ಮರ ಕಡಿಯಬಾರದು ಎಂದು ಅದರ ಮೇಲೆ ಅದ್ಭುತ ಮನೆ ನಿರ್ಮಾಣ ಮಾಡಿದ ವೃಕ್ಷ ಪ್ರೇಮಿ

0 1

ತಮಗೆ ಇಷ್ಟವಾದ ಸುಂದರವಾದ ಮನೆಯನ್ನು ಕಟ್ಟುವುದು ಅನೇಕರ ಕನಸಾಗಿರುತ್ತದೆ. ಒಂದು ಸುಂದರವಾದ ತಾಣದಲ್ಲಿ, ಎತ್ತರವಾದ ಸ್ಥಳದಲ್ಲಿ, ಒಳ್ಳೆಯ ವೀವ್ ಪಾಯಿಂಟ್ ಇರುವ ಕಡೆ ಮನೆ ಕಟ್ಟಿ, ಆ ಸುಂದರ ಮನೆಯಲ್ಲಿ ತಮ್ಮ ಜೀವನ ಕಳೆಯಬೇಕೆಂದು ಅದೆಷ್ಟೋ ಜನರು ಹಣವನ್ನು ಕೂಡಿಡುತ್ತಾರೆ. ಸುಂದರವಾದ ಇಂತಹ ಮನೆಯ ಕನಸು ನನಸಾಗುವುದು ಸಹಾ ಒಂದು ಅದೃಷ್ಟವೇ ಸರಿ. ಆದರೆ ಕೆಲವರು ಇಂತಹ ಕನಸನ್ನು ನನಸು ಮಾಡುವ ಸಲುವಾಗಿ ಮಾಡುವ ಕೆಲಸಗಳು ಅವರನ್ನು ವಿಶ್ವ ಪ್ರಸಿದ್ಧ ಮಾಡುವುದು ಮಾತ್ರವೇ ಅಲ್ಲದೇ ಅವರ ಕಡೆ ಜನ ಆಶ್ಚರ್ಯದ‌‌ ಕಣ್ಣುಗಳಿಂದ ನೋಡುವಂತಾಗುತ್ತದೆ. ಅದು ಮಾತ್ರವೇ ಅಲ್ಲದೇ ದೃಢ ನಿರ್ಧಾರ ಮಾಡಿದರೆ ಅಸಾಧ್ಯ ಸಹಾ ಸುಸ್ಸಾಧ್ಯ ಎನ್ನುವುದಕ್ಕೆ ಮಾದರಿಯಾಗಿ ಅನೇಕರಿಗೆ ಸ್ಪೂರ್ತಿ ಸಹಾ ಆಗುವರು. ಹಾಗಾದರೆ ಅಂತಹ ಒಬ್ಬ ವ್ಯಕ್ತಿಯ ಬಗ್ಗೆ ನಾವು ಇಂದು ತಿಳಿಯೋಣ ಬನ್ನಿ.

ಅವರ ಹೆಸರು ಕುಲ್ ಪ್ರದೀಪ್ ಸಿಂಗ್, ಉದಯಪುರದ ನಿವಾಸಿಯಾದ ಇವರು ಹಕ್ಕಿಗಳು ವಾಸಿಸುವ ತಾಣದಲ್ಲಿ ತಮ್ಮ ಮನೆಯನ್ನು ಕಟ್ಟಿಸಿದ್ದು, ಪಕ್ಷಿಗಳ ಜೊತೆಗೆ ಸುಂದರ ಜೀವನ ನಡೆಸಿದ್ದಾರೆ. ಹಕ್ಕಿಗಳ ಮಧುರ ಕಲರವ ಇವರ ಮನೆಯೊಳಗೆ ಮಾರ್ದನಿಸುತ್ತದೆ. ಹಾಗಾದರೆ ಕುಲ್ ಪ್ರದೀಪ್ ಅವರು ತಮ್ಮ ಮನೆಯ ನಿರ್ಮಾಣಕ್ಕಾಗಿ ದುಬಾರಿ ಹಣ ಖರ್ಚು ಮಾಡಿದ್ದಾರೆ ಎಂದು ಕೊಂಡರೆ ಅದು ನಿಜವಲ್ಲ. ಅವರೇನೂ ಕೋಟಿಗಳು ಖರ್ಚು ಮಾಡಿ ಐಶಾರಾಮೀ ಮನೆಯ ನಿರ್ಮಾಣ ಖಂಡಿತ ಮಾಡಿಲ್ಲ. ಕುಲ್ ಪ್ರದೀಪ್ ಅವರ ಈ ಪರಿಸರ ಪ್ರೇಮಿ, ಸುಂದರವಾದ ಮನೆಯ ಇನ್ನಷ್ಟು ವಿಶೇಷತೆಗಳೇನು? ತಿಳಿದರೆ ಆಶ್ಚರ್ಯ ಪಡುವುದು ಖಂಡಿತ.

ರಾಜಸ್ಥಾನದ ಉದಯಪುರ ತನ್ನ ಕೋಟೆಗಳಿಗಾಗಿ, ವಿಶೇಷ ಸಂಸ್ಕೃತಿಯಿಂದಾಗಿ ಪ್ರವಾಸಿಗರನ್ನು ತನ್ನ ಕಡೆ ಸೆಳೆಯುತ್ತದೆ. ಆದರೆ ಇದೇ ನಗರದಲ್ಲಿ ಈಗ ಕುಲ್ ಪ್ರದೀಪ್ ಅವರ ಮನೆ ಕೂಡಾ ಒಂದು ವಿಶೇಷ ಹಾಗೂ ವಿಸ್ಮಯ ಎನಿಸಿದೆ. ಕುಲ್ ಪ್ರದೀಪ್ ಅವರ ಸುಂದರ ಮನೆಯ‌ ನಿರ್ಮಾಣ ಒಂದು ಮರದ ಮೇಲೆ ಆಗಿದೆ. ನಾಲ್ಕು ಅಂತಸ್ತಿನ ಈ ಮನೆ 40 ಅಡಿಗಳ ಎತ್ತರದ ಮಾವಿನ ಮರದ ಮೇಲೆ‌ ನಿರ್ಮಾಣವಾಗಿದೆ. ಮರದ ಮೇಲೆ ನಿರ್ಮಾಣ ಆಗಿರುವ ಈ ಸುಂದರ ಮನೆಯಲ್ಲಿ ಒಂದು ಸಾಮಾನ್ಯ ಮನೆಯಲ್ಲಿ ಇರಬೇಕಾದ ಎಲ್ಲಾ ಸೌಲಭ್ಯಗಳು ಅಂದರೆ ಕಿಚನ್, ಹಾಲ್, ಬೆಡ್ ರೂಂ, ಲೈಬ್ರರಿ, ಬಾತ್ ರೂಂ ಹೀಗೆ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವ ಸೌಲಭ್ಯಗಳು ಲಭ್ಯವಿದೆ.

ಕುಲ್ ದೀಪ್ ಅವರು ಮೂಲತಃ ಅಜ್ಮೇರ್ ನ ನಿವಾಸಿ. ಆದರೆ ಅವರಿಗೆ ಉದಯಪುರ ಬಹಳ ಇಷ್ಟವಾದ ಸ್ಥಳವಾದ್ದರಿಂದ‌ ಇಲ್ಲಿ ಮನೆ ಕಟ್ಟಿಸಿಕೊಂಡು ವಾಸಿಸುತ್ತಿದ್ದಾರೆ. ಅವರು ಇಲ್ಲಿ ಮನೆ ಕಟ್ಟಲು ಬಯಸಿ ನಿವೇಶನ ನೋಡಿದ ಸ್ಥಳಕ್ಕೆ ಬಹಳ ಹಿಂದೆ ಕುಂಜರೋ ಕೀ ಬಾಡಿ ಎಂದು ಕರೆಯಲಾಗುತ್ತಿತ್ತು. ಇಲ್ಲಿ ಜನ ಹಣ್ಣಿನ ಮರಗಳನ್ನು ನೆಟ್ಟು ಅದನ್ನು ಮಾರಿ ಜೀವನ ನಡೆಸುತ್ತಿದ್ದರು. ಆದರೆ ಕಾಲ‌ ಕಳೆದಂತೆ ಜನಸಂಖ್ಯೆ ಹೆಚ್ಚಿ ಮನೆಗಳ‌ ನಿರ್ಮಾಣಕ್ಕಾಗಿ 4000 ಮರಗಳನ್ನು ಕತ್ತರಿಸಿ ಹಾಕಲಾಗಿತ್ತು. ಯಾವಾಗ ಕುಲ್ ದೀಪ್ ಅವರ ಮನೆ ನಿರ್ಮಾಣಕ್ಕಾಗಿ ಇಂಜಿನಿಯರ್ ಮರ ಕಡಿಯಬೇಕು ಎಂದರೋ ಆಗ ಕುಲ್ ದೀಪ್ ಅದಕ್ಕೆ ಒಪ್ಪಲಿಲ್ಲ.

ಮರವನ್ನು ಬೇರೆ ಸ್ಥಳಕ್ಕೆ ಶಿಫ್ಟ್ ಮಾಡಲು ಒಪ್ಪದ ಅವರು ಮರದ ಮೇಲೆಯೇ ಮನೆ ನಿರ್ಮಾಣ ಮಾಡಲು ಪ್ಲಾನ್ ಮಾಡುವಂತೆ ಹೇಳಿದರು. ಸ್ವತಃ ತಾನು ಇಂಜಿನಿಯರ್ ಆಗಿದ್ದ ಅವರು ಒಂದು ಒಳ್ಳೆ ಯೋಜನೆ ಸಿದ್ಧ ಮಾಡಿ ಮನೆ ನಿರ್ಮಾಣ 1999 ರಲ್ಲಿ ಪ್ರಾರಂಭ ಮಾಡಿದರು. ಇವರ ಮನೆ ಭೂಮಿಯಿಂದ 9 ಅಡಿಗಳಷ್ಟು ಮೇಲಿದೆ. ಮನೆ ಕಟ್ಟಲು ಪ್ರಾರಂಭಿಸಿದಾಗ 20 ಅಡಿಗಳಿದ್ದ ಮನೆ ಇಂದು 40 ಅಡಿಗಳಷ್ಟು ಎತ್ತರವಾಗಿದೆ. ಮೊದಲು ಎರಡು ಅಂತಸ್ತಿನ ಮನೆ ನಿರ್ಮಾಣ ಮಾಡಿದರು. ಇಂದು ನಾಲ್ಕು ಅಂತಸ್ತಿನ ಮನೆಯ ನಿರ್ಮಾಣ ಆಗಿದೆ. ಮನೆ ನಿರ್ಮಾಣ ಮಾಡಲು ಮಾಡಿದ ಯೋಜನೆ ವಿಶೇಷತೆ ಏನೆಂದರೆ ಈ ಮರದ ಕೊಂಬೆಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರ ವಹಿಸಲಾಗಿದೆ.

ಮನೆಯ ವಿವಿಧ ಕೋಣೆಗಳ ಮೂಲಕ ಮರದ ಕೊಂಬೆಗಳು ಹಾದು ಹೋಗಿರುವುದನ್ನು ನಾವು ಗಮನಿಸಬಹುದಾಗಿದೆ. ಅಲ್ಲದೇ ಕೊಂಬೆಗಳ ಹತ್ತಿರ ಬುಕ್ ಶೆಲ್ಫ್, ಸೋಫಾ, ಟಿವಿ ಸ್ಟ್ಯಾಂಡ್ ಇತ್ಯಾದಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮನೆಯಲ್ಲಿ ನಿರ್ಮಿಸಿರುವ ಮೆಟ್ಟಿಲುಗಳು ರಿಮೋಟ್ ನಿಯಂತ್ರಣವನ್ನು ಹೊಂದಿದೆ. ಅಲ್ಲದೆ, ಮನೆ ಕಟ್ಟುವ ಮುನ್ನ,ಅವರು ಮರದ ಬಳಿ 4 ಕಂಬಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಅವುಗಳಲ್ಲಿ ಒಂದು ‘ವಿದ್ಯುತ್ ಕಂಡಕ್ಟರ್’ ಆಗಿದೆ.

ಇದರಿಂದಾಗಿ ಮಳೆಗಾಲದಲ್ಲಿ ಈ ಮರದ ಮೇಲೆ ಸಿಡಿಲು ಬೀಳುವ ಅಪಾಯವಿಲ್ಲ. ಈ ಮನೆಯ ಸಂಪೂರ್ಣ ರಚನೆಯನ್ನು ಉಕ್ಕಿನಿಂದ ಮಾಡಲಾಗಿದ್ದು, ಇದರ ಗೋಡೆಗಳು ಮತ್ತು ಮಹಡಿಗಳನ್ನು ಫೈಬರ್ ಮತ್ತು ಸೆಲ್ಯುಲೋಸ್ ಹಾಳೆಗಳನ್ನು ಬಳಸಿ ಮಾಡಲಾಗಿದೆ, ಇದರಲ್ಲಿ ಸಿಮೆಂಟ್ ಅನ್ನು ಎಲ್ಲಿಯೂ ಬಳಸಲಾಗಿಲ್ಲ ಎನ್ನುವುದು ಸಹಾ ವಿಶೇಷವಾಗಿದೆ. ಮರದ ಕೊಂಬೆಗಳು ಬೆಳೆದರೆ ಅವರು ಹಾದು ಹೋಗಲು ಗೋಡೆಯಲ್ಲಿ ತೂತುಗಳನ್ನು ಸಹಾ ಕೊರೆಯಲಾಗಿದೆ.
ಇವರ ಮನೆಗೆ ಆಗಾಗ ಪಕ್ಷಿಗಳು ಹಾಗೂ ಕೋತಿಗಳು ಭೇಟಿ ನೀಡುತ್ತವೆ.

ಕುಲ್ ದೀಪ್ ಅವರು ಅವುಗಳಿಗೆ ತೊಂದರೆ ನೀಡುವುದಿಲ್ಲ, ಬದಲಾಗಿ ಅವುಗಳ ಮನೆಗೆ ನಾವು ಬಂದಿದ್ದೇವೆ ಅದಕ್ಕೆ ಅವುಗಳಿಗೆ ನಾವು ಯಾವುದೇ ರೀತಿ ತೊಂದರೆ ನೀಡುವುದಿಲ್ಲ ಎನ್ನುತ್ತಾರೆ. ಕುಲ್ ದೀಪ್ ಅವರ ಈ ಮನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಉದಯಪುರದಲ್ಲಿ ಅಕ್ಷರಶಃ ಕುಲ್ ದೀಪ್ ಅವರ ಮನೆಯು ಒಂದು ಪ್ರಮುಖವಾದ ಆಕರ್ಷಣೆಯಾಗಿದ್ದು, ಬಹಳಷ್ಟು ಜನ ಈ ಮನೆಯನ್ನು ನೋಡಲು ಬರುತ್ತಾರೆ.. ಅವರ ಮನೆ ಭವ್ಯವಾದ ಮಹಲು ಅಲ್ಲದೇ ಹೋದರೂ ತನ್ನದೇ ಆದ ವಿಶೇಷತೆ ಖಂಡಿತ ಹೊಂದಿದೆ.

Leave A Reply

Your email address will not be published.