ಸಿನಿಮಾಗಳ ಚಿತ್ರೀಕರಣಕ್ಕಾಗಿ ಸ್ಮಾರಕಗಳನ್ನು, ಐತಿಹಾಸಿಕ ಸ್ಥಳಗಳನ್ನು ಮತ್ತು ಧಾರ್ಮಿಕ ಪ್ರದೇಶಗಳನ್ನು ಬಳಸಿಕೊಳ್ಳುವುದು ಸಾಮಾನ್ಯವಾದ ವಿಷಯವಾಗಿದೆ. ಆದರೆ ಅವುಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ವಿಚಕ್ಷಣ ಜ್ಞಾನ ಚಿತ್ರತಂಡಕ್ಕೆ ಇರಬೇಕಾದದ್ದು ಅತಿ ಅವಶ್ಯಕವಾಗಿದೆ. ಇತ್ತೀಚೆಗೆ ಕರ್ನಾಟಕದ ಒಂದು ಸುಪ್ರಸಿದ್ಧ ಸ್ಮಾರಕವನ್ನು ತಮ್ಮ ಮನಸೋ ಇಚ್ಛೆ ಬಳಸಿಕೊಳ್ಳಲು ಮುಂದಾಗಿದ್ದ ಚಿತ್ರ ತಂಡವೊಂದಕ್ಕೆ ಗ್ರಾಮಸ್ಥರು ಸರಿಯಾದ ಬುದ್ಧಿಯನ್ನು ಕಲಿಸಿರುವ ಘಟನೆಯೊಂದು ನಡೆದಿದ್ದು, ಈ ವಿಷಯ ಸುದ್ದಿಯಾದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಗ್ರಾಮಸ್ಥರ ನಡೆಯನ್ನು ಪ್ರಶಂಸೆ ಮಾಡುತ್ತಿದ್ದಾರೆ.
ಮಂಡ್ಯದ ಪಾಂಡವಪುರ ತಾಲೂಕಿನ ಮೇಲುಕೋಟೆಯ ರಾಯಗೋಪುರ ಬಹಳ ಪ್ರಸಿದ್ಧವಾಗಿದ್ದು, ಇದು ಪ್ರಸ್ತುತ ಪ್ರಾಚ್ಯವಸ್ತು ಇಲಾಖೆಯ ಸ್ಮಾರಕವಾಗಿದೆ. ಈ ಸ್ಮಾರಕದ ಬಳಿ ಈಗಾಗಲೇ ಹಲವು ಭಾಷೆಗಳ ಸಿನಿಮಾಗಳನ್ನು ಚಿತ್ರೀಕರಣ ಮಾಡಲಾಗಿದೆ. ದಕ್ಷಿಣದ ಬಹಳಷ್ಟು ಯಶಸ್ವಿ ಸಿನಿಮಾಗಳಲ್ಲಿ ರಾಯ ಗೋಪುರವನ್ನು ಬಹಳ ಸುಂದರವಾಗಿ ತೋರಿಸಲಾಗಿದೆ. ಆದರೆ ಇದೇ ರಾಯಗೋಪುರದ ಬಳಿ ಇತ್ತೀಚೆಗೆ ತೆಲುಗಿನ ಯುವ ಸ್ಟಾರ್ ನಟ ನಾಗಚೈತನ್ಯ ಅವರ ಹೊಸ ಸಿನಿಮಾ 3 ನಾಟ್ 2 ಚಿತ್ರೀಕರಣ ನಡೆದಿದ್ದು. ಚಿತ್ರೀಕರಣದ ವೇಳೆಯಲ್ಲಿ ಸ್ಮಾರಕದ ಬಳಿ ಚಿತ್ರತಂಡವೂ ಬಾರ್ ನ ಸೆಟ್ಟನ್ನು ಹಾಕಿತ್ತು.
ಹೀಗೆ ಸ್ಮಾರಕದ ಬಳಿ ಬಾರ್ ಸೆಟ್ ಹಾಕಿದ್ದನ್ನು ಗಮನಿಸಿದ ಗ್ರಾಮಸ್ಥರು ಅದನ್ನು ವಿರೋಧ ಮಾಡಿದ್ದಾರೆ. ಚಿತ್ರ ತಂಡ ಇಂತಹುದೊಂದು ಕೆಲಸವನ್ನು ಮಾಡುವ ಮೂಲಕ ಶ್ರೀ ವೈಷ್ಣವ ಕ್ಷೇತ್ರಕ್ಕೆ ಅಪಮಾನ ಮಾಡಲಾಗಿದೆ ಎಂದೂ, ಅನುಮತಿ ಪಡೆದು ಚಿತ್ರೀಕರಣ ಮಾಡಿದರೂ ಚಿತ್ರ ತಂಡದವರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಚಿತ್ರತಂಡದ ವಿರುದ್ಧ ದೂರನ್ನು ದಾಖಲು ಮಾಡಿದ್ದಾರೆ. ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರು, ನಮ್ಮ ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆ ತರುವ ರೀತಿಯಲ್ಲಿ ರಾಯ ಗೋಪುರ ವನ್ನು ಚಿತ್ರತಂಡವು ಬಳಸಿಕೊಂಡಿದೆ. ಇದಕ್ಕೆ ಸಂಬಂಧಪಟ್ಟಂತೆ ಅನುಮತಿಯನ್ನು ನೀಡುವಾಗಲೇ ಇಲಾಖೆಯವರು ಸರಿಯಾಗಿ ನೋಡಿಕೊಂಡು ಅನುಮತಿಯನ್ನು ನೀಡಬೇಕು ಎಂದು ಹೇಳಿದ್ದಾರೆ. ವರ್ಷದ ಹಿಂದೆ ಕೂಡಾ ಮೇಲುಕೋಟೆಯಲ್ಲಿ ನಾಗ ಚೈತನ್ಯ ಅವರ ನಟನೆಯ ಬಂಗಾರ್ರಾಜು ಸಿನಿಮಾದ ಚಿತ್ರೀಕರಣಕ್ಕಾಗಿ ಸೆಟ್ ಗಳನ್ನು ಹಾಕಲಾಗಿತ್ತು ಆಗ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಈ ಬಾರಿ ಐತಿಹಾಸಿಕ ಸ್ಮಾರಕದ ಬಳಿ ಚಿತ್ರ ತಂಡ ಮಾಡಿದ ತಪ್ಪಿನಿಂದ ಗ್ರಾಮಸ್ಥರ ಸಿಟ್ಟಿಗೆ ಅದು ಕಾರಣವಾಗಿದೆ.