ಮಹಾಲಕ್ಷ್ಮಿ ಮನೆಗೆ ಆಗಮಿಸುವ ಮುನ್ನ ನೀಡುವಳು ಈ ಸಂಕೇತ: ಧನ ಸಂಪತ್ತು ಪ್ರಾಪ್ತಿಯ ಸೂಚನೆಗಳಿವು

Entertainment Featured-Articles News ಜೋತಿಷ್ಯ
63 Views

ಹಿಂದೂ ಧರ್ಮದಲ್ಲಿ ಮಾತೆ ಶ್ರೀ ಮಹಾಲಕ್ಷ್ಮಿಯನ್ನು ಧನದ ಒಡತಿಯೆಂದೂ, ಸಕಲ ಸಂಪತ್ತಿನ ದೇವಿಯೆಂದೂ ಕರೆಯಲಾಗುತ್ತದೆ ಹಾಗೂ ಅನಂತ ಭಕ್ತಿ ಶ್ರದ್ಧೆಗಳಿಂದ ಈ ದೇವಿಯನ್ನು ಪೂಜಿಸಿ, ಆರಾಧಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಯಾರ ಮೇಲೆ ದೇವಿ ಲಕ್ಷ್ಮಿಯ ಕೃಪಾ ಕಟಾಕ್ಷ ಇರುವುದೋ ಅವರಿಗೆ ಜೀವನದಲ್ಲಿ ಧನ ದಾನ್ಯದ ಕೊರತೆ ಎಂದೂ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅಂತಹವರು ಜೀವನದಲ್ಲಿ ಎಲ್ಲಾ ಸುಖ ಭೋಗಗಳನ್ನು ಅನುಭವಿಸುತ್ತಾ ಸುಂದರವಾದ ಬದುಕನ್ನು ಕಟ್ಟಿಕೊಂಡಿರುತ್ತಾರೆ.

ಜೀವನದಲ್ಲಿ ಹಣ, ಆಸ್ತಿ ಸಂಪಾದಿಸುವ ಜೊತೆಗೆ ದೇವಿ ಲಕ್ಷ್ಮಿಯ ಕೃಪೆ ಕೂಡಾ ಇರಬೇಕೆಂದು ಹೇಳುತ್ತಾರೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವ ಅನೇಕ ಮಾರ್ಗಗಳನ್ನು ಸೂಚಿಸಲಾಗಿದೆ. ಅಲ್ಲದೇ ದೇವಿ ಲಕ್ಷ್ಮಿಯ ಕೃಪೆಯು ದೊರೆಯಲಿದೆ ಎನ್ನುವ ಸೂಚನೆಗಳು ಕೂಡಾ ಸಿಗುತ್ತವೆ ಎಂದೂ ಸಹಾ ಹೇಳಲಾಗಿದೆ. ಲಕ್ಷ್ಮೀ ದೇವಿಯು ತನ್ನ ಆಗಮನಕ್ಕೆ ಮುನ್ನ ಕೆಲವು ಸಂಕೇತಗಳನ್ನು ತಪ್ಪದೇ ನೀಡುತ್ತಾಳೆ.

ಹೌದು, ದೇವಿ ಲಕ್ಷ್ಮಿಯು ವ್ಯಕ್ತಿಯೊಬ್ಬರ ಜೀವನದಲ್ಲಿ ತನ್ನ ಕೃಪೆಯನ್ನು ತೋರುವ ಮೊದಲೇ ಅವರಿಗೆ ಸಂಕೇತಗಳು ದೊರೆಯುತ್ತದೆ ಎನ್ನಲಾಗಿದೆ‌. ಈ ಸಂಕೇತಗಳು ಕನಸಿನ ಮಾದ್ಯಮದ ಮೂಲಕ ದೊರೆಯುತ್ತವೆ ಎಂದು ನಂಬಲಾಗಿದೆ. ಹಾಗಾದರೆ ಆ ವಿಶೇಷವಾದ ಕನಸುಗಳು ಯಾವುವು? ಮಾತೆ ಮಹಾ ಲಕ್ಷ್ಮೀ ದೇವಿಯ ಆಗಮನದ ಬಗ್ಗೆ ನಮಗೆ ಸೂಚನೆ ನೀಡುವಂತಹ ಆ ಕನಸುಗಳ ಬಗ್ಗೆ ನಾವು ಇಂದು ತಿಳಿಯೋಣ ಬನ್ನಿ.

ಒಂದು ವೇಳೆ ಯಾರಿಗೇ ಆಗಲೀ ಅವರ ಕನಸಿನಲ್ಲಿ ಹಾವು ಬಿಲದ ಸಹಿತವಾಗಿ ಕಾಣಿಸಿಕೊಂಡರೆ ಅದು ಧನ ಲಾಭದ ಸಂಕೇತವಾಗಿರುತ್ತದೆ. ಯಾವುದೇ ವ್ಯಕ್ತಿಗೆ ತನ್ನ ಕನಸಿನಲ್ಲಿ ತಾನೇ ಮರ ಹತ್ತುವಂತೆ ಕಂಡರೆ ಭವಿಷ್ಯದ ದಿನಗಳಲ್ಲಿ ಧನ ಪ್ರಾಪ್ತಿಯಾಗುತ್ತದೆ. ಅಲ್ಲದೇ ಎಲ್ಲಾ ಕೆಲಸಗಳಲ್ಲೂ ಸಹಾ ಯಶಸ್ಸು ದೊರೆಯುತ್ತದೆ ಹಾಗೂ ತನ್ನ ವೃತ್ತಿ ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುತ್ತಾನೆ ಎಂದು ಹೇಳಲಾಗಿದೆ.

ಕನಸಿನಲ್ಲಿ ಒಂದು ವೇಳೆ ಒಬ್ಬ ಮಹಿಳೆ ಅಥವಾ ಹುಡುಗಿ ನೃತ್ಯ ಮಾಡುತ್ತಿರುವುದು ಕಂಡರೆ ಅದು ಅನಿರೀಕ್ಷಿತ ಧನ ಪ್ರಾಪ್ತಿಯ ಸಂಕೇತವನ್ನು ನೀಡುತ್ತದೆ.
ಕನಸಿನಲ್ಲಿ ಬಂಗಾರದಿಂದ ನಿರ್ಮಿತವಾದಂತಹ ವಸ್ತುಗಳನ್ನು ಕಂಡರೆ ಅದು ಶ್ರೀ ಮಹಾಲಕ್ಷ್ಮಿಯ ಆಗಮನದ ಸಂಕೇತವೆನ್ನಲಾಗಿದೆ. ಕನಸಿನಲ್ಲಿ ಇಲಿಯನ್ನು ಕಂಡರೂ ಸಹಾ ಶುಭ ಸಂಕೇತವೆಂದೇ ಹೇಳಲಾಗಿದೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ವಿವರಣೆ ಸಹಾ ನೀಡಲಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಲಿಯು ಶ್ರೀಗಣೇಶನ ವಾಹನವಾಗಿದ್ದು, ಇದು ಕನಸಿನಲ್ಲಿ ಕಾಣಿಸಿಕೊಂಡರೆ ಗಣೇಶನ ಕೃಪೆಯೊಂದಿಗೆ ಶ್ರೀ ಮಹಾಲಕ್ಷ್ಮಿಯ ಆಗಮನದ ಸಂಕೇತವನ್ನು ಸಹಾ ನೀಡುತ್ತದೆ ಎನ್ನಲಾಗಿದೆ. ಕನಸಿನಲ್ಲಿ ಯಾವುದಾದರೂ ದೇವತೆಗಳ ದರ್ಶನವಾದರೂ ಸಹಾ ಶೀಘ್ರದಲ್ಲೇ ಶ್ರೀ ಮಹಾ ಲಕ್ಷ್ಮಿಯ ಕೃಪಾ ಕಟಾಕ್ಷ ನಿಮಗೆ ದೊರೆಯಲಿದೆ ಎನ್ನುವ ಸಂಕೇತವನ್ನು ಅದು ನೀಡುತ್ತದೆ ಎಂದು ಹೇಳಲಾಗಿದೆ.

ಕನಸಿನಲ್ಲಿ ಒಂದು ವೇಳೆ ಜೇನಿನ ಗೂಡು ಕಂಡರೆ ಇದು ಕೂಡಾ ಲಕ್ಷ್ಮೀ ದೇವಿಯ ಕೃಪೆ ನಿಮಗೆ ಸಿಗಲಿದೆ ಎನ್ನುವ ಸೂಚನೆ ನೀಡುತ್ತದೆ ಎಂದು ಹೇಳಲಾಗಿದೆ. ಹೀಗೆ ಕನಸುಗಳ ಮೂಲಕ ಮಾತೆ ಶ್ರೀ ಮಹಾಲಕ್ಷ್ಮಿಯ ಆಗಮನ ವ್ಯಕ್ತಿಯೊಬ್ಬರ ಜೀವನದಲ್ಲಿ ಆಗಲಿದೆ ಎನ್ನುವುದರ ಸಂಕೇತವು ಸಿಗುತ್ತದೆ ಎನ್ನುವ ನಂಬಿಕೆಯಿದ್ದು, ನಂಬಿ ಆರಾಧಿಸುವವರಿಗೆ ಶುಭ ಫಲಗಳು ದೊರೆಯುತ್ತವೆ ಎನ್ನಲಾಗಿದೆ.

Leave a Reply

Your email address will not be published. Required fields are marked *