ಫುಟ್ ಪಾತ್ ನಲ್ಲಿ ಕುಳಿತ ಈ ಪುಟ್ಟ ಹುಡುಗಿಯ ಫೋಟೋ ಆಗುತ್ತಿದೆ ಲಕ್ಷಾಂತರ ಜನರಿಗೆ ಪ್ರೇರಣೆ: ಏನಿದರ ವಿಶೇಷ??
ಮನಸ್ಸಿದ್ದರೆ ಮಾರ್ಗ ಎನ್ನುವ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಏನಾದರೂ ಸಾಧಿಸಬೇಕು ಎನ್ನುವ ಛಲ, ಅದಕ್ಕಾಗಿ ದೃಢ ಸಂಕಲ್ಪ, ಆ ಹಾದಿಯಲ್ಲಿ ನಡೆಯುವ ಶ್ರಮ ಮತ್ತು ಆತ್ಮವಿಶ್ವಾಸ ಇದ್ದರೆ ಎಂತಹುದೇ ಕಷ್ಟವೇ ಆದರೂ ಅದು ಇಷ್ಟವಾಗಿ ಬದಲಾಗುತ್ತದೆ. ಈ ಎಲ್ಲಾ ಮಾತುಗಳನ್ನು ಅಕ್ಷರಶಃ ಸತ್ಯ ಎಂದು ತೋರಿಸುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದ ನೆಟ್ಟಿಗರು ಸಹಾ ಈ ಫೋಟೋ ನೋಡಿ ಬಹಳ ಹೆಮ್ಮೆ ಎನಿಸುತ್ತಿದೆ ಎನ್ನುತ್ತಲೇ ಇನ್ನೊಂದು ಕಡೆ ಬೇಸರವನ್ನು ಸಹಾ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಅದೇ ವೇಳೆ ಈ ಫೋಟೋವನ್ನು ನೋಡಿದ ಪ್ರತಿಯೊಬ್ಬರಿಗೂ ಇದೊಂದು ಪ್ರೇರಣೆಯನ್ನು ನೀಡುತ್ತಿದೆ. ಏಕೆಂದರೆ ಒಬ್ಬ ಪುಟ್ಟ ಹುಡುಗಿಯ ಓದಬೇಕೆನ್ನುವ ಆಸಕ್ತಿಯು, ನೋಡುಗರ ಮನಸ್ಸನ್ನು ಸೆಳೆಯುತ್ತಿದೆ. ಒಬ್ಬ ಚಿಕ್ಕ ಹುಡುಗಿ ರಸ್ತೆ ಬದಿಯಲ್ಲಿ, ಫುಟ್ ಪಾತ್ ನಲ್ಲಿ ಕುಳಿತುಕೊಂಡು, ಪಕ್ಷಿಗಳಿಗಾಗಿ ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದಾಳೆ. ಅಷ್ಟೇ ಅಲ್ಲ ಅದೇ ವೇಳೆ ಆ ಹುಡುಗಿ ಕೈಯಲ್ಲೊಂದು ಪುಸ್ತಕವನ್ನು ಹಿಡಿದು ಓದುತ್ತಿರುವುದನ್ನು ಸಹಾ ನಾವು ನೋಡಬಹುದಾಗಿದೆ.
ಈ ಪುಟ್ಟ ಬಾಲಕಿಯ ವೈರಲ್ ಫೋಟೋ ಎಲ್ಲಿನದು ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಓದಬೇಕೆನ್ನುವ ಆಸಕ್ತಿ ಇದ್ದರೆ ಅದು ಮನುಷ್ಯನನ್ನು ಎಲ್ಲಿಯವರೆಗೆ ಕರೆದುಕೊಂಡು ಹೋಗಬಲ್ಲುದು ಎನ್ನುವುದನ್ನು ನೀವು ಈ ಫೋಟೋವನ್ನು ನಾವು ನೋಡಬಹುದು. ಅಲ್ಲದೇ ಪುಟ್ಟ ಹುಡುಗಿಯ ಈ ಆಸಕ್ತಿಯು ಮುಂದೆ ಆಕೆಯ ಭವಿಷ್ಯವನ್ನು ರೂಪಿಸುವುದರಲ್ಲಿ ಅನುಮಾನವೇ ಇಲ್ಲ. ಈ ಸುಂದರವಾದ ಫೋಟೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸುಶಾಂತ್ ನಂದ ಅವರು ಫೋಟೋ ಶೇರ್ ಮಾಡಿಕೊಂಡು, ಅದರ ಜೊತೆಗೆ ಶೀರ್ಷಿಕೆಯಲ್ಲಿ ಹಿಂದಿ ಕವಿ ದುಷ್ಯಂತ್ ಕುಮಾರ್ ಅವರ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ. “ಬೆಂಕಿಯು ಎಲ್ಲೇ ಇರಲಿ, ಅದು ಜ್ವಲಿಸಬೇಕು” ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಈಗಾಗಲೇ 800 ಕ್ಕಿಂತ ಅಧಿಕ ಮಂದಿ ರೀಟ್ವೀಟ್ ಮಾಡಿಕೊಂಡಿದ್ದರೆ, ಐದು ಸಾವಿರಕ್ಕೂ ಮೀರಿದ ಮಂದಿ ಲೈಕ್ ನೀಡಿದ್ದು, ಅನೇಕರು ಕಾಮೆಂಟ್ ಮಾಡಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ಕಾಮೆಂಟ್ ಮಾಡಿದವರಲ್ಲಿ ನೆಟ್ಟಿಗರೊಬ್ಬರು, ವಿದ್ಯೆಯನ್ನು ಕಲಿಯುವುದಕ್ಕೆ ಸ್ಥಳದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ನಿನ್ನ ಹಠವು ಚೆನ್ನಾಗಿದೆ, ಅದನ್ನು ಹಾಗೆ ಮುಂದುವರೆಸು, ನಿನ್ನ ಉಜ್ವಲ ಭವಿಷ್ಯಕ್ಕೆ ಶುಭವಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ ಮತ್ತೊಬ್ಬರು. ಹೀಗೆ ಅನೇಕರು ಕಾಮೆಂಟ್ ಮಾಡಿ ಪುಟ್ಟ ಹುಡುಗಿಯ ಈ ಆಸಕ್ತಿಯನ್ನು ಕಂಡು ಸಾಕಷ್ಟು ಮೆಚ್ಚುಗೆಗಳನ್ನು ನೀಡಿದ್ದಾರೆ.