ಏಷ್ಯಾದ ಅತಿದೊಡ್ಡ ಶ್ರೀಮಂತ ಎನಿಸಿರುವ ಮುಖೇಶ್ ಅಂಬಾನಿ ಇತ್ತೀಚಿನ ದಿನಗಳಲ್ಲಿ ಐಶಾರಾಮೀ ರಿಯಲ್ ಎಸ್ಟೇಟ್ ನಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇತ್ತೀಚಿಗಷ್ಟೇ ಮುಖೇಶ್ ಅಂಬಾನಿ ನ್ಯೂಯಾರ್ಕ್ ನಲ್ಲಿ ವಿಶಾಲವಾದ ಐಶಾರಾಮೀ ಹೊಟೇಲ್ ಒಂದನ್ನು ಖರೀದಿ ಮಾಡಿದ್ದು, ಅಲ್ಲದೇ ಈ ಹೊಟೇಲ್ ಅನ್ನು ಹಾಲಿವುಡ್ ನ ಬಹಳ ನೆಚ್ಚಿನ ಹೊಟೇಲ್ ಎಂದು ಹೇಳಲಾಗಿದೆ. ದೊರಕಿರುವ ಮಾಹಿತಿಗಳ ಪ್ರಕಾರ ಮುಖೇಶ್ ಅಂಬಾನಿ ಈ ಹೊಟೇಲ್ ಅನ್ನು ಬಹುಕೋಟಿ ಮೌಲ್ಯ ನೀಡಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ.
ಮುಖೇಶ್ ಅಂಬಾನಿ ನ್ಯೂಯಾರ್ಕ್ ನ ಪ್ರೀಮಿಯರ್ ಲಕ್ಷುರಿ ಐಶಾರಾಮೀ ಹೊಟೇಲನ್ನು ಕಳೆದ ಶನಿವಾರದಂದು ಸುಮಾರು 9.81 ಕೋಟಿ ಡಾಲರ್ ಗಳು ಅಂದರೆ 728 ಕೋಟಿ ರೂಪಾಯಿಗಳನ್ನು ನೀಡಿ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಒಂದು ವರ್ಷದ ಅವಧಿಯಲ್ಲಿ ರಿಲಯನ್ಸ್ ಗ್ರೂಪ್ ಖರೀದಿ ಮಾಡುತ್ತಿರುವ ಎರಡನೇ ಐಶಾರಾಮೀ ಹೊಟೇಲ್ ಇದು ಎನ್ನಲಾಗಿದೆ. ಕಳೆದ ವರ್ಷ ಏಪ್ರಿಲ್ ನಲ್ಲಿ ರಿಲಯನ್ಸ್ ಬ್ರಿಟನ್ ನ ಸ್ಟೋಕ್ ಪಾರ್ಕ್ ಲಿಮಿಟೆಡ್ ಅನ್ನು ಖರೀದಿ ಮಾಡಿದೆ.
ಇನ್ನು ಈಗ ಖರೀದಿ ಮಾಡಿರುವ ನ್ಯೂಯಾರ್ಕ್ ನ ಈ ಹೊಸ ಹೊಟೇಲ್ ಪ್ರಿಸ್ಟೀನ್ ಸೆಂಟ್ರಲ್ ಪಾರ್ಕ್ ಮತ್ತು ಕೊಲಂಬಸ್ ಸರ್ಕಲ್ ಗೆ ಬಹಳ ಹತ್ತಿರದಲ್ಲಿದೆ ಎನ್ನಲಾಗಿದೆ. 2003 ರಲ್ಲಿ ನಿರ್ಮಾಣವಾಗಿರುವ ಈ ಹೊಟೇಲ್ ನಲ್ಲಿ 248 ಐಶಾರಾಮೀ ಕೋಣೆಗಳು ಇವೆ. ಈ ಹೊಟೇಲ್ ನ ಕೋಣೆಗಳಲ್ಲಿ ಅತಿ ಕಡಿಮೆ ಬಾಡಿಗೆ ಎಂದರೆ ದಿನಕ್ಕೆ 745 ಡಾಲರ್ ಗಳು ಅಂದರೆ 55 ಸಾವಿರ ರೂಪಾಯಿಗಳಾಗಿದೆ.
ಇನ್ನು ಅತಿ ದುಬಾರಿ ಕೋಣೆಯ ಬಾಡಿಗೆ ದಿನವೊಂದಕ್ಕೆ 14 ಸಾವಿರ ಡಾಲರ್ ಅಂದರೆ ಬರೋಬ್ಬರಿ 10 ಲಕ್ಷ ರೂ. ಗಳಿಗೂ ಅಧಿಕವಾಗಿದೆ ಎನ್ನಲಾಗಿದೆ. ಹಾಲಿವುಡ್ ನ ಹಲವು ನಟ ನಟಿಯರಿಗೆ ಈ ಹೊಟೇಲ್ ಅವರ ಫೇವರಿಟ್ ಆಗಿದೆ ಎನ್ನಲಾಗಿದ್ದು, ನ್ಯೂಯಾರ್ಕ್ ಗೆ ಭೇಟಿ ನೀಡಿದಾಗ ತಂಗಲು ಅವರ ಮೊದಲ ಆದ್ಯತೆ ಈ ಹೊಟೇಲ್ ಆಗಿರುತ್ತದೆ ಎನ್ನಲಾಗಿದೆ. ಒಟ್ಟಾರೆ ಈಗ ಈ ಐಶಾರಾಮೀ ಹೊಟೇಲ್ ಮುಖೇಶ್ ಅಂಬಾನಿ ಕೈ ಸೇರಿದೆ.