ಮನಸ್ಸಿನ ನೋವಿಗೆ ಅಕ್ಷರ ರೂಪ ನೀಡುತ್ತಲೇ, ಮತ್ತೊಮ್ಮೆ ದೊಡ್ಡತನ ಮೆರೆದ ಅಶ್ವಿನಿ ಪುನೀತ್ ಅವರು

Entertainment Featured-Articles News
70 Views

ಅದಾಗಲೇ ಇಪ್ಪತ್ತು ದಿನಗಳು ಕಳೆದು ಹೋದರೂ ಕೂಡಾ ಪುನೀತ್ ಅವರ ಅಗಲಿಕೆಯ ವಾಸ್ತವವನ್ನು ಮನಸ್ಸು ಒಪ್ಪಲು ಸಿದ್ಧವಿಲ್ಲ. ಪುನೀತ್ ರಾಜ್‍ಕುಮಾರ್ ಅವರು ನಮ್ಮೊಂದಿಗೆ ಇದ್ದಾರೆ ಎನ್ನುವ ಭಾವನೆಯೇ ಎಲ್ಲರಲ್ಲೂ ಇನ್ನೂ ಇದೆ. ಅವರ ಅಗಲಿಕೆಯ ನೋವು ಎಲ್ಲರಿಗಿಂತ ಹೆಚ್ಚಾಗಿ ಕಾಡಿರುವುದು ಅವರ ಪತ್ನಿ ಅಶ್ವಿನಿ ಅವರಿಗೆ. ಆದರೂ ಸಾರ್ವಜನಿಕವಾಗಿ ಎಲ್ಲೂ ಸಹಾ ಕಣ್ಣೀರು ಹಾಕದ ಅವರ ಈ ಪ್ರಬುದ್ಧ ನಡೆ ನಿಜಕ್ಕೂ ಗೌರವನೀಯವಾದುದು. ಅಭಿಮಾನಿಗಳು ತಮ್ಮ‌ ಕಣ್ಣಲ್ಲಿ ನೀರು ಕಂಡರೆ ಮತ್ತಷ್ಟು ಭಾವುಕರಾಗುವರೆನ್ನುವ ಕಾರಣಕ್ಕೆ ಅವರು ಎಲ್ಲೂ ಕಣ್ಣೀರು ಹಾಕಿಲ್ಲ.

ಪುನೀತ್ ನಮನ ಕಾರ್ಯಕ್ರಮದಲ್ಲಿಯೂ ಸಹಾ ಅವರು ಹೆಚ್ಚು ಹೊತ್ತು ಇರಲಿಲ್ಲ. ಪುನೀತ್ ಅವರನ್ನು ಹೀಗೆ ನೋಡುವುದು ಸಾಧ್ಯ ಇಲ್ಲವೆಂದು ಅವರು ಮಗಳೊಟ್ಟಿಗೆ ಮನೆಗೆ ಹೊರಟು ಬಿಟ್ಟರು. ಇವೆಲ್ಲವುಗಳ ಬೆನ್ನಲ್ಲೇ ಅಶ್ವಿನಿ ಅವರು ನಾಡಿನ ಜನರು ಪುನೀತ್ ಅವರ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನಕ್ಕೆ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಾ, ತಮ್ಮ ಮನಸ್ಸಿನ ನೋವನ್ನು ಪತ್ರ ಮುಖೇನ ಹಂಚಿಕೊಂಡಿದ್ದಾರೆ.‌ ಅಶ್ವಿನಿ ಅವರು ಪತ್ರದಲ್ಲಿ, ಶ್ರೀ ಪುನೀತ್ ರಾಜ್‌ಕುಮಾರ್‌ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ.

ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ‘ ಪವರ್ ಸ್ಟಾರ್ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೆ ಅವರ ವಿದಾಯ ತಂದಿತ್ತ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ . ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ , ಅಹಿತಕರ ಘಟನೆಗಳು ನಡೆಯಲು ಬಿಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದಿರಿ.

ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ , ವಯೋಮಾನದ ಮಿತಿಯಿಲ್ಲದೇ , ದೇಶವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ತುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ , ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ.

ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತೂರ್ವಕ ಧನ್ಯವಾದಗಳು ಎಂದು ಬರೆದುಕೊಂಡು ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ಅವರು ಬರೆದಿರುವ ಒಂದೊಂದು ಪದವೂ ಕೂಡಾ ಓದುಗರನ್ನು ಭಾವುಕರನ್ನಾಗಿಸಿದರೆ, ದೊಡ್ಮನೆಯ ಸೊಸೆಯ ದೊಡ್ಡತನ ಅಕ್ಷರಗಳ ರೂಪದಲ್ಲಿ ಮೂಡಿ ಬಂದಿದೆ.

Leave a Reply

Your email address will not be published. Required fields are marked *