ಜೀವನದಲ್ಲಿ ಒಂದಲ್ಲಾ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಕೂಡಾ ಒಂದಲ್ಲಾ ಒಂದು ಸಮಸ್ಯೆ, ಸಂಕಷ್ಟ ಎನ್ನುವುದು ಎದುರಾಗುತ್ತದೆ. ಆಗ ನಮಗೆ ಯಾರಾದರೂ ಸಹಾಯವನ್ನು ಮಾಡಿದರೆ ಖಂಡಿತ ನಾವು ಅವರನ್ನು ಜೀವನವಿಡೀ ಮರೆಯಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಹೀಗೆ ಸಹಾಯ ಮಾಡುವ ಜನರ ಸಂಖ್ಯೆ ಬೆರಳೆಣಿಕೆಯಾಗಿದೆ. ನಾಗರಿಕತೆ ಅಭಿವೃದ್ಧಿ ಕಡೆ ಸಾಗಿದ ಹಾಗೆ ಮನುಷ್ಯರು ಜೀವನ ಮೌಲ್ಯಗಳನ್ನು ಕಳೆದುಕೊಂಡು, ಯಂತ್ರ ಮಾನವರ ಹಾಗೆ ಜೀವನವನ್ನು ನಡೆಸಲು ಮುಂದಾಗಿದ್ದಾರೆ ಎನ್ನುವುದು ವಿಪರ್ಯಾಸ ಆದರೂ ಅದೇ ವಾಸ್ತವ.
ಆದರೆ ಈಗ ಮನುಷ್ಯ ಮರೆತ ಸಹಾಯ ಮಾಡುವ, ಸಹಾನುಭೂತಿ ಮೆರೆಯುವ ಗುಣವನ್ನು ಪ್ರಾಣಿಯೊಂದು ನೆನಪಿಸಿದೆಯೇನೋ ಎನ್ನುವ ಹಾಗೆ ಒಂದು ವೀಡಿಯೋ ವೈರಲ್ ಆಗುತ್ತಿದೆ. ಹೌದು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿರುವ ಒಂದು ವೀಡಿಯೋ ಒಂದು ವಿಶೇಷ ಸಂದೇಶವನ್ನು ತನ್ನೊಡನೆ ಹೊತ್ತು ತಂದಿದೆ ಎನ್ನುವಂತಿದೆ. ಈ ವೀಡಿಯೋದಲ್ಲಿ ಎಮ್ಮೆಯೊಂದು ಆಮೆಯ ಸಂಕಟಕ್ಕೆ ಮಿಡಿದ ಪರಿಯನ್ನು ನೋಡಿ ನೆಟ್ಟಿಗರು ಮೆಚ್ಚುಗೆಗಳನ್ನು ಹರಿಸಿದ್ದಾರೆ.
ವೀಡಿಯೋ ಸುದ್ದಿಗೆ ಬಂದರೆ ಬಯಲೊಂದರಲ್ಲಿ ಆಮೆಯೊಂದು ತಲೆ ಕೆಳಗಾಗಿ ಬಿದ್ದಿದ್ದು, ಮೇಲೇಳಲು ಅದು ಕಷ್ಟ ಪಡುವಾಗ, ಎಮ್ಮೆಯೊಂದು ಅಲ್ಲಿಗೆ ಬಂದಿದ್ದು ಅದು ಆಮೆಯ ಕಷ್ಟವನ್ನು ಅರ್ಥ ಮಾಡಿಕೊಂಡು, ತನ್ನ ಕೊಂಬಿನಿಂದ ಆಮೆಯ ಚಿಪ್ಪಿನ ಭಾಗವನ್ನು ಮೇಲೆತ್ತಿ ಅದು ಸಾಮಾನ್ಯ ಸ್ಥಿತಿಗೆ ಮರಳಲು ನೆರವಾಗುತ್ತದೆ. ಆಮೆ ಅನಂತರ ಹಾಯಾಗಿ ಮುಂದೆ ಹೋಗಲು ಎಮ್ಮೆ ಸಹಾಯವನ್ನು ಮಾಡಿದೆ. ಈ ವೀಡಿಯೋ ನಿಜಕ್ಕೂ ಒಂದು ಅದ್ಭುತವೇ ಸರಿ.
ವೀಡಿಯೋ ನೋಡಿದ ನೆಟ್ಟಿಗರು ಸಹಾ ಮನುಷ್ಯ ಇಂತಹ ವೀಡಿಯೋಗಳನ್ನು ನೋಡಿ ಪ್ರಾಣಿಗಳಿಂದ ಆದರೂ ಹೇಗೆ ಒಬ್ಬರಿಗೊಬ್ಬರು ಸಹಾಯವನ್ನು ನೀಡಬೇಕು, ಸಂಕಷ್ಟ ದಲ್ಲಿ ಸಿಲುಕಿರುವವರಿಗೆ ನೆರವನ್ನು ನೀಡುವುದನ್ನು ಕಲಿಯಬೇಕು ಎಂದಿದ್ದಾರೆ. ಇನ್ನು ವೀಡಿಯೋ ಶೇರ್ ಮಾಡಿಕೊಂಡ ಸುಶಾಂತ್ ನಂದ ಅವರು ದಯಾಳುಗಳು ಎಲ್ಲೆಡೆಯಲ್ಲಿಯೂ ಇರುತ್ತಾರೆ ಎಂದು ತಮ್ಮ ಶೀರ್ಷಿಕೆಯಲ್ಲಿ ಬರೆದುಕೊಂಡು ಎಮ್ಮೆಯನ್ನು ಹೊಗಳಿದ್ದಾರೆ.