ತೆಲುಗು ಸಿನಿ ರಂಗದಲ್ಲಿ ಮಲ್ಟಿ ಸ್ಟಾರರ್ ಸಿನಿಮಾಗಳು ಮೊದಲಿನಿಂದಲೂ ಸಹಾ ತುಂಬಾ ಫೇಮಸ್, ಮಧ್ಯದಲ್ಲಿ ಕೆಲವು ಸಮಯ ಇಂತಹ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿತ್ತಾದರೂ, ಇದೀಗ ಕಳೆದ ಕೆಲವು ವರ್ಷಗಳಿಂದಲೂ ಮಲ್ಟಿಸ್ಟಾರರ್ ಸಿನಿಮಾಗಳು ಮತ್ತೆ ಸದ್ದು ಮಾಡುತ್ತಿವೆ. ಅಲ್ಲದೇ ಈ ಸಿನಿಮಾಗಳು ಯಶಸ್ಸನ್ನು ಸಹಾ ಪಡೆಯುತ್ತಿವೆ. ಪ್ರಸ್ತುತ ತೆಲುಗು ಚಿತ್ರ ಸೀಮೆಯಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿ ಸಹಾ ಇಬ್ಬರು ಸ್ಟಾರ್ ನಟರಾದ ಜೂ.ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜ ಜೊತೆಯಾಗಿ ತೆರೆ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಹಬ್ಬವಾಗಲಿದೆ.
ಈಗ ಇದರ ಬೆನ್ನಲ್ಲೇ ಈಗ ಇನ್ನೊಂದು ಮಲ್ಟಿಸ್ಟಾರರ್ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಹೌದು, ದಶಕಗಳ ನಂತರ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಮತ್ತು ಮಾಸ್ ಮಹಾರಾಜ ಖ್ಯಾತಿಯ ನಟ ರವಿತೇಜ ಜೊತೆಯಾಗಿ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಕೀಯದಿಂದ ದೂರವೇ ಉಳಿದಿರುವ ನಟ ಚಿರಂಜೀವಿ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಆಚಾರ್ಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೆ, ಗಾಡ್ ಫಾದರ್, ಲೂಸಿಯಾ, ಬೋಳಾಶಂಕರ್ ಸಿನಿಮಾಗಳು ಪ್ರಗತಿಯಲ್ಲಿದೆ.
ಈಗ ಇವೆಲ್ಲವುಗಳ ನಡುವೆಯೇ ನಟ ಚಿರಂಜೀವಿ ಅವರ ಹೊಸ ಸಿನಿಮಾ ವಾಲ್ಟೇರ್ ವೀರಯ್ಯ ಸೆಟ್ಟೇರಿದ್ದು, ಈ ಸಿನಿಮಾದಲ್ಲಿ ನಟ ರವಿತೇಜ ಅವರು ಮೆಗಾಸ್ಟಾರ್ ಜೊತೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಈ ಹಿಂದೆ ರವಿತೇಜ ಅವರು ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆಗೆ ತೆರೆ ಹಂಚಿಕೊಂಡು ವರ್ಷಗಳೇ ಕಳೆದಿವೆ. ಈಗ ಅವರು ಚಿರಂಜೀವಿ ಅವರ ಜೊತೆ ನಟಿಸುವ ವಿಷಯ ಅಭಿಮಾನಿಗಳಿಗೆ ಖುಷಿಯನ್ನು ನೀಡಿದೆ. ದಶಕಗಳ ನಂತರ ಮತ್ತೊಮ್ಮೆ ಮೆಗಾಸ್ಟಾರ್ ಸಿನಿಮಾದಲ್ಲಿ ರವಿತೇಜ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ವಾಲ್ಟೇರ್ ವೀರಯ್ಯ ಸಿನಿಮಾದಲ್ಲಿ ನಟ ರವಿತೇಜ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುವ ವಿಷಯ ಇದೀಗ ಸದ್ದು ಮಾಡಿದೆ. ಚಿರಂಜೀವಿ ನಟನೆಯ 154 ನೇ ಸಿನಿಮಾ ಇದಾಗಿದ್ದು, ಈ ಸಿನಿಮಾದ ತನ್ನ ಪಾತ್ರಕ್ಕಾಗಿ ರವಿತೇಜ ಅವರು ದಿನವೊಂದಕ್ಕೆ 25 ಲಕ್ಷ ಸಂಭಾವನೆಯನ್ನು ಪಡೆಯಲಿದ್ದಾರೆ ಎನ್ನುವ ಮಾಹಿತಿಯೊಂದು ಟಾಲಿವುಡ್ ಅಂಗಳ ದಲ್ಲಿ ಹರಿದಾಡಿದೆ. ಒಟ್ಟು ಎಷ್ಟು ದಿನಗಳ ಕಾಲ್ ಶೀಟ್ ನೀಡಿದ್ದಾರೆನ್ನುವುದು ಇನ್ನೂ ತಿಳಿದಿಲ್ಲವಾದರೂ ದಿನವೊಂದಕ್ಕೆ 25 ಲಕ್ಷ ಸಂಭಾವನೆ ನೀಡಲಾಗುತ್ತಿದೆ ಎನ್ನುವ ವಿಷಯ ಗಮನ ಸೆಳೆದಿದೆ.