ಬಾಳೆ ಎಲೆ ಊಟ ಮಾಡುವಿರಾ? ಹಾಗಾದರೆ ಈ ವಿಷಯಗಳು ನಿಮಗೆ ಗೊತ್ತಿದ್ಯಾ??

Written by Soma Shekar

Published on:

---Join Our Channel---

ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗ ಹಾಗೂ ಪ್ರಯೋಜನಕಾರಿಯಾಗಿದೆ.‌ಆದ್ದರಿಂದಲೇ ಬಾಳೆಹಣ್ಣು ನಮ್ಮ ಜೀವನದಲ್ಲಿ ಆಹಾರದ ಕ್ರಮದಲ್ಲಿ ಒಂದು ಭಾಗವಾಗಿದೆ. ಆದರೆ ಬಾಳೆಹಣ್ಣು ಮಾತ್ರವೇ ಅಲ್ಲದೆ ಬಾಳೆ ಎಲೆಯಲ್ಲಿಯೂ ಕೂಡಾ ಅನೇಕ ಪೋಷಕಾಂಶಗಳಿವೆ ಎನ್ನುವ ವಿಷಯ ಬಹಳಷ್ಟು ಜನರಿಗೆ ತಿಳಿದಿಲ್ಲ. ಪೂಜೆ-ಪುನಸ್ಕಾರಗಳಿಗೆ ಬಾಳೆ ಎಲೆಯನ್ನು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ವಿಶೇಷ ದಿನಗಳಂದು ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಿಕೊಂಡು ತಿನ್ನುತ್ತಿದ್ದರು. ಅತಿಥಿಗಳಿಗೂ ಅದರ ಮೇಲೆಯೇ ಊಟ ಬಡಿಸುವುದು ಸಂಪ್ರದಾಯವಾಗಿತ್ತು.

ಆದರೆ ಆಧುನಿಕತೆ ಬೆಳೆದಂತೆ ಇತ್ತೀಚೆಗೆ ಅದು ವಿರಳವಾಗಿದೆ. ಆದರೆ ಬಾಳೆ ಎಲೆಯ ಮೇಲೆ ಮಾಡುವುದರಿಂದ ಬಹಳಷ್ಟು ಆರೋಗ್ಯ ಸಂಬಂಧಿ ಲಾಭಗಳು ಅಥವಾ ಪ್ರಯೋಜನಗಳಿವೆ. ಬಾಳೆ ಎಲೆಯ ಊಟ ನಿಜಕ್ಕೂ ಒಂದು ಅತ್ಯುತ್ತಮ ಆರೋಗ್ಯದ ರಹಸ್ಯ ಎಂದರೂ ಅತಿಶಯೋಕ್ತಿ ಖಂಡಿತ ಅಲ್ಲ. ಹಾಗಾದರೆ ಪ್ರಕೃತಿ ನಮಗೆ ನೀಡಿರುವ ಈ ಅಪರೂಪದ ಉಡಗೊರೆಯಾದ ಬಾಳೆ ಎಲೆಯ ಊಟದ ಪ್ರಯೋಜನಗಳೇನು ಎನ್ನುವುದನ್ನು ಒಮ್ಮೆ ತಿಳಿಯೋಣ ಬನ್ನಿ..

ಆರೋಗ್ಯಕ್ಕೆ ಬಹಳ ಉತ್ತಮ :

ಬಾಳೆ ಎಲೆಯಲ್ಲಿ ಪಾಲಿಫಿನಾಲ್ಸ್ ಎನ್ನುವ ಆ್ಯಂಟಿ ಟಆಕ್ಸಿಡೆಂಟ್ ಗಳು ಇರುತ್ತವೆ. ಇವು ಬಾಳೆಎಲೆ ಯಲ್ಲಿರುವ ವಿಶೇಷ ಅಂಶಗಳಲ್ಲಿ ಒಂದಾಗಿದ್ದು, ಅದು ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಹಾಯಮಾಡುತ್ತದೆ. ಆದ್ದರಿಂದ ಬಾಳೆ ಎಲೆಯಲ್ಲಿ ಊಟ ಮಾಡುವುದು ಆರೋಗ್ಯಕ್ಕೆ ಬಹಳ ಉತ್ತಮ ಎಂದು ಹೇಳಬಹುದಾಗಿದೆ.

ರಾಸಾಯನಿಕ ಮುಕ್ತವಾಗಿದೆ :

ಬಾಳೆ ಎಲೆ ನೇರವಾಗಿ ಪ್ರಕೃತಿ ನಮಗೆ ನೀಡಿರುವ ಕೊಡುಗೆಯಾಗಿದ್ದು ಯಾವುದೇ ರೀತಿಯ ಹಾನಿಕಾರಕ ಇರುವುದಿಲ್ಲ. ಆದರೆ ಪ್ಲಾಸ್ಟಿಕ್ ನಲ್ಲಿ ಇರುವ ರಾಸಾಯನಿಕಗಳು ಬಿಸಿ ಆಹಾರವನ್ನು ಬಡಿಸಿದಾಗ, ಅದು ಕರಗಿ ಆಹಾರವನ್ನು ಸೇರಿದಾಗ ಅದನ್ನು ಸೇವಿಸುವ ನಮಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಆದರೆ ಬಾಳೆ ಎಲೆಯ ಮೇಲೆ ಊಟ ಮಾಡುವುದರಿಂದ ಸಮಸ್ಯೆಯಲ್ಲ ಬದಲಿಗೆ ಆರೋಗ್ಯಕ್ಕೆ ಪೂರಕವಾದ ಅಂಶಗಳು ನಮ್ಮ ದೇಹವನ್ನು ಸೇರುತ್ತವೆ.

ಆಹಾರದ ರುಚಿ ಹೆಚ್ಚಾಗುತ್ತದೆ :

ಬಾಳೆ ಎಲೆಯ ಮೇಲೆ ಸ್ವಾಭಾವಿಕವಾಗಿ ಒಂದು ಮೇಣದ ರೀತಿಯ ಪದಾರ್ಥವಿರುತ್ತದೆ. ಇದೊಂದು ತೆಳುವಾದ ಪದರದ ರೀತಿ ನಿರ್ಮಾಣವಾಗಿರುತ್ತದೆ. ಬಾಳೆ ಎಲೆಯ ಮೇಲೆ ಬಿಸಿ ಬಿಸಿ ಆಹಾರವನ್ನು ಬಡಿಸಿದಾಗ ಆ ಮೇಣದ ಪದರವು ಕರಗಿ, ಆಹಾರದಲ್ಲಿ ಬೆರೆಯುವುದರಿಂದ, ಆಹಾರಕ್ಕೊಂದು ಹೊಸ ರುಚಿಯ ಬರುತ್ತದೆ.

ಪರಿಸರ ಪ್ರೇಮಿ ಯಾಗಿದೆ :

ಸಾಮಾನ್ಯವಾಗಿ ಯಾವುದೇ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಪ್ಲೇಟ್ ಗಳನ್ನು ಬಳಸುವುದು ಹೆಚ್ಚಾಗಿ ಕಂಡುಬರುತ್ತದೆ. ಬಳಕೆಯ ನಂತರ ಇವುಗಳನ್ನು ಬಿಸಾಡಿದಾಗ ಪರಿಸರಕ್ಕೆ ಮಾಲಿನ್ಯ ಉಂಟಾಗುತ್ತದೆ. ಇನ್ನು ಸಾಮಾನ್ಯ ಪ್ಲೇಟ್ ಗಳನ್ನು ಬಳಸಿದರೆ ಅವುಗಳನ್ನು ತೊಳೆಯಲು ಹೆಚ್ಚಿನ ನೀರು ಅವಶ್ಯಕತೆ ಇರುತ್ತದೆ. ಆದರೆ ಬಾಳೆ ಎಲೆಯಲ್ಲಿ ಇಂತಹ ಸಮಸ್ಯೆ ಇರುವುದಿಲ್ಲ.

ಅಲ್ಲದೇ ಬಾಳೆ ಎಲೆಯ ಮೇಲೆ ವಿವಿಧ ಆಹಾರ ಪದಾರ್ಥಗಳನ್ನು ಬಡಿಸಲು ಕೂಡಾ ಸಾಕಷ್ಟು ಜಾಗವಿರುತ್ತದೆ. ಬಳಕೆಯ ನಂತರ ಬಿಸಾಡುವ ಬಾಳೆ ಎಲೆ ಕೊಳೆಯುವುದರಿಂದ ಇದು ಗೊಬ್ಬರವಾಗಿ ಮತ್ತೆ ಪ್ರಕೃತಿಯ ಒಂದು ಭಾಗವಾಗಿ, ಮತ್ತೊಮ್ಮೆ ಉಪಯೋಗಕ್ಕೆ ಬರುವ ಸಾಮರ್ಥ್ಯವನ್ನು ಪಡೆದಿದೆ.

Leave a Comment