ಭಾರತೀಯ ಸಿನಿಮಾ ರಂಗ ಎನ್ನುವ ಮಾತು ಬಂದ ಕೂಡಲೇ ಬಾಲಿವುಡ್ ಎಂದು ಕೇಳುವ ಕಾಲ ಈಗಿಲ್ಲ. ಏಕೆಂದರೆ ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿವೆ. ದಕ್ಷಿಣದ ಸಿನಿಮಾಗಳ ಈ ಯಶಸ್ಸನ್ನು ಸಹಿಸದ ಬಾಲಿವುಡ್ ಮಂದಿ ಆಗೊಮ್ಮೆ ಈಗೊಮ್ಮೆ ತಮ್ಮ ಈ ಅಸಮಾಧಾನದ ಮಾತುಗಳನ್ನು ಹೊರ ಹಾಕುತ್ತಿದ್ದಾರೆ. ಈಗ ಈ ಸಾಲಿಗೆ ಸೇರ್ಪಡೆ ಆಗಿದ್ದಾರೆ ನಟ ನವಾಜುದ್ದೀನ್ ಸಿದ್ದೀಕಿ. ಸಂದರ್ಶನವೊಂದರಲ್ಲಿ ಈ ನಟ ನೀಡಿರುವ ಹೇಳಿಕೆ ಇದೀಗ ದೊಡ್ಡ ಚರ್ಚೆಯೊಂದನ್ನು ಹುಟ್ಟು ಹಾಕಿದೆ.
ಬಾಲಿವುಡ್ ನಲ್ಲಿ ತನಗಾಗಿ ಒಂದು ಸ್ಥಾನವನ್ನು ಮಾಡಿಕೊಂಡಿರುವ ನಟ ನವಾಜುದ್ದೀನ್ ಸಿದ್ಧೀಕಿ ಅವರನ್ನು ವಾಹಿನಿಯೊಂದರಲ್ಲಿ ಸಂದರ್ಶನದ ವೇಳೆ ನಿರೂಪಕಿಯು ದಕ್ಷಿಣದ ಸಿನಿಮಾಗಳ ಕುರಿತು ಪ್ರಶ್ನೆ ಕೇಳಿದ್ದಾರೆ. ದಕ್ಷಿಣ ಸಿನಿಮಾಗಳು ಬಾಲಿವುಡ್ ಸಿನಿಮಾಗಳನ್ನು ಮೀರಿ ಮುಂದೆ ಸಾಗಿದೆ. ಇತ್ತೀಚಿನ ಪುಷ್ಪ, ತ್ರಿಬಲ್ ಆರ್ ಮತ್ತು ಕೆಜಿಎಫ್-2 ಸಿನಿಮಾಗಳ ಯಶಸ್ಸಿನ ಬಗ್ಗೆ ಕೇಳುತ್ತಾ, ಈ ಸಿನಿಮಾಗಳನ್ನು ನೀವು ನೋಡಿದ್ದೀರಾ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ.
ನಿರೂಪಕಿ ಕೇಳಿದ ಪ್ರಶ್ನೆಗೆ ನಟ ನವಾಜುದ್ದೀನ್ ಸಿದ್ಧೀಕಿ ನೀಡಿದ ಉತ್ತರ ಒಂದು ವಿ ವಾ ದಕ್ಕೆ ಕಾರಣವಾಗಿದೆ. ಹೌದು, ನಟ ಪ್ರಶ್ನೆಗೆ ಉತ್ತರ ನೀಡುತ್ತಾ, ನಾನು ಅಂತಹ ಚಿತ್ರಗಳನ್ನು ನೋಡಿಲ್ಲ, ನೋಡುವುದೂ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೇ ನಾನು ಅಂತಹ ಸಿನಿಮಾಗಳಲ್ಲಿ ನಟಿಸುತ್ತೇನೆ ಆದರೆ ನೋಡಲಾರೆ, ಅದಕ್ಕೆ ಕಾರಣ ಏನೆಂದು ಹೇಳಲು ನನ್ನಲ್ಲಿ ಸ್ಪಷ್ಟವಾದ ಉತ್ತರ ಇಲ್ಲ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಇನ್ನು ಸಿನಿಮಾಗಳ ಯಶಸ್ಸಿನ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಯಾವುದಾದರೂ ಸಿನಿಮಾ ಹಿಟ್ ಆದರೆ ಜನ ಅದರ ಬಗ್ಗೆ ಮಾತಾಡುತ್ತಾರೆ, ಅಂತಹ ಸ್ಕ್ರಿಪ್ಟ್ ಗಳು ಹೆಚ್ಚು ಸಿದ್ಧವಾಗುತ್ತವೆ. ನಟರು ಅಂತಹ ಸಿನಿಮಾಗಳಿಗೆ ಗಮನ ನೀಡುತ್ತಾರೆ. ಆದರೆ ಒಂದೆರಡು ಸಿನಿಮಾ ಸೋತರೆ ಜನರು ಎಲ್ಲಾ ಮರೆಯುತ್ತಾರೆ ಎಂದಿರುವ ಅವರು, ಕಮರ್ಪಿಯಲ್ ಸಿನಿಮಾಗಳ ಆಯುಷ್ಯ ತಾತ್ಕಾಲಿಕ ಎಂದಿರುವ ಅವರು ತಾನು ಕಮರ್ಷಿಯಲ್ ಸಿನಿಮಾಗಳನ್ನು ನೋಡುವುದಿಲ್ಲ. ಏಕೆಂದರೆ ಸಿನಿಮಾ ಎಂದರೆ ಅದು ಕಾಡಬೇಕು, ಬುದ್ಧಿ ಮತ್ತೆಯನ್ನು ಹೆಚ್ಚಿಸುವಂತೆ ಇರಬೇಕು.
ನಾವು ಒಂದಷ್ಟು ಸಮಯ ಸಿನಿಮಾಕ್ಕೆ ನೀಡುತ್ತೇನೆ ಎಂದರೆ ಅದರಿಂದ ನನಗೆ ಉಪಯೋಗವಾಗಬೇಕು. ಆದರೆ ಕಮರ್ಷಿಯಲ್ ಸಿನಿಮಾಗಳಿಂದ ಇವೆಲ್ಲವುಗಳನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಕಮರ್ಷಿಯಲ್ ಸಿನಿಮಾ ಗೆದ್ದಿದೆ ಎಂದಾಗ ನಾನೇ ಸ್ಟಾರ್ ಎಂದು ಬೀಗುವುದು ಸರಿಯಲ್ಲ ಎನ್ನುವ ಮಾತನ್ನು ಸಹಾ ಅವರು ಹೇಳಿದ್ದಾರೆ. ಎಲ್ಲವೂ ಗೆಲ್ಲುವುದಿಲ್ಲ ಎನ್ನುವುದನ್ನು ಎಲ್ಲರೂ ಅರಿಯಬೇಕಿದೆ ಎಂದಿದ್ದಾರೆ.