ಮದುವೆ ಮಂಟಪದಿಂದ ಹೊರಟು ಕೌನ್ಸಿಲಿಂಗ್ ಗೆ ಹೋಗಿ ಉದ್ಯೋಗ ಪಡೆದು ಮರಳಿದ ವಧು

Entertainment Featured-Articles News
41 Views

ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ತನ್ನ ಮದುವೆಯ ದಿನ ಬಹಳ ವಿಶೇಷವಾಗಿರುತ್ತದೆ. ಅಂದು ವಧು ವರ ಇಬ್ಬರೂ ತಮ್ಮ‌ ಜೀವನ ಸಂಗಾತಿಯೊಡನೆ ಜೀವನ ಪೂರ್ತಿ ಜೊತೆಯಾಗಿರುವ ಆಣೆಯನ್ನು ಮಾಡುತ್ತಾರೆ. ಆದರೆ ಅದೇ ಮದುವೆಯ ದಿನವೇ ವರನನ್ನು ಬಿಟ್ಟು ಮದುವೆ ಮಂಟಪದಿಂದ ಹೋದ ವಧು ಮತ್ತೆ ಉದ್ಯೋಗದೊಂದಿಗೆ ವಾಪಸ್ಸು ಬಂದರೆ ಹೇಗಿರುತ್ತದೆ?? ವಿಚಿತ್ರ ಎನಿಸಬಹುದು ಆದರೆ ಇದು ವಾಸ್ತವ. ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು, ಮದುವೆಗಾಗಿ ಕೈಗೆ ಮೆಹಂದಿ ಹಾಕಿಕೊಂಡು, ಬೈತಲೆಯಲ್ಲಿ ಸಿಂಧೂರ ಧರಿಸಿದ್ದ ವಧು ಶಿಕ್ಷಕರ ನೇಮಕಾತಿ ಗಾಗಿ ನಡೆದ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಿದ್ದಾರೆ.

ಗೊಂಡಾ ಜಿಲ್ಲೆಯಲ್ಲಿ ಶಿಕ್ಷಕರ ನೇಮಕಾತಿಯ ಭಾಗವಾಗಿ ಮಹಿಳಾ ಶಿಕ್ಷಕಿಯರ ನೇಮಕಾತಿಯ ಕೌನ್ಸಿಲಿಂಗ್ ನಡೆಯುತ್ತಿತ್ತು. ಅದರಲ್ಲಿ ಪ್ರಜ್ಞಾ ತಿವಾರಿ ಅವರ ಹೆಸರು ಕೂಡಾ ಇತ್ತು. ಕೌನ್ಸಿಲಿಂಗ್ ಗೆ ಒಂದು ದಿನ ಮೊದಲೇ ಪ್ರಜ್ಞಾ ಅವರಿಗೆ ವಿವಾಹವಾಗಿತ್ತು. ಮರುದಿನ ಅವರ ಸಂಪ್ರದಾಯದಂತೆ ಬಿದಾಯಿ ಅಂದರೆ ವಧುವನ್ನು ಅತ್ತೆ ಮನೆಗೆ ಕಳುಹಿಸುವ ಸಂಪ್ರದಾಯದ ಆಚರಣೆ ಇತ್ತು. ರಾತ್ರಿ ಮದುವೆಯ ಎಲ್ಲಾ ಸಂಪ್ರದಾಯಗಳಿಗೂ ವರನ ಜೊತೆಯಲ್ಲಿ ಇದ್ದ ಪ್ರಜ್ಞಾ ಮರುದಿನ ಬೆಳಗ್ಗೆ ಐದು ಗಂಟೆಗೆ ಎದ್ದು ಸಿದ್ಧರಾಗಿ ಬಿದಾಯಿ ಸಂಪ್ರದಾಯವನ್ನು ಮುಂದಕ್ಕೆ ಹೂಡುವಂತೆ ಹೇಳಿ ಬಿಸಿಎಸ್ಸಿ ಕಛೇರಿಯಲ್ಲಿ ಕೌನ್ಸಿಲಿಂಗ್ ಅಟೆಂಡ್ ಮಾಡಲು ಹೋಗಿದ್ದಾರೆ.

ಪ್ರಜ್ಞಾ ಅವರ ಕೈಯಲ್ಲಿ ಮೆಹೆಂದಿ, ಅವರು ಧರಿಸಿದ್ದ ಸಿಂಧೂರ ಎಲ್ಲವನ್ನು ನೋಡಿ ಕಛೇರಿಯಲ್ಲಿ ಇದ್ದವರೆಲ್ಲಾ ಅಚ್ಚರಿಯಿಂದ ಆಕೆಯನ್ನು ನೋಡಿದ್ದರು. ಹೊಸ ಮದುವೆ ಹೆಣ್ಣು ಪ್ರಜ್ಞಾ ಅವರು ಕೈಯಲ್ಲಿ ಅಗತ್ಯ ಇರುವ ದಾಖಲೆಗಳನ್ನು ಹಿಡಿದು ಇತರೆ ಅಭ್ಯರ್ಥಿಗಳ ಜೊತೆಗೆ ಸಾಲಿನಲ್ಲಿ ನಿಂತು, ಕೌನ್ಸಿಲಿಂಗ್ ಅಟೆಂಡ್ ಮಾಡಿದ್ದಾರೆ. ದಾಖಲೆಗಳನ್ನು ತೋರಿಸಿದ ನಂತರ ಅವರು ಅಧಿಕಾರಿಗಳ ಮುಂದೆ ಹಾಜರಾದಾಗ ಒಂದು ಕ್ಷಣ ಅಧಿಕಾರಿಗಳಿಗೂ ಸಹಾ ಅದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಎಲ್ಲ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದ ಮೇಲೆ ಪ್ರಜ್ಞಾ ಅವರು ಸರ್ಕಾರಿ ಉದ್ಯೋಗಕ್ಕೆ ನೇಮಕವಾಗಿದ್ದಾರೆ.

ಇನ್ನೊಂದು ಕಡೆ ಮದುವೆ ಉಳಿದ ಸಾಂಪ್ರದಾಯಿಕ ಆಚರಣೆಗಳನ್ನು ನಡೆಸಲು ಗಂಡಿನ ಕಡೆಯವರು ಪ್ರಜ್ಞಾ ಅವರ ಆಗಮನದ ನಿರೀಕ್ಷೆಯಲ್ಲಿ ಇದ್ದರು. ಅನಂತರ ಪ್ರಜ್ಞಾ ಒಂದು ಸಿಹಿ ಸುದ್ದಿ ಯೊಂದಿಗೆ ಮರಳಿದ್ದು ಅವರನ್ನು ಗಂಡನ ಮನೆಗೆ ಬೀಳ್ಕೊಡುವ ಸಂಪ್ರದಾಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ. ಒಂದು ಕಡೆ ಜೀವನ ಇನ್ನೊಂದು ಕಡೆ ವೃತ್ತಿ ಎರಡಕ್ಕೂ ಮಹತ್ವ ನೀಡಿದ ಪ್ರಜ್ಞಾ ಅವರ ಕುರಿತಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ.

ಪ್ರಜ್ಞಾ ಅವರು ಮಾತನಾಡುತ್ತಾ ತಂದೆ ತಾಯಿ ತಮ್ಮ ಹೆಣ್ಣು ಮಕ್ಕಳಿಗೆ ಅವರಿಗೆ ಸರಿಯಾದ ಶಿಕ್ಷಣವನ್ನು ನೀಡುವ ಕಡೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ. ಇದರಿಂದ ಹೆಣ್ಣು ಮಕ್ಕಳು ಕೂಡಾ ಸ್ವಾವಲಂಬಿ ಗಳಾಗಲು, ಜೀವನವನ್ನು ಎದುರಿಸಲು ಸಜ್ಜಾಗುತ್ತಾರೆ. ಪ್ರಜ್ಞಾ ತನ್ನ ಈ ಯಶಸ್ಸಿನ ಕಾರಣ ತನ್ನ ತಂದೆ ತಾಯಿ ತನಗೆ ಕೊಟ್ಟ ಪ್ರೋತ್ಸಾಹ ಹಾಗೂ ಬೆಂಬಲವೇ ಎಂದು ಹೇಳುವ ಮೂಲಕ, ಹೆತ್ತವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *