ಬೆಂಗಳೂರಿನ ಇಡ್ಲಿ ಪ್ರಿಯರಿಗೆ ಸಿಹಿ ಸುದ್ದಿ: ಬರ್ತಿದೆ 24 ಗಂಟೆಗಳ ಬಿಸಿ ಬಿಸಿ ಇಡ್ಲಿಯ ‘ಇಡ್ಲಿ ಬೋಟ್’

Entertainment Featured-Articles News
88 Views

ದಕ್ಷಿಣ ಭಾರತದ ಜನರ ಬೆಳಗಿನ ಉಪಹಾರಗಳಲ್ಲಿ ಬಹಳ ಪ್ರಸಿದ್ಧವಾದುದು ಹಾಗೂ ಅಸಂಖ್ಯಾತ ಜನರಿಗೆ ಬಹಳಷ್ಟು ಇಷ್ಟವಾಗಿರುವ ತಿನಿಸು ಎಂದರೆ ಇಡ್ಲಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬೆಳಗಿನ ಉಪಹಾರಕ್ಕೆ ಬಹಳಷ್ಟು ಜನರ ಮೊದಲ ಆದ್ಯತೆ ಇಡ್ಲಿ ಸಾಂಬಾರ್ ಅಥವಾ ಇಡ್ಲಿ ಚಟ್ನಿ ಆಗಿರುತ್ತದೆ. ಇಂತಹ ಬಹಳ ಜನಪ್ರಿಯವಾದ ತಿನಿಸನ್ನು ಇಷ್ಟ ಪಡದೇ ಇರುವವರ ಸಂಖ್ಯೆಯೂ ಬಹಳ ಕಡಿಮೆ ಎಂದೇ ಹೇಳಬಹುದು. ಇದೀಗ ಬೆಂಗಳೂರಿನಲ್ಲಿರುವ ಇಡ್ಲಿ ಪ್ರಿಯರಿಗೆ ಖುಷಿಯಾಗುವಂತಹ ಹೊಸ,‌ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಈ ಸುದ್ದಿ ಖಂಡಿತ ಇಡ್ಲಿ ಪ್ರಿಯರ ಕುತೂಹಲಕ್ಕೆ ಕಾರಣವಾಗಲಿದೆ.

ಇಡ್ಲಿ ಪ್ರಿಯರಿಗೆ ಸಿಕ್ಕಿರುವ ಈ ಸಿಹಿ ಸುದ್ದಿ ಏನೆಂದರೆ ಇನ್ನು ಮುಂದೆ ಬೆಂಗಳೂರಿನಲ್ಲಿ ಎಟಿಎಂನಲ್ಲಿ ಹಣ ದೊರೆಯುವಂತೆ, ಇಡ್ಲಿ ಯನ್ನು ನೀಡುವ ಎಟಿಐ, ಎನಿ ಟೈಮ್ ಇಡ್ಲಿ ಯಂತ್ರಗಳು ಬರುತ್ತಿವೆ. ಈ ಯಂತ್ರಗಳ ವಿಶೇಷತೆಯೇನೆಂದರೆ ಇದು ಇಡ್ಲಿಯನ್ನು ತಯಾರು ಮಾಡುವುದು ಮಾತ್ರವೇ ಅಲ್ಲದೇ ಅವುಗಳನ್ನು ಅಚ್ಚುಕಟ್ಟಾಗಿ ಪ್ಯಾಕಿಂಗ್ ಮಾಡಿ ಗ್ರಾಹಕರಿಗೆ ನೀಡುತ್ತದೆ. ‘ಇಡ್ಲಿ ಬೋಟ್’ ಹೆಸರಿನ ಎರಡು ಯಂತ್ರಗಳಲ್ಲಿ ಒಂದು ಇಡ್ಲಿ ಸಿದ್ಧಪಡಿಸಿದರೆ ಇನ್ನೊಂದು ಸಾಂಬಾರ್ ಮತ್ತು ಚಟ್ನಿ ಯನ್ನು ಒದಗಿಸುತ್ತದೆ.

ಕೋವಿಡ್ ನಂತರದ ದಿನಗಳಲ್ಲಿ ಸಂಪರ್ಕ ರಹಿತ ಆಹಾರ ಪೂರೈಕೆಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು ಇದು ಅನಿವಾರ್ಯ ಕೂಡ ಆಗಿದೆ. ಈ ಯೋಚನೆ 2019ರಲ್ಲೇ ಆರಂಭವಾಯಿತು ಎಂದು ಫ್ರೆಶ್ ಹಾಟ್ ರೋಬೋಟಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ಮತ್ತು ಸಿಇಓ ಆದ ಶರಣ್ ಹಿರೇಧಿಮಧಿರ್ ಅವರು ಹೇಳಿದ್ದಾರೆ. ಒಮ್ಮೆ ತನ್ನ ಮಗಳಿಗೆ ಅನಾರೋಗ್ಯ ಕಾಡಿದಾಗ 10.30 ರ ವೇಳೆಯಲ್ಲಿ ಇಡ್ಲಿ ಸಿಕ್ಕಿರಲಿಲ್ಲ. ಆಗಲೇ ತನಗೆ ಎಟಿಎಂನಲ್ಲಿ 24 ಗಂಟೆಗಳು ಇಡ್ಲಿ ಸಿಗುವಂತೆ ಏಕೆ ಮಾಡಬಾರದು ಎಂಬ ಆಲೋಚನೆ ಮೂಡಿತ್ತು ಎಂದು ಅವರು ಹೇಳಿದ್ದಾರೆ.

ಎಟಿಐ ಸಂಸ್ಥಾಪಕರು ಆ್ಯಪ್ ಮೂಲಕ ಯಂತ್ರವನ್ನು ಅಭಿವೃದ್ದಿಪಡಿಸುತ್ತಿದ್ದು, ಯಾರು ಬೇಕಾದರೂ ಇಲ್ಲಿ ಇಡ್ಲಿಗೆ ಆರ್ಡರ್ ಮಾಡಬಹುದು. ಇಡ್ಲಿ ಬೆಲೆ ಇನ್ನೂ ನಿಗಧಿ ಮಾಡಿಲ್ಲ. ಆದರೆ ಮುಂದಿನ ದಿನಗಳಲ್ಲಿ 25 ರಿಂದ 30 ರೂಪಾಯಿಗಳಿಗೆ 2 ಇಡ್ಲಿ ದೊರೆಯುತ್ತದೆ ಎನ್ನಲಾಗಿದೆ. ಅಲ್ಲದೇ ಇಡ್ಲಿ ಜೊತೆಗೆ ವಡೆ ಕೂಡಾ ಪೂರೈಕೆ ಮಾಡುವ ಯಂತ್ರವನ್ನು ಕೂಡಾ ಸಿದ್ದಪಡಿಸಲಾಗುತ್ತಿದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ತಿಂಡಿಗಳನ್ನು ಪೂರೈಕೆ ಮಾಡುವ ಬಗ್ಗೆ ಆಲೋಚನೆ ಮಾಡಲಾಗುವುದು ಹೇಳಲಾಗಿದೆ.

Leave a Reply

Your email address will not be published. Required fields are marked *