ಪುನೀತ್ ರಾಜ್‍ಕುಮಾರ್: ಕೊನೆಯ ಕ್ಷಣಗಳಲ್ಲಿ ನಡೆದಿದ್ದೇನು? ವೈದ್ಯರು ಹೇಳಿದ್ದೇನು??

Written by Soma Shekar

Published on:

---Join Our Channel---

ಪುನೀತ್ ರಾಜ್‍ಕುಮಾರ್ ಈಗ ಒಂದು ಸ್ಮರಣೆ ಮಾತ್ರ ಎನ್ನುವುದನ್ನು ಮನಸ್ಸು ಒಪ್ಪುವುದಿಲ್ಲ. ಆದರೆ ವಾಸ್ತವವನ್ನು ಒಪ್ಪಲೇಬೇಕಾದ ಪರಿಸ್ಥಿತಿ ಇದೆ. ಪುನೀತ್ ಅವರ ಅಗಲಿಕೆ ಕನ್ನಡ ಸಿನಿಮಾ ರಂಗ ಹಾಗೂ ಸಿನಿ ಪ್ರೇಮಿಗಳ ಮೇಲೆ ಬರ ಸಿಡಿಲಿನ ಹಾಗೆ ಬಡಿದಿದೆ. ನಿನ್ನೆ ಇಷ್ಟಕ್ಕೂ ಆಗಿದ್ದಾದರೂ ಏನು?? ಈ ಬಗ್ಗೆ ವೈದ್ಯರು ಹೇಳಿದ್ದೇನು?? ಎನ್ನುವುದು ನಿಜಕ್ಕೂ ಬಹಳ ದುಃಖವನ್ನು ನೀಡುತ್ತದೆ. ಪುನೀತ್ ರಾಜ್‍ಕುಮಾರ್ ಅವರಿಗೆ ಹೃದಯಾಘಾತ ಆಗಿತ್ತು ಎನ್ನಲಾಗಿತ್ತು. ಆದರೆ ನಂತರ ಅವರಿಗೆ ಆಗಿದ್ದು ಹೃದಯ ಸ್ತಂಭನ ( ಕಾರ್ಡಿಯಾಕ್ ಅರೆಸ್ಟ್ ) ಎನ್ನಲಾಗಿದೆ.

ನಿನ್ನೆ ಪುನೀತ್ ಅವರು ಜಿಮ್ ನಲ್ಲಿ ವರ್ಕೌಟ್ ಮುಗಿಸಿದ ನಂತರ ಸ್ವಲ್ಪ ಸುಸ್ತಾಗುತ್ತಿದೆ ಎಂದು ಹೇಳಿ, ಅವರ ಮಡದಿಯ ಜೊತೆಗೆ ತಮ್ಮ ಫ್ಯಾಮಿಲಿ ಡಾಕ್ಟರ್ ರಮಣರಾವ್ ಅವರ ಕ್ಲಿನಿಕ್ ಗೆ ಹೋಗಿದ್ದಾರೆ. ಪ್ರತಿನಿತ್ಯ ಅವರು ಜಿಮ್ ನಲ್ಲಿ ಮಾಡುವ ಎಲ್ಲಾ ವರ್ಕೌಟ್ ಮಾಡಿದ್ದಾರೆ. ಆದರೆ ನಿನ್ನೆ ಅವರಿಗೆ ಸುಸ್ತು ಕಾಣಿಸಿಕೊಂಡಿದೆ. ರಮಣ ಶ್ರೀ ಆಸ್ಪತ್ರೆಗೆ ಬಂದಾಗ ಅವರಿಗೆ ಎದೆ ನೋವು ಕಾಣಿಸಿಕೊಂಡಿರಲಿಲ್ಲ ಎಂದು ವೈದ್ಯರಾದ ರಮಣರಾವ್ ಅವರು ಹೇಳಿದ್ದಾರೆನ್ನಲಾಗಿದೆ. ಆದರೆ ಪುನೀತ್ ಅವರು ಬೆವರುತ್ತಿದ್ದುದ್ದನ್ನು ನೋಡಿ ವೈದ್ಯರು ಅದನ್ನು ಪ್ರಶ್ನೆ ಮಾಡಿದ್ದಾರೆ.

ಆಗ ಪುನೀತ್ ಅವರು ನೇರವಾಗಿ ಜಿಮ್ ನಿಂದ ಬಂದೆ, ಇಷ್ಟು ಬೆವರು ವ್ಯಾಯಾಮ ಮಾಡಿದಾಗ ಬರೋದು ಸಾಮಾನ್ಯ ಎಂದು ಉತ್ತರ ನೀಡಿದ್ದಾರೆ. ಆದರೆ ವೈದ್ಯ ರಮಣರಾವ್ ಅವರಿಗೆ ಪುನೀತ್ ಅವರಿಗೆ ಬರುತ್ತಿದ್ದ ಬೆವರು ಸಾಮಾನ್ಯ ಅಲ್ಲ ಎನಿಸಿ, ಇಸಿಜಿ ಮಾಡಿಸಿದ್ದಾರೆ. ಆಗ ಅವರಿಗೆ ಇಸಿಜಿಯಲ್ಲಿ ಸ್ಟ್ರೈನ್ ಇರುವುದು ತಿಳಿದು ಅಪಾಯ ಬರಲಿದೆ ಎನ್ನುವ ಸೂಚನೆ ಸಿಕ್ಕಿತ್ತಂತೆ. ಪುನೀತ್ ಅವರಿಗೆ ಸುಸ್ತಿನ ಜೊತೆಗೆ ತಲೆ ಸುತ್ತುತ್ತಿದೆ, ಕಣ್ಣು ಬಿಡಲಾಗುತ್ತಿಲ್ಲ ಎಂದು ಸಹಾ ಹೇಳಿದ್ದಾರೆ. ಕೂಡಲೇ ರಮಣ ರಾವ್ ಅವರು ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕಳುಹಿಸಿದ್ದಾರೆ.

ರಮಣ ಶ್ರೀ ಆಸ್ಪತ್ರೆಯಿಂದ ಐದಾರು ನಿಮಿಷಗಳ ದೂರದಲ್ಲಿದ್ದ ವಿಕ್ರಂ ಆಸ್ಪತ್ರೆಗೆ ಪುನೀತ್ ಅವರು ಪತ್ನಿ ಅಶ್ವಿನಿ ಅವರ ಜೊತೆ ತಲುಪಿದ್ದಾರೆ. ಆದರೆ ಆ ವೇಳೆಗಾಗಲೇ ತಡವಾಗಿ ಹೋಗಿತ್ತು. ಪುನೀತ್ ಅವರನ್ನು ಉಳಿಸಿಕೊಳ್ಳಲು ವಿಕ್ರಂ ಆಸ್ಪತ್ರೆಯ ವೈದ್ಯರು ಬಹಳ ಪ್ರಯತ್ನಪಟ್ಟಿದ್ದಾರೆ. ಆದರೆ ಪ್ರಯತ್ನಗಳು ಫಲಿಸಲೇ ಇಲ್ಲ. ಪುನೀತ್ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರಿಗೆ ಆಗಿದ್ದು ಹೃದಯಾಘಾತವಲ್ಲ ಅದು ಹೃದಯ ಸ್ತಂಭನ ಎನ್ನಲಾಗಿದೆ.

ಐಸಿಯು ನಲ್ಲಿರುವಾಗಲೂ ಹೃದಯ ಸ್ತಂಭನ ಆದರೂ ವ್ಯಕ್ತಿಯನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟ ಎನ್ನಲಾಗಿದೆ. ಕಾರ್ಡಿಯಾಕ್​ ಅರೆಸ್ಟ್ ಆದಾಗ ವ್ಯಕ್ತಿಯ ದೇಹದ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಡಾಕ್ಟರ್ ರಮಣ ರಾವ್​ ಅವರು ಹೇಳಿದ್ದಾರೆ. ಒಟ್ಟಿನಲ್ಲಿ ಪುನೀತ್ ಅವರ ಅಗಲಿಕೆ ಅಸಂಖ್ಯಾತ ಕಣ್ಣುಗಳಲ್ಲಿ ಕಂಬನಿಗೆ ಕಾರಣವಾಗಿದೆ‌. ಸರಳತೆಯೇ ಮೈದಳೆದಿದ್ದ ದೊಡ್ಮನೆಯ ಕುಡಿಯ ಅಗಲಿಕೆ ಅಪಾರ ನೋವು ಉಳಿಸಿ ಹೋಗಿದೆ.

Leave a Comment