ಮದುವೆ ಎಂದರೆ ಲಕ್ಷ ಲಕ್ಷ ಖರ್ಚಲ್ಲ ಎಂದು ಸೈಕಲ್ ಏರಿದ DSP ಸಾಹೇಬ್ರ ಸರಳ ವಿವಾಹ :ಅಚ್ಚರಿ ಪಟ್ಟ ಜನ

Entertainment Featured-Articles News
39 Views

ಇಂದಿನ ದಿನಗಳಲ್ಲಿ ಮದುವೆ ಎಂದರೆ ಅದು ಲಕ್ಷಾಂತರ ರೂಪಾಯಿಗಳ ಖರ್ಚಿನ ವಿಷಯವಾಗಿದೆ. ಶ್ರೀಮಂತರು ಹಾಗೂ ಸೆಲೆಬ್ರಿಟಿಗಳ ಐಶಾರಾಮೀ ಮದುವೆ ಎಂದರೆ ಮುಗೀತು ಅಲ್ಲಿ ಕೋಟಿಗಳಷ್ಟು ಹಣ ಖರ್ಚಾಗಬಹುದು. ಮದುವೆ ಮಂಟಪ ಅಲಂಕಾರಕ್ಕಾಗಿ, ವಧು, ವರನ ಅಲಂಕಾರಕ್ಕಾಗಿ ಆಧುನಿಕ ಹಾಗೂ ದುಬಾರಿ ಬೆಲೆಯ ವಸ್ತುಗಳನ್ನು ಬಳಸಲಾಗುತ್ತದೆ. ವಜ್ರದ ಉಂಗುರ, ಚಿನ್ನದ ಆಭರಣಗಳು, ದುಬಾರಿ ಬೆಲೆಯ ಕೈ ಗಡಿಯಾಗ ಹೀಗೆ ಅನೇಕ ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ. ಅನೇಕರಿಗೆ ಮದುವೆ ಎನ್ನುವುದು ಸ್ಥಾನ ಮಾನದ ವಿಚಾರವೂ ಆಗಿ ಬಿಟ್ಟಿರುತ್ತದೆ.

ಆದರೆ ಇಂತಹ ಆಲೋಚನೆಗಳಿಗೆ ಭಿನ್ನವಾಗಿ ಮಧ್ಯಪ್ರದೇಶದ ಪೃಥ್ವಿಪುರದ ಡಿ ಎಸ್ ಪಿ ಸಂತೋಷ್ ಪಟೇಲ್ ಅವರು ಬಹಳ ಸರಳ ವಿವಾಹವನ್ನು ಮಾಡಿಕೊಳ್ಳುವ ಮೂಲಕ ಮಾದರಿಯಾಗಿದ್ದು, ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಡಿ ಎಸ್ ಪಿ ಸಂತೋಷ್ ಪಟೇಲ್ ಅವರ ಮದುವೆ ಆಧುನಿಕತೆಯ ನಡುವೆಯೂ ಸರಳತೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಮೇಳೈಸಿ ನಡೆದು ಜನರು ಈ ವಿಶಿಷ್ಟ ಮದುವೆಗೆ ಮೆಚ್ಚುಗೆ ನೀಡಿದ್ದಾರೆ.

ಸಂತೋಷ್ ಪಟೇಲ್ ಅವರು ಪನ್ನಾ ಜಿಲ್ಲೆಯ ಅಜಯ್ ಗಢ್ ನ ಬಳಿಯ ದೇವಗಾಂವ್ ನ ನಿವಾಸಿಯಾಗಿದ್ದಾರೆ.‌ ಅವರು ಚಂದ್ಲಾದ ಗಹ್ರಾವನ್ ಹಳ್ಳಿಯ ರೋಶನಿ ಎನ್ನುವವರನ್ನು ವಿವಾಹವಾಗಿದ್ದಾರೆ. ಸಂತೋಷ್ ಅವರು ತಲೆಗೆ ಖರ್ಜೂರದ ಎಲೆಗಳಿಂದ ಮಾಡಿದ ಪೇಟವನ್ನು ಧರಿಸಿದ್ದರು, ರೋಶನಿ ಕೂಡಾ ಪತಿಗೆ ಸಾಥ್ ನೀಡಿ ಸರಳವಾದ ಉಡುಗೆಯನ್ನು ತೊಟ್ಟಿದ್ದರು. ಮೊದಲು ಸಂತೋಷ್ ವಧುವನ್ನು ಸೈಕಲ್ ನಲ್ಲಿ ಕೂರಿಸಿಕೊಂಡು ದೇವಾಲಯಕ್ಕೆ ಹೋಗಿದ್ದಾರೆ.

ವಿವಾಹದ ನಂತರ ಸೈಕಲ್ ನಲ್ಲಿ ಮಂದಿರಕ್ಕೆ ಬಂದ ಜೋಡಿ ದೇವರಿಗೆ ಪೂಜೆ ಸಲ್ಲಿಸಿ, ಅಲ್ಲಿಂದ ನೇರವಾಗಿ ಸಂತೋಷ್ ಅವರ ಅಜ್ಜಿ ತಾತನ ಮನೆಗೆ ಹೋಗಿ ಅವರ ಆಶೀರ್ವಾದ ಪಡೆದಿದ್ದಾರೆ. ಸಂತೋಷ್ ಅವರ ತಂದೆ ಜಾನಕಿ ಪ್ರಸಾದ್ ಪಟೇಲ್ ಅವರೂ ಸಹಾ ಮಗನ ಸರಳತೆ ಕಂಡು ಸಂತೋಷ ಪಟ್ಟಿದ್ದಾರೆ. ಅಲ್ಲದೇ ಮಗನಿಗೆ ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಇರುವ ಗೌರವ ಕಂಡ ಹೆಮ್ಮೆ ಪಟ್ಟಿದ್ದಾರೆ. ‌

ಸಂತೋಷ್ ಅವರು ಮಾತನಾಡುತ್ತಾ, ಇಂದು ಮದುವೆಗಳ ಆಡಂಬರದ ಹೆಸರಿನಲ್ಲಿ ಸಂಸ್ಕೃತಿ, ಸಂಪ್ರದಾಯಗಳಿಗೂ ಆಧುನಿಕತೆಯ ರಂಗನ್ನು ನೀಡಿದೆ. ಆದರೆ ನಮ್ಮ ಹಿಂದಿನ ಸಂಸ್ಕೃತಿ, ಸಂಪ್ರದಾಯ ಭಿನ್ನವಾಗಿದ್ದು, ಅದನ್ನು ಮರೆಯಬಾರದು ಎನ್ನುವ ಕಾರಣಕ್ಕೆ ತಾನು ಸರಳವಾಗಿ ವಿವಾಹ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *