ರಶ್ಮಿಕಾ ನಟನೆಗೆ ಸಿಗಲಿಲ್ಲ ಪ್ರಿನ್ಸ್ ಮಹೇಶ್ ಬಾಬು ಮೆಚ್ಚುಗೆ: ಧನ್ಯವಾದ ಎಂದ್ರು ನೆಟ್ಟಿಗರು

0
144

ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ರಂಗದಲ್ಲಿ ಪಡೆದಿರುವ ಸ್ಟಾರ್ ಗಿರಿ, ಬೇಡಿಕೆ ಬಗ್ಗೆ ಈಗಾಗಲೇ ನಮಗೆ ತಿಳಿದಿದೆ‌. ಅದರಲ್ಲೂ ಸಾಲು ಸಾಲಾಗಿ ಸ್ಟಾರ್ ನಟರ ಸಿನಿಮಾಗಳ ನಾಯಕಿಯಾಗಿ, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ಇನ್ನಷ್ಟು ಬೇಡಿಕೆಯನ್ನು ಪಡೆದುಕೊಳ್ಳತ್ತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ನಟಿ ರಶ್ಮಿಕಾ. ಇನ್ನು ಇತ್ತೀಚಿಗಷ್ಟೇ ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸಿದ ಪುಷ್ಪ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದು ಮುನ್ನುಗ್ಗಿದೆ. ಸಿನಿಮಾ ಈಗಾಗಲೇ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಇದೀಗ ಅಮೆಜಾನ್ ಪ್ರೈಮ್ ನಲ್ಲೂ ಬಿಡುಗಡೆಯಾಗಿದೆ ಪುಷ್ಪ.

ಪುಷ್ಪ ಸಿನಿಮಾವನ್ನು ತೆಲುಗಿನ ಮತ್ತೋರ್ವ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ವೀಕ್ಷಣೆ ಮಾಡಿದ್ದು ಅವರು ಮೆಚ್ಚುಗೆಯ ಮಾತುಗಳನ್ನು ಟ್ವೀಟ್ ಮಾಡಿದ್ದಾರೆ. ಆದರೆ ಮಹೇಶ್ ಬಾಬು ಅವರ ಟ್ವೀಟ್ ಗಳು ಇದೀಗ ಬೇರೆಯದೇ ವಿಷಯಕ್ಕೆ ದೊಡ್ಡ ಸುದ್ದಿಯಾಗಿದೆ. ಈ ಹಿಂದೆ ಮಹೇಶ್ ಬಾಬು ಮತ್ತು ನಟಿ ರಶ್ಮಿಕಾ ಮಂದಣ್ಣ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಈ ಸಿನಿಮಾ ನಂತರ ಅವರ ನಡುವೆ ಒಂದು ಉತ್ತಮ ಸ್ನೇಹ ಕೂಡಾ ಇತ್ತು.

ಆದರೆ ಈಗ ನಟ ಮಹೇಶ್ ಬಾಬು ಅವರು ಪುಷ್ಪ ಸಿನಿಮಾವನ್ನು ನೋಡಿದ ನಂತರ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ವೇಳೆ ನಟಿ ರಶ್ಮಿಕಾ ಮಂದಣ್ಣರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಎಲ್ಲರ ಗಮನವನ್ನು ಸೆಳೆದಿದೆ. ಸಿನಿಮಾದ ನಾಯಕ, ನಿರ್ದೇಶಕ, ಸಂಗೀತ ಎಲ್ಲವನ್ನೂ ಹಾಡಿ ಹೊಗಳಿರುವ ನಟ ಮಹೇಶ್ ಬಾಬು ಅವರು ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಮಾತ್ರ ಎಲ್ಲೂ ಒಂದು ಸಣ್ಣ ಮೆಚ್ಚುಗೆಯ ಮಾತನ್ನು ಕೂಡಾ ಆಡಿಲ್ಲ.

ಮಹೇಶ್ ಬಾಬು ಅವರು ತಮ್ಮ ಟ್ವೀಟ್ ನಲ್ಲಿ, ಅಲ್ಲು ಅರ್ಜುನ್ ಸಿನಿಮಾ ಪುಷ್ಪ ಸ್ಟನ್ನಿಂಗ್, ಒರಿಜಿನಲ್ ಮತ್ತು ಸೆನ್ಸೇಷನಲ್ ಆಗಿದೆ, ಸುಕುಮಾರ್ ರಾ ಆಗಿ ಬಹಳ ಪ್ರಾಮಾಣಿಕವಾಗಿ ಮೂಡಿ ಬಂದಿದೆ ಎಂದೆಲ್ಲಾ ಮೆಚ್ಚುಗೆಗಳನ್ನು ನೀಡಿರುವ ಮಹೇಶ್ ಬಾಬು ಅವರು ಸಿನಿಮಾ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಗೂ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಆದರೆ ಎಲ್ಲೂ ಕೂಡಾ ರಶ್ಮಿಕಾ ನಟನೆಯ ಬಗ್ಗೆ ಮಾತ್ರ ಮಹೇಶ್ ಬಾಬು ಅವರು ಏನೂ ಹೇಳಿಲ್ಲ.

ಮಹೇಶ್ ಬಾಬು ಮಾಡಿದ ಟ್ವೀಟ್ ವೈರಲ್ ಆಗಿದೆ. ಕೆಲವರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ, ರಶ್ಮಿಕಾ ಬಗ್ಗೆ ನೀವು ಯಾವುದೇ ಮಾತನ್ನು ಆಡದಿರುವುದಕ್ಕೆ ಧನ್ಯವಾದಗಳು ಎಂದರೆ, ರಶ್ಮಿಕಾ ಅಭಿಮಾನಿಗಳು ಮಾತ್ರ ಮಹೇಶ್ ಬಾಬು ಅವರು ರಶ್ಮಿಕಾ ಬಗ್ಗೆ ಒಂದು ಮಾತನ್ನು ಆಡಿಲ್ಲ ಎಂದು ಬೇಸರ ಮತ್ತು ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ನಟನೆಗೆ ಮೆಚ್ಚುಗೆ ಕೇಳಿ ಬಂದಿದೆ. ಆದರೆ ಮಹೇಶ್ ಬಾಬು ಅದರ ಬಗ್ಗೆ ಏನೂ ಹೇಳದಿರುವುದು ಅಚ್ಚರಿ ಮೂಡಿಸಿದೆ.

LEAVE A REPLY

Please enter your comment!
Please enter your name here