ಪ್ರಶಾಂತ್ ನೀಲ್ ಗೆ ಕೆಲವು ದಿನ ಕಾಯಲು ಹೇಳಿದ ತೆಲುಗು ಸ್ಟಾರ್ ನಟರು: ಈ ಬೆಳವಣಿಗೆ ಹಿಂದೆ ಇದು ಬಹುಮುಖ್ಯ ಕಾರಣ

Entertainment Featured-Articles News
94 Views

ಕೆಜಿಎಫ್ ಚಿತ್ರದ ನಂತರ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ ಪ್ರಶಾಂತ್ ನೀಲ್. ಕನ್ನಡ ಚಿತ್ರರಂಗದಲ್ಲಿ ಉಗ್ರಂ ಸಿನಿಮಾ ಮೂಲಕ ದೊಡ್ಡ ಸದ್ದನ್ನು ಮಾಡಿದ ಈ ನಿರ್ದೇಶಕ ಸ್ಯಾಂಡಲ್ ವುಡ್ ಗಮನವನ್ನು ತನ್ನತ್ತ ಸೆಳೆದರು. ಉಗ್ರಂ ನಂತರ ಕೆಜಿಎಫ್ ಸಿನಿಮಾ ಮೂಲಕ ಇಡೀ ಭಾರತದ ಗಮನವನ್ನು ಕನ್ನಡ ಚಿತ್ರರಂಗದತ್ತ ಸೆಳೆಯುವಂತೆ ಮಾಡಿದರು. ಇನ್ನು ಇದೀಗ ಅವರ ಕೆಜಿಎಫ್ ಟು ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ನಿರೀಕ್ಷೆ ಬಹಳಷ್ಟಿದೆ. ಕೆಜಿಎಫ್ ನಂತರ ನೆರೆಯ ತೆಲುಗು ಚಿತ್ರರಂಗದಲ್ಲಿ ಪ್ರಶಾಂತ್ ನೀಲ್ ಅವರಿಗೆ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

ತೆಲುಗಿನ ಸ್ಟಾರ್ ನಟ ಹಾಗೂ ನಿರ್ಮಾಪಕರು ಪ್ರಶಾಂತ್ ನೀಲ್ ಅವರ ಕಡೆಗೆ ಗಮನಹರಿಸಿದ್ದಾರೆ. ಅವರೊಟ್ಟಿಗೆ ಸಿನಿಮಾಗಳನ್ನು ಮಾಡುವ ಆಸಕ್ತಿಯನ್ನು ತೋರಿಸಿದ್ದಾರೆ. ಈಗಾಗಲೇ ಪ್ರಶಾಂತ್ ನೀಲ್ ಅವರು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾವನ್ನು ಮಾಡುತ್ತಿದ್ದಾರೆ. ಅಲ್ಲದೆ ತೆಲುಗಿನ ಸ್ಟಾರ್ ನಟ ಎನ್ ಟಿ ಆರ್ ಜೊತೆಗೆ ಕೂಡಾ ಸಿನಿಮಾ ಮಾಡಲಿದ್ದಾರೆ ಎನ್ನುವುದು ಈಗಾಗಲೇ ಅಧಿಕೃತವಾಗಿ ಘೋಷಣೆ ಕೂಡಾ ಆಗಿದೆ. ಆದರೆ ಇವೆಲ್ಲವುಗಳ ನಡುವೆ ಈಗ ಹೊಸ ಸುದ್ದಿಯೊಂದು ಹರಿದಾಡಿದೆ..

ತೆಲುಗಿನ ಸ್ಟಾರ್ ನಟರು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾಗಳಿಂದ ಸದ್ಯಕ್ಕಂತೂ ದೂರ ಉಳಿಯುವ ಆಲೋಚನೆ ಯೊಂದನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಸ್ತುತ ಪ್ರೇಕ್ಷಕರು ಹಾಗೂ ಸ್ಟಾರ್ ಗಳ ದೃಷ್ಟಿ ಪ್ರಶಾಂತ್ ನೀಲ್ ಅವರ ಎರಡು ಸಿನಿಮಾಗಳ ಮೇಲೆ ನಿಂತಿದೆ. ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಕೆಜಿಎಫ್-2 ಒಂದು ಕಡೆಯಾದರೆ, ಮತ್ತೊಂದು ಕಡೆ ಸಲಾರ್ ಸಿನಿಮಾದ ಬಗ್ಗೆಯೂ ಈಗಾಗಲೇ ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಎರಡು ಸಿನಿಮಾಗಳ ಬಿಡುಗಡೆಯಾಗುವವರೆಗೂ ಪ್ರಶಾಂತ್ ಅವರ ಕಾರ್ಯಗಳನ್ನು ದೂರದಿಂದಲೇ ನೋಡುವ ಹೊಸ ತಂತ್ರವೊಂದನ್ನು ತೆಲುಗು ನಟರು ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ತೆಲುಗಿನ ಸ್ಟಾರ್ ನಟರಾಗಿರುವ ರಾಮ್ ಚರಣ್ ತೇಜ, ಜೂನಿಯರ್ ಎನ್ಟಿಆರ್ ಹಾಗೂ ಪ್ರಿನ್ಸ್ ಮಹೇಶ್ ಬಾಬು ಭೇಟಿಯನ್ನು ಮಾಡಿ ನಿರ್ಧಾರವೊಂದನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಕೊರೊನಾ ನಂತರದ ಪರಿಸ್ಥಿತಿಗಳಲ್ಲಿ ಜನರ ಮನಸ್ಥಿತಿ ಬದಲಾಗಿದೆ, ಮುಂದಿನ ದಿನಗಳಲ್ಲಿ ಸಿನಿಮಾ ಪರಿಸ್ಥಿತಿ ಹೇಗಿರಲಿದೆ ಎನ್ನುವ ಕಳವಳವೊಂದು ಮೂಡಿದ್ದು, ದೊಡ್ಡ ಬಜೆಟ್ ಸಿನಿಮಾಗಳನ್ನು ಮಾಡಿದರೆ ಹಾಕಿರುವ ಬಂಡವಾಳ ವಾಪಸ್ಸು ಬರುವುದೇ ಎನ್ನುವ ಆತಂಕ ಕೂಡಾ ಇದೆ. ಆದ್ದರಿಂದಲೇ ಪ್ರಶಾಂತ್ ನೀಲ್ ಜೊತೆಗೆ ಡ್ರೀಮ್ ಪ್ರಾಜೆಕ್ಟ್ ಗಳನ್ನು ಮಾಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಆರ್ ಆರ್ ಆರ್ ಮತ್ತು ಪುಷ್ಪ ಸಿನಿಮಾಗಳ ಯಶಸ್ಸು ಹಾಗೂ ಪ್ರಶಾಂತ್ ನೀಲ್ ಅವರ ನಿರ್ದೇಶನದ ಕೆಜಿಎಫ್-2 ಹಾಗೂ ಸಲಾರ್ ಸಿನಿಮಾಗಳ ಬಿಡುಗಡೆಯ ನಂತರ ಅವುಗಳ ಕಲೆಕ್ಷನ್ ಹಾಗೂ ಜನರ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದನ್ನು ನೋಡಿ ಸ್ಟಾರ್ ನಟರು ಮುಂದಿನ ಆಲೋಚನೆಯನ್ನು ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸಿನಿಮಾ ರಂಗದಲ್ಲಿ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ವ್ಯವಹಾರ ನಡೆಯುವುದರಿಂದ, ಸ್ಟಾರ್ ನಟರು ಇಂತಹುದೊಂದು ಆಲೋಚನೆಯನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *