ಮಾತೃ ಹೃದಯಿ ಬೆಂಗಳೂರಿಗೆ ಬೈದರೇ, ಗೇಲಿ ಮಾಡಿದರೆ ಉದ್ಧಾರ ಆಗ್ತಿರ್ರೇನ್ರೋ: ಕವಿರಾಜ್ ಅವರ ಅರ್ಥ ಪೂರ್ಣ ಸಿಟ್ಟು
ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದೆಲ್ಲಾ ಹೆಸರನ್ನು ಪಡೆದಿರುವ ಬೆಂಗಳೂರು ಮಹಾನಗರ ಮಹಾಮಳೆಯಿಂದಾಗಿ ನೆಂದು ನೀರಾಗಿದೆ. ಮಹಾ ಮಳೆಯ ಕಾರಣದಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಐಟಿ ಬಿಟಿ ಸಂಸ್ಥೆಗಳು ಹಾಗೂ ಅದರ ಉದ್ಯೋಗಿಗಳಿಗೆ ಸಹಾ ಇದು ದೊಡ್ಡ ಸಮಸ್ಯೆಯನ್ನು ತಂದೊಡ್ಡಿದೆ. ಮಹಾ ಮಳೆಯ ಕಾರಣದಿಂದ ಬಡವ, ಶ್ರೀಮಂತ ಬೇಧವಿಲ್ಲದೇ ಎಲ್ಲರೂ ಸಹಾ ತೊಂದರೆಯನ್ನು ಅನುಭವಿಸುತ್ತಿರುವುದು ವಾಸ್ತವದ ವಿಷಯವಾಗಿದೆ. ಆದರೆ ಇಂತಹ ಸಂದಿಗ್ಧ ಸಮಯದಲ್ಲಿ ಉತ್ತರ ಭಾರತದ ಕೆಲವು ಮಂದಿ ಬೆಂಗಳೂರಿನ ಈ ಮಹಾಮಳೆಗೆ ಬೇಸರ ಪಟ್ಟು, ಬೆಂಗಳೂರು ನಗರದ ಬಗ್ಗೆ ಅಪಸ್ವರ ತೆಗೆದು, ಸೋಷಿಯಲ್ ಮೀಡಿಯಾಗಳಲ್ಲಿ ಬೆಂಗಳೂರಿನ ಬಗ್ಗೆ ವ್ಯಂಗ್ಯ ಮಾಡುತ್ತಾ ಟ್ರೋಲ್ ಮಾಡಲು ಮುಂದಾಗಿದ್ದಾರೆ.
ಬೆಂಗಳೂರನ್ನು ಹೀಗೆ ಟ್ರೋಲ್ ಮಾಡುತ್ತಿರುವುದನ್ನು ನೋಡಿ ಬೆಂಗಳೂರಿನ ನಿವಾಸಿಗಳು ಸಿಟ್ಟಾಗಿದ್ದಾರೆ. ಹೀಗೆ ಅನ್ನ ನೀಡಿದ ನಗರವನ್ನು ಟ್ರೋಲ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇಂತಹುದೇ ಒಂದು ಪ್ರಶ್ನೆಯನ್ನು ಮಾಡಿದ್ದಾರೆ ಜನಪ್ರಿಯ ಗೀತ ಸಾಹಿತಿ ಕವಿರಾಜ್ ಅವರು. ಕವಿರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅವರು ಒಂದು ದೀರ್ಘವಾದ ಹಾಗೂ ಅರ್ಥಪೂರ್ಣ ಸಾಲುಗಳನ್ನು ಬರೆದುಕೊಂಡು, ಅದರ ಮೂಲಕ ಟ್ರೋಲ್ ಮಾಡಿದವರ ಮನಸ್ತತ್ವವನ್ನು ಕುರಿತು ಟೀಕೆ ಮಾಡಿ, ಉದ್ದಾಗ ಆಗ್ತಿರೇನ್ರೋ ಎಂದಿದ್ದಾರೆ.
ಕವಿರಾಜ್ ಅವರ ಪೋಸ್ಟ್ ನಲ್ಲಿ ಏನಿದೆ ಎನ್ನುವುದಾದರೆ, ಮರೆತಿರಬೇಕು.. ಒಮ್ಮೆ ಜ್ಞಾಪಿಸುತ್ತೇನೆ. ಊರು ಬಿಟ್ಟಾಗಿಂದ ತಿಂದ ಒಂದೊಂದು ಕಾಳು ಅನ್ನದ ದುಡಿಮೆಗೆ ದಾರಿಯಾಗಿದ್ದು ಈ ಊರು ಊರಲ್ಲಿ ಕೆಲಸಕ್ಕೆ ಬಾರದವರು ಎನಿಸಿಕೊಳ್ಳುತ್ತಿದ್ದವರಿಗೆ ಕೆಲಸ ಕೊಟ್ಟಿದ್ದು ಈ ಊರು ಅಪ್ಪ- ಅಮ್ಮನ ದುಡ್ಡಲ್ಲಿ ಟಿಕೇಟ್ ಕೊಂಡು ಬಸ್ಸು , ರೈಲು ಹತ್ತಿ ಬಂದವರಿಗೆ ಸ್ವಂತ ಕಾರಲ್ಲಿ ಊರಿಗೆ ಹೋಗಿ ಬರುವಂತೆ ಮಾಡಿದ್ದು ಈ ಊರು, ಹುಟ್ಟಿದ ಊರಲ್ಲಿ ಮನೆ ಕಟ್ಟಿಸಲು ದುಡ್ಡು ಕೊಟ್ಟಿದ್ದು ಈ ಊರು ಅಕ್ಕ ತಂಗಿಯರ ಮದುವೆ ಖರ್ಚಿಗೆ ಹಣ ಹುಟ್ಟಿಸಿದ್ದುಈ ಊರು,
ಅಪ್ಪ ಅಮ್ಮನ ಚಿಕಿತ್ಸೆಯ ಬಿಲ್ ಭರಿಸೋ ತಾಕತ್ತು ಕೊಟ್ಟಿದ್ದು ಈ ಊರು, ಆ ಜಾತಿ ಈ ಧರ್ಮ ಆ ರಾಜ್ಯ ಈ ಭಾಷೆ ಅಂತಾ ಭೇದ ಮಾಡದೇ ಎಲ್ಲರನ್ನು ಒಂದೇ ಕಟ್ಟಡಗಳಲ್ಲಿ ಒಂದಾಗಿ ಬಾಳುವಂತೆ ಮಾಡಿದ್ದು ಈ ಊರು, ಬೇರೆ ನಗರಗಳು ಧಗೇಲಿ ಬೇಯುತ್ತಿರುವಾಗ ಏಸಿ ವೆದರ್ ಅಲ್ಲಿ ನಮ್ಮನ್ನು ತಣ್ಣಗಿಟ್ಟಿದ್ದು ಈ ಊರು, ಎಲ್ಲೆಲ್ಲಿಂದಲೋ ಉದ್ಯೋಗ ಅರಸಿ ಹೊಟ್ಟೆ ಪಾಡಿಗಾಗಿ ಬಂದಿಳಿದವರು ನಾಲ್ಕಾರು ಫ್ಲಾಟ್ ಕೊಂಡು, ವೀಕೆಂಡ್ ಮೋಜು ಮಸ್ತಿ ಮಾಡಿಕೊಂಡು ಇಲ್ಲಿನ ಭಾಷೆ ,ಸಂಸ್ಕ್ರತಿ ಗೌರವಿಸದಿದ್ದರು ಹೋಗಲೀ ಬಿಡು ಅಂತಾ ಬಿಂದಾಸಾಗಿರಲು ಅನುವು ಮಾಡಿಕೊಟ್ಟಿದ್ದು ಈ ಊರು,
ಕೋಟ್ಯಾಂತರ ಜನರಿಗೆ ಬದುಕು ಕಟ್ಟಿ ಕೊಟ್ಟ ವಿಶಾಲ ಹೃದಯಿ , ಅವಕಾಶಗಳ ಆಗರ ನಮ್ಮ ಬೆಂಗಳೂರು
ನಾಲ್ಕು ದಿನದ ಮಳೆಗೆ ರಸ್ತೆ ,ಮನೆಗಳಿಗೆ ನೀರು ನುಗ್ಗಿ ಅವಾಂತರಗಳಾದರೆ ಒಂದು ಹಂತಕ್ಕೆ ಆಡಳಿತದ ಅಸಮರ್ಪಕ ನಿರ್ವಹಣೆಯನ್ನು ಟೀಕಿಸಬಹುದಾದರೂ, ಇಂತಾ ಜಡಿಮಳೆಯ ಪ್ರಕೃತಿ ವಿಕೋಪಕ್ಕೆ ಅಮೇರಿಕ , ಯೂರೋಪ್ ಅಂತಾ ದೇಶಗಳ ಸುಸಜ್ಜಿತ ನಗರಗಳು ಸಿಕ್ಕು ಒದ್ದಾಡಿರುವುದನ್ನು ಗಮನಿಸಬೇಕು. ಏನೇ ಆದರೂ ನಾಲ್ಕು ದಿನದ ಸಂಕಷ್ಟಕ್ಕೆ ವರುಷಗಳಿಂದ ಪೊರೆದ ಮಾತೃ ಹೃದಯಿ ಬೆಂಗಳೂರಿಗೆ ಬೈದರೇ, ಗೇಲಿ ಮಾಡಿದರೆ ಉದ್ಧಾರ ಆಗ್ತಿರ್ರೇನ್ರೋ
ನಮ್ಮ ಬೆಂಗಳೂರು❤️ ನಮ್ಮ ಹೆಮ್ಮೆ❤️
ಇಷ್ಟ ಆಗ್ದೇ ಇರೋರು ದಯಮಾಡಿ
ಗಂಟು ಮೂಟೆ ಕಟ್ಟಿ ಹೊರಡಿ .
ಮತ್ತೆ ಈ ಕಡೆ ಮುಖ ಹಾಕ್ಬೇಡಿ.
ಉಳಿದವರು ನೆಮ್ಮದಿಯಿಂದ ಇರ್ತೀವಿ.
- ಕವಿರಾಜ್.
ಕವಿರಾಜ್ ಅವರು ಬರೆದಿರುವ ಪ್ರತಿ ಸಾಲು ಸಹಾ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಬೆಂಗಳೂರನ್ನು ಟ್ರೋಲ್ ಮಾಡುತ್ತಿರುವವರಿಗೆ ಒಮ್ಮೆ ಈ ವಾಸ್ತವ ಅರ್ಥವಾದರೆ ತಾವು ಮಾಡಿದ್ದು ಎಂತಹ ತಪ್ಪು ಎನ್ನುವುದು ಖಂಡಿತ ಅರ್ಥವಾಗುತ್ತದೆ ಎನ್ನುವುದರಲ್ಲಿ ಅಮುಮಾನವಿಲ್ಲ.