ರಕ್ಷಾ ಬಂಧನ 2021: ರಾಖೀ ಕಟ್ಟಲು ಶುಭ ಮುಹೂರ್ತ ಯಾವುದು? ಏನೆಲ್ಲಾ ಮಾಡಬೇಕು? ಏನು ಮಾಡಬಾರದು??

Written by Soma Shekar

Published on:

---Join Our Channel---

ಸಹೋದರ ಸಹೋದರಿಯರ ನಡುವಿನ ರಕ್ಷಣೆಯ ಬಂಧವಾಗಿ ಆಚರಿಸುವ ಹಬ್ಬವೇ ರಕ್ಷಾಬಂಧನ. ಸಹೋದರ ಮತ್ತು ಸಹೋದರಿಯರ ನಡುವೆ ಕಂಡುಬರುವ ಪ್ರೀತಿ-ವಾತ್ಸಲ್ಯ, ಅನ್ಯೋನ್ಯತೆ, ಆಪ್ಯಾಯತೆ, ಆರೈಕೆ ಗಳಂತಹ ಅನೇಕ ಭಾವನೆಗಳ ಸಮ್ಮಿಲನವೇ ರಕ್ಷಾಬಂಧನ. ಈ ಶುಭದಿನದಂದು ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟುವ ಮೂಲಕ ತಮ್ಮ ಸಹೋದರರ ದೀರ್ಘಾಯುಷ್ಶ ಕೋರುತ್ತಾ ಅವರಿಗೆ ಸದಾ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಇನ್ನು ಸಹೋದರರು ತಮ್ಮ ಸಹೋದರಿಗೆ ಹಬ್ಬದ ಉಡುಗೊರೆಯನ್ನು ನೀಡುವ ಜೊತೆಗೆ ಜೀವನಪೂರ್ತಿ ಅವರ ರಕ್ಷಣೆಯನ್ನು ಮಾಡುವ ಭರವಸೆಯನ್ನು ಒದಗಿಸುತ್ತಾರೆ. ಈ ಭರವಸೆಯು ಸಹೋದರನು ಮಾಡುವ ಒಂದು ಪ್ರತಿಜ್ಞೆ ಆಗಿರುತ್ತದೆ.

ಹಿಂದೂ ಪಂಚಾಂಗದ ಪ್ರಕಾರ ರಕ್ಷಾ ಬಂಧನ ಹಬ್ಬವನ್ನು ಆಶಾಡ ಕಳೆದ ಮೇಲೆ ಶ್ರಾವಣ ಮಾಸದಲ್ಲಿ ಬರುವ ಪೂರ್ಣಿಮೆಯ ದಿನ ಆಚರಣೆ ಮಾಡಲಾಗುತ್ತದೆ. ಅದನ್ನು ರಾಖಿ ಹುಣ್ಣಿಮೆ ಎಂದು ಕೂಡಾ ಕರೆಯಲಾಗುತ್ತದೆ. ಈ ವರ್ಷ ಆಗಸ್ಟ್ 22ರಂದು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ರಕ್ಷಾಬಂಧನದ ದಿನ ಪವಿತ್ರ ದಾರವನ್ನು ಕಟ್ಟುವ ಅಭ್ಯಾಸವು ಹೇಗೆ ಬಂದಿತು ಎನ್ನುವ ವಿಚಾರವಾಗಿ ಹಲವು ದಂತಕಥೆಗಳಿವೆ. ಪುರಾಣ ಕಥೆಗಳಿವೆ. ಇನ್ನು ಈ ವರ್ಷ ರಾಖಿ ಕಟ್ಟಲು ಶುಭಮುಹೂರ್ತ ಯಾವುದು ಎನ್ನುವುದನ್ನು ತಿಳಿಯೋಣ ಬನ್ನಿ.

ರಾಖಿ ಹುಣ್ಣಿಮೆಯ ತಿಥಿ ಇದೇ ಆಗಸ್ಟ್​ 21 ರ ಸಾಯಂಕಾಲ 7 ಗಂಟೆಗೆ ಆರಂಭವಾಗುತ್ತದೆ. ಅದು ಆಗಸ್ಟ್​ 22 ರ ಸಂಜೆ 5 ಗಂಟೆ 31 ನಿಮಿಷದವರೆಗೂ ಇರುತ್ತದೆ ಎನ್ನಲಾಗಿದೆ. ಪೂಜಾ ವೇಳೆಯು ಬೆಳಗ್ಗೆ 6 ಗಂಟೆ 15 ನಿಮಿಷದಿಂದ ಸಂಜೆ 5 ಗಂಟೆ 31 ನಿಮಿಷದವರೆಗೂ ಇರುತ್ತದೆ ಎನ್ನಲಾಗಿದೆ. ಇನ್ನು ಪ್ರಮುಖ ಘಟ್ಟವಾಗಿರುವ ರಾಖಿ ಕಟ್ಟುವ ಶುಭ ಮುಹೂರ್ತದ ಬಗ್ಗೆ ಹೇಳುವುದಾದರೆ, ಅದು ಮಧ್ಯಾಹ್ನ 1 ಗಂಟೆ 42 ನಿಮಿಷದಿಂದ ಸಂಜೆ 4 ಗಂಟೆ 18 ನಿಮಿಷದವರೆಗೂ ಇರುತ್ತದೆ ಎಂದು ಹೇಳಲಾಗಿದೆ.

ರಾತ್ರಿ ವೇಳೆಯಲ್ಲಿ ಜಪಿಸಬೇಕಾದ ಶ್ಲೋಕ ಈ ರೀತಿ ಇದೆ. “ಯೇನ್ ಬುದ್ದೌ ಬಲಿಃ ರಾಜಾ ದಾ‌ನವೇಂದ್ರ ಮಹಾಬಲ, ತೇನ ತ್ವಾಮಪಿ ಬಧ್ರಾಮಿ ರಕ್ಷೆ ಮಾ ಚಲ್ ಮಾ ಚಲ್ ” ಈ ದಿನ ಭದ್ರಾ ದಲ್ಲಿ ಅಥವಾ ರಾಹುಕಾಲದಲ್ಲಿ ರಾಖಿಯನ್ನು ಕಟ್ಟಬಾರದು. ಏಕೆಂದರೆ ಇದರಿಂದ ಸಹೋದರ, ಸಹೋದರಿಯರಿಗೆ ಅಶುಭ ಫಲಗಳು ಎದುರಾಗುವುದು ಎನ್ನಲಾಗುತ್ತದೆ. ರಕ್ಷಾಬಂಧನದ ದಿನದಂದು ಸಹೋದರ ಸಹೋದರಿಯರಲ್ಲಿ ಯಾರೂ ಕೂಡಾ ಕಪ್ಪು ಬಣ್ಣದ ವಸ್ತ್ರವನ್ನು ಧರಿಸಬಾರದು. ಇದನ್ನು ನಕಾರಾತ್ಮಕತೆಯ ಸಂಕೇತ ಎಂದು ಪರಿಗಣಿಸುವುದರಿಂದ ಕಪ್ಪು ಬಟ್ಟೆಯನ್ನು ಧರಿಸದೆ ಇರುವುದು ಸೂಕ್ತ ಎನ್ನಲಾಗಿದೆ.

ಅಕ್ಷತೆಯ ಅಕ್ಕಿಯನ್ನು ಮಾತ್ರವೇ ಸಹೋದರನಿಗೆ ತಿಲಕ ಇಡಲು ಬಳಸಬೇಕು. ಅಕ್ಕಿ ತುಂಡಾಗಿದ್ದರೆ ಅದನ್ನು ಬಳಸುವುದು ಉತ್ತಮವಲ್ಲ. ಅಲ್ಲದೇ ರಾಖಿ ಕಟ್ಟುವಾಗ ಸಹೋದರಿಯ ಮುಖ ದಕ್ಷಿಣ ದಿಕ್ಕಿಗೆ ಇರಬಾರದು. ರಾಖಿ ಕಟ್ಟುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡುವುದು ಉತ್ತಮ ಎನ್ನಲಾಗಿದೆ. ರಾಖೀ ಹಬ್ಬಕ್ಕಾಗಿ ಸಹೋದರಿಯರು ಮಾಡಿಕೊಳ್ಳುವ ಸಿದ್ಧತೆಗಳು ಸಹಾ ವಿಶೇಷವಾಗಿರುತ್ತದೆ. ಸಹೋದರನಿಗೆ ಆರತಿ ಬೆಳಗಿ, ತಿಲಕವಿಟ್ಟು, ರಾಖಿ ಕಟ್ಟಿ ಆತನಿಗೆ ಸಿಹಿಯನ್ನು ತಿನ್ನಿಸುತ್ತಾರೆ.

Leave a Comment