ಬಹುಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ಆದಿಗುರು ಶಂಕರಾಚಾರ್ಯರ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ

Written by Soma Shekar

Published on:

---Join Our Channel---

ವಿಶ್ವದ ಜನರಿಗೆ ವೇದಾಂತದ ಸಾರವನ್ನು ಸಾರಿದವರು, ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಶಕ್ತಿ ಪೀಠ ಗಳನ್ನು ಸ್ಥಾಪಿಸಿದವರು ಆದಿಗುರು ಶಂಕರಾಚಾರ್ಯರು. ಕೇರಳದ ಕಾಲಟಿಯಲ್ಲಿ ಜನಿಸಿದ ಶಂಕರಾಚಾರ್ಯರು ಇಡೀ ಭಾರತವನ್ನು ಸುತ್ತಿ ತನ್ನ ತತ್ವಗಳನ್ನು, ಉಪದೇಶಗಳನ್ನು, ವೇದ, ವೇದಾಂತಗಳ ಸಾರವನ್ನು ಸಾರಿದ ಮಹನೀಯರು, ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಕರೂ ಆಗಿರುವ ಶಂಕರಾಚಾರ್ಯರು ಪೂಜನೀಯ ಹಾಗೂ ಸರ್ವರಿಂದ ಗೌರವಿಸಲ್ಪಡುವ ಮಹೋನ್ನತ ಗುರುವಾಗಿದ್ದಾರೆ.

ಇಂತಹ ಆದಿಗುರು ಶಂಕರಾಚಾರ್ಯರ ವಿಶ್ವದಲ್ಲೇ ಅತಿ ಎತ್ತರವಾದ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲು ಇದೀಗ ಮಧ್ಯಪ್ರದೇಶ ಸರ್ಕಾರವು ಚಿಂತನೆಯೊಂದನ್ನು ಮಾಡಿದೆ. ಆದಿಗುರು ಶಂಕರಾಚಾರ್ಯರ ಈ ಪ್ರತಿಮೆಯು 108 ಅಡಿ ಎತ್ತರ ಇರಲಿದ್ದು, ಇದನ್ನು ಮಿಶ್ರ ಲೋಹಗಳನ್ನು ಬಳಸಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಲಾಗಿದೆ. ಈ ಪ್ರತಿಮೆ ನಿರ್ಮಾಣವಾದರೆ ಇದು ವಿಶ್ವದಲ್ಲೇ ಅತಿ ಎತ್ತರದ ಶಂಕರಾಚಾರ್ಯರ ಪ್ರತಿಮೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಆದಿಗುರು ಶಂಕರಾಚಾರ್ಯರ ಈ ಪ್ರತಿಮೆ ನಿರ್ಮಾಣ ಯೋಜನೆಗೆ ಮಧ್ಯಪ್ರದೇಶ ಸರ್ಕಾರವು 2000 ಕೋಟಿ ವೆಚ್ಚ ಮಾಡಲಿದೆ ಎನ್ನಲಾಗಿದೆ. ಈ ವಿಚಾರವಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗರ ಚೌಹಾಣ್ ಅವರು ಕಳೆದ ವಾರ ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್ ಟ್ರಸ್ಟ್ ನ ಟ್ರಸ್ಟಿಗಳ ಜೊತೆಗೆ ನಡೆದ ಸಭೆಯಲ್ಲಿ ಚರ್ಚೆಯನ್ನು ನಡೆಸಿದ್ದಾರೆ. ಈ ಸಭೆಯಲ್ಲಿ ಸ್ವಾಮಿ ಅವಧೇಶಾನಂದ ಗಿರಿ ಜಿ ಮಹಾರಾಜ್ ಸೇರಿದಂತೆ ಇನ್ನೂ ಹಲವು ಪ್ರಮುಖರು ಭಾಗವಹಿಸಿದ್ದರು ಎನ್ನಲಾಗಿದೆ.

ಈ ವೇಳೆ ಮಾತನಾಡಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು, ಓಂಕಾರೇಶ್ವರ ಆದಿಶಂಕರ ಮ್ಯೂಸಿಯಂ ಮತ್ತು ಆದಿಶಂಕರ ವೇದಾಂತ ಸಂಸ್ಥಾನದ 108 ಅಡಿ ಬಹು ಲೋಹದ ಪ್ರತಿಮೆಯನ್ನು ಸ್ಥಾಪಿಸುವ ಸರ್ಕಾರದ ಈ ಯೋಜನೆ ರಾಜ್ಯವನ್ನು ವಿಶ್ವಕ್ಕೆ ಪರಿಚಯಿಸಲಿದೆ ಎನ್ನುವ ಮಾತನ್ನು ಹೇಳಿದ್ದು, ಹೊಸದೊಂದು ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.‌

Leave a Comment