ಇಂತಾ ಮದ್ವೆ ಇದೇ ಮೊದಲು: ವೈಭವದಿಂದ ನಡೀತು ಸಲಿಂಗ ಪ್ರೇಮಿ ಜೋಡಿಯ ಮದುವೆ..
ಪ್ರೇಮ ಎಂದರೇನು?? ಎಂದು ಕೇಳಿದರೆ ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರವನ್ನು ನೀಡುತ್ತಾರೆ. ಪ್ರೇಮ ಕುರುಡು, ಇದು ಒಳ್ಳೆಯದು, ಕೆಟ್ಟದ್ದು, ವಯಸ್ಸು, ಬಣ್ಣ, ಜಾತಿ, ಕುಲ ಯಾವುದನ್ನೂ ಸಹಾ ನೋಡುವುದಿಲ್ಲ ಎನ್ನುತ್ತಾರೆ. ಇನ್ನು ವಿದೇಶಗಳಲ್ಲಾದರೆ ಪ್ರೇಮಕ್ಕೆ ಲಿಂಗ ವ್ಯತ್ಯಾಸ ಕೂಡಾ ಇಲ್ಲ ಎನ್ನುವುದು ತಿಳಿದ ವಿಷಯವೇ ಆಗಿದೆ. ಅಲ್ಲಿ ಹುಡುಗಿ ಹುಡುಗಿಯನ್ನು, ಹುಡುಗ ಹುಡುಗನನ್ನು ಪ್ರೇಮಿಸಿ ವಿವಾಹ ಮಾಡಿಕೊಳ್ಳುವ ಅವಕಾಶ, ಸ್ವತಂತ್ರ ನೀಡಲಾಗಿದೆ. ಅಲ್ಲಿ ಇಂತಹ ಪ್ರೇಮ, ವಿವಾಹ ಎಲ್ಲವೂ ಕೂಡಾ ಸರ್ವೇ ಸಾಮಾನ್ಯ.
ಆದರೆ ಭಾರತದಂತಹ ಸಂಪ್ರದಾಯಬದ್ಧ ದೇಶದಲ್ಲಿ ಇಂತಹ ಆಧುನಿಕ ವಿಚಾರಗಳನ್ನು ಒಪ್ಪುವುದು ಸುಲಭ ಸಾಧ್ಯವಲ್ಲ. ಆದರೆ ಇತ್ತೀಚಿಗೆ ಇಂತಹ ಆಲೋಚನೆಗಳು ಹಾಗೂ ಆಚರಣೆಗಳು ಮಾತ್ರ ನಿಧಾನವಾಗಿ ನಮ್ಮ ದೇಶದಲ್ಲೂ ಹೆಜ್ಜೆ ಇಡುತ್ತಿದೆ. ಪ್ರಸ್ತುತ ಇಬ್ಭರು ಪುರುಷರು ಪರಸ್ಪರ ಪ್ರೇಮಿಸಿ ತಮ್ಮ ಹಿರಿಯರ ಒಪ್ಪಿಗೆ, ಆಶೀರ್ವಾದ ವನ್ನು ಪಡೆದು ವಿವಾಹ ಮಾಡಿಕೊಂಡಿದ್ದು, ತೆಲಂಗಾಣದಲ್ಲಿ ನಡೆದ ಮೊದಲ ಗೇ ಜೋಡಿ ವಿವಾಹ ಎನ್ನುವ ದಾಖಲೆಯನ್ನು ಬರೆದಿದ್ದಾರೆ.
ಇಬ್ಬರು ಪುರುಷರು ಅಥವಾ ಇಬ್ಬರು ಸ್ತ್ರೀಯರು ಪ್ರೇಮಿಸಿ ವಿವಾಹವಾದ ಘಟನೆಗಳು ನಮ್ಮ ದೇಶದಲ್ಲಿ ತೀರಾ ವಿರಳ. ಆದರೆ ತೆಲಂಗಾಣದಲ್ಲಿ ಇಂತಹ ಮದುವೆ ನಡೆದಿದ್ದು ಎಂಟು ವರ್ಷಗಳ ಹಿಂದೆ ಒಂದು ಡೇಟಿಂಗ್ ಆ್ಯಪ್ ನ ಮೂಲಕ ಪರಿಚಯವಾದ ಸುಪ್ರಿಯೋ ಮತ್ತು ಅಭಯ್ ಪರಸ್ಪರ ಪ್ರೇಮಿಸಿ ಇದೀಗ ವಿವಾಹ ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ ಕುಟುಂಬದ ಹಿರಿಯರ ಅನುಮತಿಯನ್ನು ಪಡೆದು ಅವರ ಸಮಕ್ಷಮದಲ್ಲೇ ಅದ್ದೂರಿಯಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
ತೆಲಂಗಾಣದಲ್ಲಿ ದಾಖಲಾದ ಮೊಟ್ಟ ಮೊದಲ ಸಲಿಂಗ ವಿವಾಹ ಇದಾಗಿದ್ದು ಈ ಮದುವೆಯಲ್ಲಿ ಕೂಡಾ ಎಲ್ಲಾ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಆಚರಣೆ ಮಾಡಲಾಗಿದೆ. ವಿಕಾರಾಬಾದ್ ನ ಹೈವೇ ಯಲ್ಲಿರುವ ಟ್ರಾನ್ಸ್ ಗ್ರೀನ್ ಫೀಲ್ಡ್ ರೆಸಾರ್ಟ್ ನಲ್ಲಿ ಈ ಜೋಡಿಯ ವಿವಾಹ ನಡೆದಿದೆ. ಭಾರತದಲ್ಲಿ ಸಲಿಂಗ ವಿವಾಹಕ್ಕೆ ಇನ್ನೂ ಕಾನೂನುಬದ್ಧವಾದ ಮಾನ್ಯತೆಯನ್ನು ನೀಡಿಲ್ಲ ಎನ್ನುವುದು ಕೂಡಾ ವಾಸ್ತವ. ಒಟ್ಟಾರೆ ಈ ಜೋಡಿಯ ವಿವಾಹದ ಫೋಟೋಗಳು ವೈರಲ್ ಆಗಿ ಮಿಶ್ರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ.