ಮಾದ್ಯಮದ ವರದಿ ನಿಜವಲ್ಲ ಎಂದು ಸ್ವತಃ ಸ್ಪಷ್ಟನೆ ನೀಡಿದ ಅನಿರುದ್ಧ್: ಎಲ್ಲಾ ಅನುಮಾನಕ್ಕೆ ತೆರೆ ಎಳೆದ ನಟ!!

Entertainment Featured-Articles Movies News

ಟಿವಿ ಯಲ್ಲಿ ಬಿಗ್ ಬಾಸ್ ನ ಹೊಸ ಸೀಸನ್ ಆರಂಭವಾಗಲಿದೆ ಎನ್ನುವ ಸುದ್ದಿಗಳು ಹೊರ ಬಂದ ಕೂಡಲೇ ಮಾದ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಸೀಸನ್ ಗೆ ಸ್ಪರ್ಧಿಗಳಾಗಿ ಯಾವೆಲ್ಲಾ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಲಿದ್ದಾರೆ ಎನ್ನುವ ಚರ್ಚೆಗಳು ಆರಂಭವಾಗುತ್ತದೆ. ಅಷ್ಟು ಮಾತ್ರವೇ ಅಲ್ಲದೇ ಶೋ ಹತ್ತಿರವಾದಂತೆ ಒಂದಷ್ಟು ಸೆಲೆಬ್ರಿಟಿಗಳ ಹೆಸರು ಸಹಾ ಸಂಭಾವ್ಯ ಪಟ್ಟಿಯಲ್ಲಿ ಹರಿದಾಡುತ್ತದೆ. ಕೆಲವೊಮ್ಮೆ ಈ ಹೆಸರುಗಳಲ್ಲಿ ಬಹುತೇಕ ಹೆಸರುಗಳು ಸತ್ಯವೂ ಆಗಿರುತ್ತದೆ ಹಾಗೂ ಕೆಲವೊಂದು ಹೆಸರುಗಳು ಬಿಟ್ಟು ಹೋಗುವುದೂ ಉಂಟು. ಈ ಬಾರಿ ಬಿಗ್ ಬಾಸ್ ನ 9ನೇ ಸೀಸನ್ ಶೀಘ್ರದಲ್ಲೇ ಆರಂಭವಾಗಲಿದೆ. ಓಟಿಟಿ ಬಿಗ್ ಬಾಸ್ ಕೊನೆಯ ಹಂತ ತಲುಪಿದ್ದು, ಅದು ಮುಗಿದ ಕೂಡಲೇ ಟಿವಿಯಲ್ಲಿ ಹೊಸ ಸೀಸನ್ ಆರಂಭವಾಗಲಿದೆ.

ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ನೀಡುತ್ತಾರೆ ಎನ್ನುವ ವಿಚಾರವಾಗಿಯೂ ಸಹಾ ಒಂದಷ್ಟು ಹೆಸರುಗಳು ಈಗಾಗಲೇ ಹರಿದಾಡಿವೆ. ಇದೇ ಹಿನ್ನೆಲೆಯಲ್ಲಿ ಮಾದ್ಯಮವೊಂದು ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಮೂಲಕವೂ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿರುವ, ಜೊತೆ ಜೊತೆಯಲಿ ಸೀರಿಯಲ್ ನ ಆರ್ಯವರ್ಧನ್ ಪಾತ್ರದ ಮೂಲಕವೇ ಮನೆ ಮನೆ ಮಾತಾಗಿರುವ ನಟ ಅನಿರುದ್ಧ್ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ನೀಡೋದು ಪಕ್ಕಾ ಎಂದು ಸುದ್ದಿಯನ್ನು ಮಾಡಿತ್ತು. ಆದರೆ ಈ ವಿಷಯದ ಕುರಿತಾಗಿ ನಟ ಅನಿರುದ್ದ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಹೌದು, ತಾನು ಬಿಗ್ ಬಾಸ್ ಮನೆಗೆ ಹೋಗೋದು ಪಕ್ಕಾ ಎನ್ನುವ ಸುದ್ದಿಯನ್ನು ನೋಡಿರುವ ಅನಿರುದ್ಧ್ ಅವರು ಅದಕ್ಕೆ ಸ್ಪಷ್ಟನೆ ಯನ್ನು ನೀಡುತ್ತಾ, ತಮ್ಮ ಫೇಸ್ ಬುಕ್ ಖಾತೆಯಲ್ಲಿ ಮಾದ್ಯಮದ ಸುದ್ದಿಯ ಸ್ಕ್ರೀನ್ ಶಾಟ್ ಅನ್ನು ಶೇರ್ ಮಾಡಿಕೊಂಡಿದ್ದು, “ನಾನು ಬಿಗ್ ಬಾಸ್ ಮನೆಗೆ ಹೋಗ್ತಾಯಿಲ್ಲ” ಎಂದು ಕನ್ನಡದಲ್ಲಿ ಮತ್ತು ಇಂಗ್ಲಿಷ್ ನಲ್ಲಿ ಬರೆದು ಪೋಸ್ಟ್ ಮಾಡುವ ಮೂಲಕ, ಮಾದ್ಯಮದಲ್ಲಿ ಬಂದಿರುವ ಸುದ್ದಿ ನಿಜವಲ್ಲ ಎನ್ನುವ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ. ಅವರ ಅಭಿಮಾನಿಗಳಿಗೆ ಈ ವಿಷಯವಾಗಿ ಇದ್ದ ಅನುಮಾನಕ್ಕೆ ಅವರು ಪೂರ್ಣ ವಿರಾಮವನ್ನು ಹಾಕಿದ್ದಾರೆ.

Leave a Reply

Your email address will not be published.