ಫ್ಯಾನ್ ವಾರ್: ಕೇರಳದಲ್ಲಿ ಕೊಹ್ಲಿ ಕಟೌಟ್ ಬೆನ್ನಲ್ಲೇ ಹಿಟ್ ಮ್ಯಾನ್ ಕಟೌಟ್, ಕ್ರಿಕೆಟ್ ಗೂ ಕಾಲಿಡ್ತಾ ಕಟೌಟ್ ವಾರ್??

Entertainment Featured-Articles News Sports

ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಇಂದು ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಮೂರು ಪಂದ್ಯಗಳ ಈ ಟಿ-ಟ್ವೆಂಟಿ ಸರಣಿ ಪ್ರಾರಂಭವಾಗುವುದಕ್ಕೂ ಮೊದಲೇ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರಿಗೆ ಶುಭ ಕೋರುವ ಸಲುವಾಗಿ ಬೃಹತ್ ಕಟೌಟ್ ಗಳನ್ನು ನಿಲ್ಲಿಸಿದ್ದಾರೆ. ಎತ್ತರೆತ್ತರವಾದ ಕಟೌಟ್ ಗಳನ್ನು ನಿಲ್ಲಿಸುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರಿಗೆ ಭವ್ಯವಾದ ಸ್ವಾಗತವನ್ನು ನೀಡಲು ಸಜ್ಜಾಗಿದ್ದಾರೆ. ಇಷ್ಟು ದಿನ ಸ್ಟಾರ್ ನಟರ ಅಭಿಮಾನಿಗಳು ಪೈಪೋಟಿಗೆ ಬಿದ್ದಂತೆ ನಿಲ್ಲಿಸುತ್ತಿದ್ದ ಕಟೌಟ್ ಗಳ ಅಭಿಮಾನವು ಈಗ ಕ್ರಿಕೆಟ್ ಗೂ ತನ್ನ ಕಾಲನ್ನು ಇಟ್ಟಂತೆ ಕಾಣುತ್ತಿದೆ..

ಟೀಂ ಇಂಡಿಯಾ ತಿರುವನಂತಪುರಂಗೆ ಆಗಮಿಸಿದ ಬೆನ್ನಲ್ಲೇ ಗ್ರೀನ್ ಫೀಲ್ಡ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು 100 ಅಡಿ ಎತ್ತರದ ಕಟೌಟ್ ನಿಲ್ಲಿಸಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ. ವಿರಾಟ್ ಕೊಹ್ಲಿ ಅಭಿಮಾನಿಗಳು ಈ ರೀತಿ ದೊಡ್ಡ ಕಟೌಟ್ ವೊಂದನ್ನು ಅನಾವರಣಗೊಳಿಸಿದ ನಂತರ, ತಾವು ಏನೂ ಕಡಿಮೆ ಇಲ್ಲ ಎನ್ನುವಂತೆ ಅಖಿಲ ಕೇರಳ ರೋಹಿತ್ ಶರ್ಮಾ ಅಭಿಮಾನಿಗಳ ಬಳಗ ಸಹಾ ಕೊಹ್ಲಿ ಅಭಿಮಾನಿಗಳಿಗೆ ಸವಾಲನ್ನು ಹಾಕುವಂತೆ ಕೊಹ್ಲಿಯ ಕಟೌಟ್ ಹತ್ತಿರದಲ್ಲೇ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಕಟೌಟ್ ಅನ್ನು ನಿಲ್ಲಿಸಿದ್ದಾರೆ.

100 ಅಡಿ ಎತ್ತರದ ಕಟೌಟ್ ಗಳನ್ನು ನಿಲ್ಲಿಸುವ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಇಂದು ಗ್ರೀನ್ ಫೀಲ್ಡ್ ಮೈದಾನದಲ್ಲಿ ಈ ಇಬ್ಬರು ಆಟಗಾರರಲ್ಲಿ ಯಾರು ಅಬ್ಬರಿಸಿ, ಅಭಿಮಾನಿಗಳ ಸಂಭ್ರಮ ದುಪ್ಪಟ್ಟು ಮಾಡಲಿದ್ದಾರೆ ಎನ್ನುವ ಕುತೂಹಲ ಉಭಯ ಆಟಗಾರರ ಅಭಿಮಾನಿಗಳಲ್ಲಿ ಮೂಡಿದೆ. ಅಂತೂ ಇಂತೂ ಕ್ರಿಕೆಟ್ ಅಭಿಮಾನಿಗಳಲ್ಲಿಯೂ ಕಟೌಟ್ ಸಮರ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಅಭಿಮಾನಿಗಳ ಇಂತಹ ಅಭಿಮಾನವು ಯಾವ ಹಂತವನ್ನು ತಲುಪಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published.