ಫೋಟೋದಲ್ಲಿ ಅಡಗಿರುವ ಪಕ್ಷಿಯನ್ನು ಹುಡುಕುವಲ್ಲಿ ಹೈರಾಣಾದ ನೆಟ್ಟಿಗರು: ನೀವು ಒಮ್ಮೆ ಪ್ರಯತ್ನಿಸಿ ನೋಡಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ಫೋಟೋದಲ್ಲಿ ಅಡಗಿರುವ ಗೂಬೆಯನ್ನು ಕಂಡುಹಿಡಿಯಲು ನೆಟ್ಟಿಗರು ಬಹಳಷ್ಟು ಪ್ರಯತ್ನವನ್ನು ಪಟ್ಟು ವಿಫಲರಾಗುತ್ತಿದ್ದಾರೆ. ಈ ಚಿತ್ರದಲ್ಲಿ ಗೂಬೆ ಎಲ್ಲಿದೆ ಎನ್ನುವುದನ್ನು ಹುಡುಕುವ ಪ್ರಯತ್ನದಲ್ಲಿ ಅನೇಕರು ತೊಡಗಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ವೇದಿಕೆಯಾಗಿರುವ ಟ್ವಿಟರ್ ನಲ್ಲಿ ವನ್ಯಜೀವಿಗಳಿಗೆ ಸಂಬಂಧಪಟ್ಟಂತಹ ವಿಶೇಷವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಆಗಾಗ ಶೇರ್ ಮಾಡಿಕೊಳ್ಳುವ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ವಿಶೇಷವಾದ ಫೋಟೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸುಶಾಂತ್ ನಂದಾ ಅವರು ಪೋಸ್ಟ್ ಮಾಡಿರುವ ಫೋಟೋದಲ್ಲಿ ಧ್ಯಾನದಲ್ಲಿ ಕುಳಿತಿರುವಂತೆ ಗೂಬೆಯೊಂದು ಕಣ್ಣನ್ನು ಮುಚ್ಚಿ ಕುಳಿತುಕೊಂಡಿದೆ. ಆದರೆ ಗೂಬೆಯ ಬಣ್ಣ ಮರದ ಬಣ್ಣದೊಂದಿಗೆ ಸಂಪೂರ್ಣವಾಗಿ ಬೆರೆತು ಹೋಗಿರುವುದರಿಂದ ಗೂಬೆಯು ಅಷ್ಟೊಂದು ಸುಲಭವಾಗಿ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಈ ಫೋಟೋವನ್ನು ಮೊದಲು ಟ್ವಿಟರ್ ಬಳಕೆದಾರರಾದ ಮಾಸ್ಸಿಮೊ ಅವರು ಶೇರ್ ಮಾಡಿಕೊಂಡಿದ್ದು, ಅನಂತರ ಅದನ್ನು ಸುಶಾಂತ್ ನಂದಾ ಅವರು ಶೇರ್ ಮಾಡಿದ್ದಾರೆ. ಅದಕ್ಕೆ ಅವರು ಫೋಟೋದಲ್ಲಿ ಕ್ರೆಡಿಟ್ ಕೂಡಾ ನೀಡಿದ್ದಾರೆ.
ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಬಹಳಷ್ಟು ಜನರು ಗೂಬೆ ಎಲ್ಲಿದೆ ಎಂದು ಕಂಡು ಹಿಡಿಯುವ ಪ್ರಯತ್ನ ಕೈ ಹಾಕಿದ್ದು, ಒಂದಷ್ಟು ಜನ ವಿಫಲರಾದರೆ, ಇನ್ನು ಕೆಲವರು ಗೂಬೆ ಎಲ್ಲಿದೆ ಎನ್ನುವುದನ್ನು ಕಂಡುಹಿಡಿದಿದ್ದಾರೆ. ಅನೇಕರು ಕಾಮೆಂಟ್ ಗಳನ್ನು ಮಾಡಿ ಗೂಬೆ ಎಲ್ಲಿದೆ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ನು ವೈಜ್ಞಾನಿಕ ವಿವರಣೆಯಂತೆ ಕೆಲವು ಪ್ರಾಣಿ-ಪಕ್ಷಿಗಳು ಮರೆಮಾಚುವಿಕೆ ಅಥವಾ ನಿಗೂಢ ಬಣ್ಣದ ತಂತ್ರವನ್ನು ಇತರ ಪ್ರಾಣಿಗಳಿಂದ ರಕ್ಷಣೆ ಪಡೆಯಲು ಬಳಸಿಕೊಳ್ಳುತ್ತವೆ ಎಂದು ಹೇಳಲಾಗಿದೆ.