ದೇಶದಲ್ಲಿ ಮದುವೆಗಳ ಸೀಸನ್ ನಡೆಯುತ್ತಿದೆ. ಈ ಮದುವೆಗಳ ನಡುವೆಯೇ ಒಂದು ಮದುವೆಯ ವಿಷಯ ಭಾರೀ ಸದ್ದನ್ನು ಮಾಡುತ್ತಿದೆ. ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಐಎಸ್ಎಫ್ ಅಧಿಕಾರಿಯೊಬ್ಬರ ಜೊತೆ ಸಪ್ತಪದಿ ತುಳಿದಿದ್ದು, ಇವರ ಮದುವೆಯ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ ಐಎಎಸ್ ಅಧಿಕಾರಿ ತಪಸ್ಯ ಪರಿಹಾರ್ ಅವರು ಐಎಫ್ಎಸ್ ಅಧಿಕಾರಿ ಗರ್ವಿತ್ ಗಂಗಾವರ್ ಅವರ ಜೊತೆ ವಿವಾಹ ಬಂಧನಕ್ಕೆ ಒಳಗಾಗಿದ್ದು ಇವರ ಮದುವೆ ಈಗ ದೊಡ್ಡ ಸುದ್ದಿಯಾಗಲು ಒಂದು ಬಲವಾದ ಕಾರಣ ಖಂಡಿತ ಇದೆ.
ಹಿಂದೂ ವಿವಾಹ ಸಂಪ್ರದಾಯಗಳಲ್ಲಿ ವಧುವಿನ ತಂದೆಯು ವರನಿಗೆ ತನ್ನ ಮಗಳನ್ನು ಕನ್ಯಾದಾನದ ಮೂಲಕ ಧಾರೆ ಎರೆದು ಕೊಡುವುದು ಒಂದು ಪ್ರಮುಖವಾದ ಸಂಪ್ರದಾಯವಾಗಿದ್ದು, ವಿವಾಹದ ಒಂದು ಬಹು ಮುಖ್ಯ ಭಾಗವಾಗಿದೆ. ಆದರೆ ತಪಸ್ಯ ಪರಿಹಾರ್ ಅವರು ತಮ್ಮ ವಿವಾಹದ ವೇಳೆ ಕನ್ಯಾದಾನ ಸಂಪ್ರದಾಯಕ್ಕೆ ಬ್ರೇಕ್ ಹಾಕಿಸಿದ್ದಾರೆ. ಈ ಸಂಪ್ರದಾಯವನ್ನು ಪಾಲಿಸುವುದು ಬೇಡ ಎಂದು ತಮ್ಮ ತಂದೆಗೆ ಅವರು ಹೇಳಿದ್ದು, ಇದೇ ವಿಚಾರ ಈಗ ಎಲ್ಲಾ ಕಡೆ ಚರ್ಚೆಯ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ.
ಐಎಎಸ್ ಅಧಿಕಾರಿ ತಪಸ್ಯ ಅವರು ಮದುವೆಯ ವೇಳೆ ಕನ್ಯಾದಾನ ಸಂಪ್ರದಾಯದ ಬಗ್ಗೆ ವಿಭಿನ್ನವಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ. ತಪಸ್ಯ ಬಾಲ್ಯದಿಂದಲೂ ಕೂಡಾ ಹೇಗೆ ಹೆತ್ತ ಮಗಳನ್ನು ಇನ್ಯಾರಿಗೂ ದಾನ ಮಾಡಿ ಬಿಡಲು ಸಾಧ್ಯ?? ಎನ್ನುವ ಆಲೋಚನೆಯನ್ನು ಹೊಂದಿದ್ದರು ಎನ್ನಲಾಗಿದೆ. ಆದ್ದರಿಂದಲೇ ಅವರು ತಮ್ಮ ಮದುವೆಯಲ್ಲಿ “ತಾನು ದಾನದ ವಸ್ತುವಲ್ಲ, ನಾನು ನಿಮ್ಮ ಮಗಳು, ಆದ್ದರಿಂದ ನೀವು ಕನ್ಯಾದಾನ ಮಾಡಬಾರದು ” ಎಂದು ತಮ್ಮ ತಂದೆಗೆ ಹೇಳಿದ್ದಾರೆ ಎಂದಿದ್ದು ಕನ್ಯಾದಾನ ಸಂಪ್ರದಾಯವನ್ನು ಕೈ ಬಿಡಲಾಗಿದೆ.
ತಪಸ್ಯ ಅವರನ್ನು ಮದುವೆ ಆದ ಗರ್ವಿತ್ ಅವರು ಮಾತನಾಡಿ, ಮದುವೆಯ ನಂತರ ಹೆಣ್ಣು ಏಕೆ ಸಂಪೂರ್ಣವಾಗಿ ಬದಲಾಗಬೇಕು, ಮಾಂಗಲ್ಯ, ಸಿಂಧೂರ, ಕಾಲುಂಗರಗಳಂತಹ ಸಂಪ್ರದಾಯ ಮಹಿಳೆಗೆ ಮದುವೆ ಆಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ, ಆದರೆ ಪುರುಷರಿಗೆ ಇಂತಹ ಯಾವುದೇ ನಿಯಮಗಳು ಇಲ್ಲ. ಕಾಲ ಬದಲಾಗುತ್ತಿದೆ ಇಂತಹ ಸಂಪ್ರದಾಯಗಳು ಕೂಡಾ ಬದಲಾಗಬೇಕು ಎನ್ನುವ ಮಾತುಗಳನ್ನು ಹೇಳಿದ್ದಾರೆ.