ಪೇಪರ್ ಕೊರತೆಯಿಂದ ಪರೀಕ್ಷೆಗಳನ್ನೇ ರದ್ದು ಮಾಡಿದ ಸರ್ಕಾರ: ಎಂತಹ ದೀನ ಸ್ಥಿತಿ ಇದು!!
ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಸಂಕ್ಷೋಭೆ ದಿನದಿಂದ ದಿನಕ್ಕೆ ತೀವ್ರ ರೂಪವನ್ನು ಪಡೆದುಕೊಳ್ಳುತ್ತಿದೆ. ದೇಶದಲ್ಲಿ ಉದ್ಭವಿಸಿರುವ ಹಣದ ಕೊರತೆಯಿಂದಾಗಿ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ದೇಶಕ್ಕೆ ಅಗತ್ಯವಿರುವ ಪ್ರಮಾಣದ ಇಂಧನವನ್ನು ಸಹಾ ಆಮದು ಮಾಡಿಕೊಳ್ಳಲು ಹಣ ಕೊರತೆಯಾಗಿದೆ ಎಂದು ಶ್ರೀಲಂಕಾದ ಸರ್ಕಾರ ತನ್ನ ಕೈಚೆಲ್ಲಿದೆ. ಶ್ರೀಲಂಕಾದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಆರ್ಥಿಕ ಪತನ ಉಂಟಾಗಿದ್ದು, ಶ್ರೀಲಂಕಾ ಸರ್ಕಾರವು ಸಂಕಷ್ಟದ ಪರಿಸ್ಥಿತಿಯಲ್ಲಿ ಪರದಾಡುವಂತಹ ದೀನ ಸ್ಥಿತಿಯು ನಿರ್ಮಾಣವಾಗಿದೆ.
ದೇಶದಲ್ಲಿ ತೀವ್ರವಾದ ವಿದ್ಯುತ್ ಕೊರತೆ ಉಂಟಾಗಿದೆ. ಕೊರೋನಾ ನಂತರದ ದಿನಗಳಲ್ಲಿ ಶ್ರೀಲಂಕಾದ ಪ್ರಮುಖವಾದ ಆದಾಯದ ಮೂಲವಾದ ಪ್ರವಾಸೋದ್ಯಮದ ಮೇಲೆ ಬಲವಾದ ಪೆಟ್ಟು ಬಿದ್ದಿರುವ ಕಾರಣ ದೇಶದ ಆರ್ಥಿಕ ಸ್ಥಿತಿಯು ಈ ಮಟ್ಟಕ್ಕೆ ಕುಸಿದಿದೆ ಎಂದು ಹೇಳಲಾಗುತ್ತಿದೆ. ಭಾರತವು ಇತ್ತೀಚಿಗಷ್ಟೇ ಆರ್ಥಿಕ ನೆರವನ್ನು ನೀಡಿದ್ದರೂ ಸಹಾ ಶ್ರೀಲಂಕಾ ಸಾಲಗಳ ಹೊರೆಯಿಂದ ಹೊರಗೆ ಬರುವುದು ಸಾಧ್ಯವಾಗುತ್ತಿಲ್ಲ. ಇಲ್ಲಿನ ಸಂಪೂರ್ಣ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದೆ.
ಈಗ ದೇಶದ ಆರ್ಥಿಕ ಪರಿಸ್ಥಿತಿ ಮಟ್ಟ ತಲುಪಿದೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುವಂತಹ ಘಟನೆಯೊಂದು ನಡೆದಿದೆ. ಹೌದು ಆಮದುಗಳನ್ನು ಮಾಡಿಕೊಳ್ಳುವುದಕ್ಕೂ ಆಗದ ದೀನ ಸ್ಥಿತಿಗೆ ತಲುಪಿರುವ ಶ್ರೀಲಂಕಾ ದಲ್ಲಿ ಕಾಗದ ಅಥವಾ ಪೇಪರ್ ಖಾಲಿಯಾಗಿದೆ. ಇದರಿಂದಾಗಿ ಅಲ್ಲಿನ ಸರ್ಕಾರ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸಹಾ ನಿರ್ವಹಿಸಲಾರದ ಪರಿಸ್ಥಿತಿಗೆ ಬಂದು ತಲುಪಿದೆ. ಈ ಕಾರಣದಿಂದ ಸೋಮವಾರ ಆರಂಭವಾಗಬೇಕಿದ್ದು ಟರ್ಮ್ ಪರೀಕ್ಷೆಗಳನ್ನು ಅಲ್ಲಿನ ಸರ್ಕಾರ ಅನಿರ್ಧಿಷ್ಟ ಕಾಲದವರೆಗೆ ಮುಂದೂಡಿದೆ.
ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ಹಾಗೂ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಬರೆಯಲು ಅಗತ್ಯ ಇರುವಷ್ಟು ಪೇಪರ್ ಪೂರೈಕೆ ಮಾಡಲು ಸಾಧ್ಯವಾಗದ ಕಾರಣಕ್ಕೆ ಪರೀಕ್ಷೆ ಮುಂದೂಡಲಾಗಿದೆ ಎಂದು ಅಲ್ಲಿನ ಅಧಿಕಾರಿ ವರ್ಗವು ಸೂಚನೆ ಹೊರಡಿಸಿದೆ. ಇದರಿಂದಾಗಿ ದೇಶದಲ್ಲಿ ಒಟ್ಟು 35 ಲಕ್ಷ ಮಂದಿ ವಿದ್ಯಾರ್ಥಿಗಳ ಮೇಲೆ ಇದು ಪರಿಣಾಮವನ್ನು ಬೀರಲಿದೆ ಎಂದು ತಿಳಿದು ಬಂದಿದೆ. ಶ್ರೀಲಂಕಾದ ಈ ಆರ್ಥಿಕ ದುಸ್ಥಿತಿ ಪ್ರಜೆಗಳನ್ನು ಸಂಕಷ್ಟಕ್ಕೆ ದೂಡಿದೆ.