ಮೇಕೆ ದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಯನ್ನು ನಡೆಸುವ ನಿರ್ಧಾರವೊಂದನ್ನು ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಹಲವು ಸಂಘಟನೆಗಳಿಗೆ ಕರೆಯನ್ನು ನೀಡಿದೆ. ಈ ವಿಚಾರವಾಗಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರು ಗುರುವಾರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿಯನ್ನು ನೀಡಿದ್ದರು. ಈಗ ಇದೇ ವಿಚಾರವಾಗಿ ಹೊಸದೊಂದು ವಿಷಯವು ಎಲ್ಲರ ಗಮನವನ್ನು ಸೆಳೆದಿದೆ. ಹೌದು ನಾದಬ್ರಹ್ಮ ಖ್ಯಾತಿಯ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಾಂಗ್ರೆಸ್ ಗೆ ಸಾಥ್ ನೀಡುತ್ತಿದ್ದಾರೆ.
ಹಂಸಲೇಖ ಅವರು ಕನ್ನಡ ಸಿನಿ ಸೀಮೆಯಲ್ಲಿ ಕಳೆದ ಹಲವು ವರ್ಷಗಳಿಂದಲೂ ಸಕ್ರಿಯವಾಗಿದ್ದಾರೆ. ಅನೇಕ ಸಿನಿಮಾಗಳಿಗೆ ಸಂಗೀತವನ್ನು ನೀಡುವ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರು ತಮ್ಮ ಇಂಪಾದ ಸಂಗೀತದಿಂದ, ಮನಸ್ಸಿಗೆ ಮುದ ನೀಡುವ ಸಾಹಿತ್ಯದಿಂದ ಸಿನಿ ಪ್ರೇಮಿಗಳನ್ನು ಬಹಳ ರಂಜಿಸಿದ್ದಾರೆ. ಇಂತಹ ಜನಪ್ರಿಯ ಸಂಗೀತಕಾರನನ್ನು ಕಾಂಗ್ರೆಸ್ ನಾಯಕರು ಭೇಟಿಯಾಗಿ ತಮ್ಮ ಪಾದಯಾತ್ರೆ ಗೆ ಸಾಥ್ ನೀಡುವಂತೆ ಆಹ್ವಾನವನ್ನು ನೀಡಿದ್ದಾರೆ ಎನ್ನಲಾಗಿದೆ.
ಕನ್ನಡದ ಎಲ್ಲಾ ಸ್ಟಾರ್ ನಟರನ್ನೂ ಸಹಾ ಈ ಪಾದಯಾತ್ರೆ ಗೆ ಆಹ್ವಾನ ಮಾಡಲು ಕಾಂಗ್ರೆಸ್ ನಿರ್ಧಾರವೊಂದನ್ನು ಮಾಡಿದ್ದು, ಈ ಹೊಣೆಗಾರಿಕೆಯನ್ನು ಹಿರಿಯ ಕಲಾವಿದರಾದ ಉಮಾಶ್ರೀ, ಜಯಮಾಲಾ ಹಾಗೂ ಮುಖ್ಯಮಂತ್ರಿ ಚಂದ್ರು ಅವರಿಗೆ ವಹಿಸಲಾಗಿದೆ ಎನ್ನಲಾಗಿದೆ. ಅದಾದ ನಂತರ ಸ್ವತಃ ಡಿ.ಕೆ.ಶಿವಕುಮಾರ್ ಅವರೇ ನಟರಿಗೆ ಆಹ್ವಾನವನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣದಿಂದ ಹಂಸಲೇಖ ಅವರಿಗೆ ಆಹ್ವಾನ ನೀಡಲಾಗಿದೆ.
ಕೆಲವು ದಿನಗಳ ಹಿಂದೆ ಹಂಸಲೇಖ ಅವರು ಪೇಜಾವರ ಶ್ರೀಗಳ ಕುರಿತಾಗಿ ನೀಡಿದ ಹೇಳಿಕೆಯಿಂದಾಗಿ ಒಂದು ದೊಡ್ಡ ವಿ ವಾ ದ ಆರಂಭವಾಗಿತ್ತು. ಆಗ ಕಾಂಗ್ರೆಸ್ ನಾಯಕರು ಹಂಸಲೇಖ ಪರ ನಿಂತಿದ್ದರು. ಇದಲ್ಲದೇ ಇತ್ತೀಚಿಗಷ್ಟೇ ಹಂಸಲೇಖ ಕಾರ್ಯಕ್ರಮವೊಂದರಲ್ಲಿ ಸಿದ್ಧರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಕೂಡಾ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದು ಕೂಡಾ ಗಮನಾರ್ಹವಾದ ವಿಷಯ ಎನಿಸಿದೆ.
ಈಗ ಕಾಂಗ್ರೆಸ್ ಹಂಸಲೇಖ ಅವರಿಗೆ ಪಾದಯಾತ್ರೆಗೆ ಸಾಥ್ ನೀಡಲು ಆಹ್ವಾನವನ್ನು ನೀಡಿದೆ. ಇನ್ನು ಹಂಸಲೇಖ ಅವರು ಕೂಡಾ ಇದಕ್ಕೆ ಒಪ್ಪಿಗೆ ನೀಡಿದ್ದು, ಅವರು ಮೇಕೆದಾಟು ಪಾದಯಾತ್ರೆ ಕುರಿತಾಗಿ ಎರಡು ಹಾಡುಗಳನ್ನು ಕೂಡಾ ಬರೆಯುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ತೀರ್ಮಾನಿಸಿರುವ ಈ ಪಾದಯಾತ್ರೆ ಗೆ ಇನ್ನೂ ಯಾವೆಲ್ಲಾ ಸ್ಟಾರ್ ನಟರು ಸಾಥ್ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.