ಮತ್ತೊಮ್ಮೆ ಜೋಡಿಯಾದ ಆಲಿಯಾ ಭಟ್ ಮತ್ತು ರಾಮ್ ಚರಣ್: ಮತ್ತೆ ಮೋಡಿ ಮಾಡಲಿದೆಯಾ ಈ ಜೋಡಿ??

Entertainment Featured-Articles News

ಸಿನಿಮಾಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆ, ಸ್ಟಾರ್ ಡಂ, ದೊಡ್ಡ‌ ಸಂಖ್ಯೆಯ ಅಭಿಮಾನಿಗಳ ಬಳಗ ಹೀಗೆ ಸಿಕ್ಕಾಪಟ್ಟೆ ಹೆಸರನ್ನು ಮಾಡಿರುವ ಸ್ಟಾರ್ ನಟ, ನಟಿಯರಿಗೆ ಸಹಜವಾಗಿಯೇ ಜಾಹೀರಾತು ಲೋಕ ಕೆಂಪು ಹಾಸನ್ನು ಹಾಸಿ ಸ್ವಾಗತವನ್ನು ಕೋರುತ್ತದೆ. ಹೌದು, ವಿಶ್ವ ಪ್ರಸಿದ್ಧ ಬ್ರಾಂಡ್ ಗಳಾಗಿರಲೀ, ದೇಶೀಯ ಉತ್ಪನ್ನಗಳೇ ಆಗಿರಲಿ ಅವುಗಳ ಕಡೆಗೆ ಜನರ ಗಮನ ಸೆಳೆಯಬೇಕೆಂದರೆ ಜಾಹೀರಾತುಗಳು ಅತಿ ಅವಶ್ಯಕ. ಹಾಗೆಂದ ಮಾತ್ರಕ್ಕೆ ಜಾಹೀರಾತಿನಲ್ಲಿ ಪರಿಚಯವಿಲ್ಲದ ಮುಖಗಳ ಕಡೆಗೆ ಜನರು ಗಮನ ಹರಿಸುವುದು ಕೂಡಾ ಅಪರೂಪ. ಬದಲಾಗಿ ಇಲ್ಲೊಬ್ಬ ಸ್ಟಾರ್ ನಟ, ನಟಿ ಕಾಣಿಸಿದರೆ ದೃಷ್ಟಿ ತಟ್ಟನೆ ಅತ್ತ ಕಡೆ ಹೊರಳುತ್ತದೆ.

ಇದೇ ಕಾರಣದಿಂದಲೇ ಸುಪ್ರಸಿದ್ಧ ಬ್ರಾಂಡ್ ಗಳು ತಮ್ಮ ರಾಯಭಾರಿಗಳನ್ನಾಗಿ ಸ್ಟಾರ್ ನಟರಿಗೆ ಕೋಟಿಗಳ ಮೊತ್ತದಲ್ಲಿ ಸಂಭಾವನೆ ನೀಡಿ, ಪ್ರಚಾರಕ್ಕೆ ಬಳಸಿಕೊಳ್ಳುತ್ತವೆ. ಈಗಾಗಲೇ ದಕ್ಷಿಣದ ಹಾಗೂ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಹಲವು ಜನಪ್ರಿಯ ಉತ್ಪನ್ನಗಳ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ. ತೆಲುಗು ಸಿನಿ ಸೀಮೆಯ ಸ್ಟಾರ್ ನಟ ರಾಮ್ ಚರಣ್ ತೇಜಾ ದೊಡ್ಡ ಸ್ಟಾರ್ ಡಂ ಇರುವ ನಟ, ಮೆಗಾ ಕುಟುಂಬದ ಕುಡಿ ಎನ್ನುವ ಹೆಗ್ಗಳಿಕೆ ಕೂಡಾ ಜೊತೆಗೆ ಸೇರಿದೆ. ಅಂದ ಮೇಲೆ ಅವರಿಗೆ ಜಾಹೀರಾತುಗಳಲ್ಲಿ ಅವಕಾಶ ಅರಸಿ ಬರದೇ ಇರುವುದೇ??

ನಟ ರಾಮ್ ಚರಣ್ ತೇಜಾ ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ತೊಡಗಿದ್ದಾರೆ. ಮೊದಲು ಅವರು ಅಷ್ಟಾಗಿ ಇತ್ತ ಗಮನ ಹರಿಸಿರಲಿಲ್ಲವಾದರೂ, ಅನಂತರ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. ತೆಲುಗಿನಲ್ಲಿ ಈಗಾಗಲೇ ಅಲ್ಲು ಅರ್ಜುನ್, ವಿಜಯ್ ದೇವರಕೊಂಡ, ಮಹೇಶ್ ಬಾಬು, ಹಿರಿಯ ನಟರಾದ ವೆಂಕಟೇಶ್, ನಾಗಾರ್ಜುನ ಎಲ್ಲರೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಟ್ಟಿಗೆ ನಟ ರಾಮ್ ಚರಣ್ ಸಹಾ ಸೇರ್ಪಡೆಯಾಗಿದ್ದಾರೆ.

ಈಗ ರಾಮ್ ಚರಣ್ ಅವರು ಹೊಸದೊಂದು ಬ್ರಾಂಡ್ ನ ಜಾಹೀರಾತಿನಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ಹೌದು ಭಾರತ್ ಬೆವರೇಜಸ್ ಉತ್ಪನ್ನಗಳಲ್ಲಿ ಅಗ್ರಸ್ಥಾನದಲ್ಲಿರುವ ಪಾರ್ಲೆ ಆಗ್ರೋ ಸಂಸ್ಥೆಯ ಉತ್ಪನ್ನವಾದ ಫ್ರೂಟಿಗೆ ಈಗಾಗಲೇ ನಟಿ ಆಲಿಯಾ ಭಟ್ ರಾಯಭಾರಿಯಾಗಿದ್ದಾರೆ. ಈಗ ಇದೇ ಬ್ರಾಂಡ್ ಗೆ ಹೊಸ ರಾಯಭಾರಿಯಾಗಿ ರಾಮ್ ಚರಣ್ ತೇಜಾ ಸಹಾ ಸೇರ್ಪಡೆ ಆಗುತ್ತಿದ್ದಾರೆ. ಆಲಿಯಾ ಮತ್ತು ರಾಮ್ ಚರಣ್ ಜೋಡಿ ಸೇರಿ ಈ ಬಾರಿ ಪ್ರಚಾರ ಮಾಡಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಈಗಾಗಲೇ ಪಾರ್ಲೆ ಆಗ್ರೋ ಬ್ರಾಂಡ್ ನ ರಾಯಭಾರಿಗಳಾಗಿ, ಆ್ಯಪಿ ಫಿಜ್ ಗೆ ಪ್ರಿಯಾಂಕ ಚೋಪ್ರಾ, ಬಿ ಫಿಜ್ ಗಾಗಿ ಅರ್ಜುನ್ ಕಪೂರ್, ಮಿಲ್ಕ್ ಸ್ಮೂತಿಗಾಗಿ ವರುಣ್ ಧವನ್ ರಂತಹ ಬಾಲಿವುಡ್ ತಾರೆಯರು ಇದ್ದಾರೆ. ಈಗ ಆಲಿಯಾ ಹಾಗೂ ರಾಮ್ ಚರಣ್ ಗೆ ಇರುವ ಕ್ರೇಜ್ ಹಾಗೂ ಜನಪ್ರಿಯತೆ ಗಮನದಲ್ಲಿಟ್ಟುಕೊಂಡು ಕಂಪನಿಯು ಆಲಿಯಾ ಜೊತೆಗೆ ರಾಮ್ ಚರಣ್ ಅವರನ್ನು ಫ್ರೂಟಿ ಗೆ ರಾಯಭಾರಿಯನ್ನಾಗಿ ನೇಮಕ ಮಾಡಿಕೊಂಡಿರುವುದಾಗಿ ಅಧಿಕೃತ ಪ್ರಕಟಣೆ ಮಾಡಿದೆ.

Leave a Reply

Your email address will not be published. Required fields are marked *