀರ್ ಕಪೂರ್ ಅಭಿನಯದ ಹೊಸ ಸಿನಿಮಾವೊಂದರಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಹೀಗೆ ಬಾಲಿವುಡ್ ನಲ್ಲಿ ಬ್ಯುಸಿಯಾಗಿರುವ ನಟಿ ತಮ್ಮ ಸ್ಟಾರ್ ಡಂ ಹೆಚ್ಚಾಗಿರುವ ದಕ್ಷಿಣದಲ್ಲಿ ನಟಿಸುತ್ತಿರುವ ಸಂಖ್ಯೆ ಸಹಾ ಕಡಿಮೆಯಾಗಿದೆ. ಇದು ಹೀಗೆ ಆದರೆ ರಶ್ಮಿಕಾ ಸ್ಥಾನದಲ್ಲಿ ನಿರ್ಮಾಪಕರ ಆಯ್ಕೆ ಬೇರೆ ನಟಿಯರಾದರೂ ಅಚ್ಚರಿಯೇನಿಲ್ಲ.

ರಶ್ಮಿಕಾ ಬಾಲಿವುಡ್ ಗೆ ಮಣೆ ಹಾಕುವ ಭರದಲ್ಲಿ ದಕ್ಷಿಣದಲ್ಲಿ ತಮಗಿರುವ ಬೇಡಿಕೆಯನ್ನು ಕಳೆದುಕೊಳ್ಳಲು ತಾವೇ ಕಾರಣರಾಗುತ್ತಿದ್ದಾರಾ? ಎನ್ನುವುದು ಅವರ ಅಭಿಮಾನಿಗಳ ಚಿಂತೆ ಸಹಾ ಆಗಿದೆ. ಈಗ ಟಾಲಿವುಡ್ ನಲ್ಲಿ ಸಹಾ ಕೃತಿ ಶೆಟ್ಟಿ, ಪೂಜಾ ಹೆಗ್ಡೆ ಹಾಗೂ ಇನ್ನಿತರೆ ನಟಿಯರು ರಶ್ಮಿಕಾಗೆ ಟಕ್ಕರ್ ನೀಡುತ್ತಿದ್ದು, ರಶ್ಮಿಕಾ ಬಾಲಿವುಡ್ ನಲ್ಲಿ ಸಿನಿಮಾಗಳ ಕಡೆಗೆ ಒಲವು ತೋರಿದರೆ ಖಂಡಿತ ಅವರ ಪಾತ್ರಗಳು ಈ ನಟಿಯರ ಪಾಲಾಗುತ್ತದೆ. ಹಿಂದೆ ನಟಿ ಅಶೀನ್ ಸಹಾ ದಕ್ಷಿಣದಲ್ಲಿ ಸ್ಟಾರ್ ನಟರ ಜೊತೆ ನಟಿಸಿ, ದೊಡ್ಡ ಹೆಸರು ಮಾಡಿ ಬಾಲಿವುಡ್ ಗೆ ಹೋದ ಮೇಲೆ ಅಲ್ಲಿ ಹೆಚ್ಚು ಸದ್ದು ಮಾಡಲಿಲ್ಲ, ದಕ್ಷಿಣದ ಸಿನಿಮಾಕ್ಕೆ ಮರಳಲಿಲ್ಲ. ವಿವಾಹವಾಗಿ ನಟಿ ಸಿನಿಮಾದಿಂದ ದೂರ ಉಳಿದರು.

ಈಗ ರಶ್ಮಿಕಾ ಸಹಾ ದಕ್ಷಿಣದಲ್ಲಿ ಗಳಿಸಿದ ಜನಪ್ರಿಯತೆಯಿಂದಾಗಿಯೇ ಬಾಲಿವುಡ್ ಸಿನಿಮಾಗಳಲ್ಲಿ ಅವಕಾಶ ಪಡೆದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಕೂಡಾ ದಕ್ಷಿಣದ ಸಿನಿಮಾಗಳ ಅಬ್ಬರಕ್ಕೆ ತತ್ತರಿಸಿದೆ. ಇಂತಹ ವೇಳೆಯಲ್ಲಿ ಸಾಕಷ್ಟು ಅವಕಾಶ ಇರುವ ದಕ್ಷಿಣ ಸಿನಿಮಾ ರಂಗ ಕ್ಕಿಂತ ಬಾಲಿವುಡ್ ನಲ್ಲಿ ಮಿಂಚಲು ಹೊರಟಿರುವ ರಶ್ಮಿಕಾ ಮಂದಣ್ಣ‌ ನಿರ್ಧಾರ ಎಷ್ಟು ಸರಿ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಅವರ ಹಿಂದಿ ಸಿನಿಮಾಗಳು ಪಡೆಯುವ ಯಶಸ್ಸು ನಟಿಯ ಭವಿಷ್ಯವನ್ನು ನಿರ್ಧರಿಸಲಿದೆ ಎನ್ನುವುದು ಸತ್ಯ.

Leave a Reply

Your email address will not be published.