ಬಿಡುಗಡೆ ತಡವಾದಂತೆ ನಿರ್ಮಾಪಕರಿಗೆ ತಲೆ ನೋವಾದ ಅಲ್ಲು ಅರ್ಜುನ್ “ಪುಷ್ಪಾ”

0
202

ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪುಷ್ಪ ಕೂಡಾ ಒಂದಾಗಿದೆ.‌ ಕೊರೊನಾ ಕಾರಣದಿಂದ ಹಲವು ಬಹು ನಿರೀಕ್ಷಿತ ಸಿನಿಮಾಗಳ ಬಿಡುಗಡೆ ತಡವಾಗುತ್ತಿದೆ. ಅಭಿಮಾನಿಗಳಂತೂ ಈ ಸಿನಿಮಾಗಳ ಬಿಡುಗಡೆ ಯಾವಾಗ? ಎಂದು ಕಾದು ಕುಳಿತಿರುವರಾದರೂ, ಸಿನಿಮಾ ಬಿಡುಗಡೆ ನಂತರ ಎಂತಹ ಪರಿಸ್ಥಿತಿ ಇರುತ್ತದೋ ಎನ್ನುವುದು ನಿರ್ಮಾಪಕರ, ಚಿತ್ರ ತಂಡದ ಹಾಗೂ ಸ್ಟಾರ್ ನಟರುಗಳ ಟೆನ್ಷನ್ ಆಗಿದೆ. ಸ್ಟಾರ್ ನಿರ್ದೇಶಕ ಸುಕುಮಾರ್ ಮತ್ತು ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಕಾಂಬಿನೇಷನ್ ನಲ್ಲಿ ಪುಷ್ಪ ಎಂದಾಗಲೇ ಅದೊಂದು ಕ್ರೇಜ್ ಹುಟ್ಟು ಹಾಕಿತ್ತು.

ರಕ್ತ ಚಂದನ ಕಳ್ಳ ಸಾಗಾಣಿಕೆಯ ಕಥಾ ಹಂದರ ವನ್ನು ಉಳ್ಳ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಪಕ್ಕಾ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಇನ್ನಷ್ಟು ಉತ್ಸುಕರಾಗಿದ್ದಾರೆ.‌ ಇನ್ನು ಪುಷ್ಪ ಸಿನಿಮಾ ಕೂಡಾ ಎರಡು ಭಾಗಗಳಲ್ಲಿ ತೆರೆಯ ಮೇಲೆ ಬರಲಿದೆ. ಮೊದಲನೇ ಭಾಗ ಮುಂದಿನ ಡಿಸೆಂಬರ್ 17 ರಂದು ತೆರೆಗೆ ಬರಲಿದೆ. ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎನ್ನುವ ವಿಷಯ ಸುದ್ದಿಗಳಾಗಿದೆ.

ಈ ಪ್ರತಿಷ್ಠಿತ ಸಿನಿಮಾವನ್ನು ಮೈತ್ರಿ ಮೂವೀಸ್ ನಿರ್ಮಾಣ ಮಾಡುತ್ತಿದ್ದು, ಸಿನಿಮಾ ಕೆಲಸಗಳು ಮುಂದೆ ಸಾಗುತ್ತಿರುವಂತೆ ಸಿನಿಮಾದ ಬಜೆಟ್ ಕೂಡಾ ಏರುತ್ತಲೇ ಇದೆ. ಹೀಗೆ ಬಜೆಟ್ ಏರುತ್ತಲೇ ಇರುವುದರಿಂದ ಇದು ನಿರ್ಮಾಪಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಸಿನಿಮಾ ಆರಂಭವಾದಾಗ ಮಾಡಿದ್ದ ಚರ್ಚೆಗಳ ಅನುಸಾರವಾಗಿ ನಿಗಧಿಯಾಗಿದ್ದ ಬಜೆಟ್ ಮೀರಿ ಅಧಿಕ ಕೋಟಿಗಳು ಖರ್ಚಾಗಿದೆ ಎನ್ನಲಾಗಿದೆ. ವಿಶೇಷ ಎಂದರೆ ಸಿನಿಮಾ ಆರಂಭವಾದಾಗ ಎರಡನೇ ಭಾಗ ಮಾಡುವ ಯೋಚನೆ ಅಥವಾ ಯೋಜನೆ ಎರಡೂ ಇರಲಿಲ್ಲ.

ಆದರೆ ಲಾಕ್ ಡೌನ್ ಅವಧಿಯಲ್ಲಿ ಸುಕುಮಾರ್ ಕಥೆಯನ್ನು ಹೆಣೆದು ಎರಡನೇ ಭಾಗವನ್ನು ಮಾಡುವುದಾಗಿ ಹೇಳಿದಾಗ ನಿರ್ಮಾಪಕರು ಸಹಾ ಅದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು. ಸಿನಿಮಾ ನಿರ್ಮಾಣಕ್ಕಾಗಿ 170 ಕೋಟಿ ಬಜೆಟ್ ಇಡಲಾಗಿತ್ತು ಎನ್ನಲಾಗಿದ್ದು, ಕೊರೊನಾ, ಲಾಕ್ ಡೌನ್ ಹಾಗೂ ಇನ್ನಿತರೆ ಸಮಸ್ಯೆಗಳಿಂದ ಈಗಾಗಲೇ 40 ಕೋಟಿ ಹೆಚ್ಚುವರಿ ಬಜೆಟ್ ಈಗಾಗಲೇ ಸಿನಿಮಾಕ್ಕಾಗಿ ಖರ್ಚಾಗಿದೆ ಎನ್ನಲಾಗಿದೆ. ಅಷ್ಟಕ್ಕೇ‌ ಮುಗಿದಿಲ್ಲ, ಇನ್ನೂ ಖರ್ಚುಗಳು ಬಾಕಿ ಇದೆ ಎನ್ನಲಾಗಿದೆ.

ಇನ್ನು ಈಗ ಸಿನಿಮಾದ ಎರಡನೇ ಭಾಗ ನಿರ್ಮಾಣಕ್ಕೂ ಸಹಜವಾಗಿಯೇ ಹೆಚ್ಚು ಬಂಡವಾಳ ಹೂಡುವ ಅನಿವಾರ್ಯತೆ ಇದೆ. ಸಿನಿಮಾದ ಬಜೆಟ್ ಏರಿಕೆಯಾಗಲು ಪ್ರಮುಖ ಕಾರಣ ಚಿತ್ರೀಕರಣಕ್ಕೆ ಎದುರಾದ ಸಮಸ್ಯೆಗಳು ಎಂದು ಹೇಳಲಾಗಿದೆ. ಪುಷ್ಪ ಸಿನಿಮಾದ ಟ್ರೈಲರ್ ಹಾಗೂ ಟೀಸರ್ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಇನ್ನು ಈ ಸಿನಿಮಾದಲ್ಲಿ ಕನ್ನಡದ ನಟ ಡಾಲಿ ಧನಂಜಯ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಹಾ ವಿಶೇಷವಾಗಿದೆ.

LEAVE A REPLY

Please enter your comment!
Please enter your name here