ಪುನೀತ್ ಬಗ್ಗೆ ಪರಮೇಶ್ವರ ಗುಂಡ್ಕಲ್ ಹೇಳಿದ ವಿಷಯ ಕೇಳಿದ್ರೆ, ಅಪ್ಪು ಅವರ ಮೇಲೆ ಗೌರವ ದುಪ್ಪಟ್ಟಾಗುತ್ತೆ

Written by Soma Shekar

Published on:

---Join Our Channel---

ಸ್ಯಾಂಡಲ್ವುಡ್ ನ ಕಣ್ಮಣಿ, ದೊಡ್ಮನೆ ಹುಡುಗ ಪುನೀತ್ ಅವರು ಸ್ಮರಣೆ ಮಾತ್ರ ಎಂದಾಗ ಮನಸ್ಸು ಎಲ್ಲೋ ಒಂದು ಕಡೆ ಅರಿಯದ ವೇದನೆ ಯನ್ನು ಅನುಭವಿಸುತ್ತದೆ. ನಂಬಲಾಗದಂತಹ ವಾಸ್ತವ ಇದು. ಪುನೀತ್ ಅವರ ಹಠಾತ್ ಸಾವು ಅನೇಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಇಂದು ಪುನೀತ್ ಅವರ ಅಂತಿಮ ಸಂಸ್ಕಾರ ಮುಗಿದು, ಪುನೀತ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಆದರೂ ಅವರು ನಮ್ಮ ಸುತ್ತ ಮುತ್ತಲಲ್ಲೇ ಇದ್ದಾರೆ ಎನ್ನುವ ಭಾವನೆ ಮಾತ್ರ ಎಲ್ಲರಿಗೂ ಇದೆ. ಅವರ ವ್ಯಕ್ತಿತ್ವ ಹಾಗೂ ಜೀವನ ಅಂತಹದ್ದು. ನಾಡು ಕಂಡ ಅಪರೂಪದ ಸ್ಟಾರ್ ಅವರು.

ಪುನೀತ್ ಅವರು ಬೆಳ್ಳಿ ತೆರೆ ಮಾತ್ರವೇ ಅಲ್ಲ, ಕಿರುತೆರೆಯಲ್ಲಿ ಸಹಾ ಮಿಂಚಿದ್ದ ನಟ. ಅವರ ನಿರೂಪಣೆಯ ಕನ್ನಡದ ಕೋಟ್ಯಾಧಿಪತಿ ಕ್ವಿಜ್ ಶೋ ಕಂಡ ದೊಡ್ಡ ಯಶಸ್ಸು ಎಲ್ಲರಿಗೂ ತಿಳಿದೇ ಇದೆ. ಈ ಶೋ ಪ್ರಸಾರವಾಗುತ್ತಿದ್ದ ಕಲರ್ಸ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ ಗುಂಡ್ಕಲ್ ಅವರು ಫೇಸ್ ಬುಕ್ ನಲ್ಲಿ ಒಂದು ಪೋಸ್ಟ್ ಮಾಡಿ, ಪುನೀತ್ ಅವರ ಹೃದಯವಂತಿಕೆಯ ಬಗ್ಗೆ ಇದುವರೆಗೂ ಹೇಳದ ವಿಷಯವೊಂದನ್ನು ಹಂಚಿಕೊಂಡಿದ್ದು, ದೊಡ್ಡನೆ ಹುಡುಗನ ದೊಡ್ಡ ಮನಸ್ಸಿಗೆ ಕೈ ಎತ್ತಿ ಮುಗಿಯಬೇಕು ಎನಿಸದೇ ಇರಲಾರದು.

ಅವರು ತಮ್ಮ ಪೋಸ್ಟ್ ನಲ್ಲಿ, ಕೋಟ್ಯಧಿಪತಿ ಎಪಿಸೋಡ್ ಶೂಟ್ ಆಗುವಾಗ ಪ್ರತೀ ಪ್ರಶ್ನೆಗೂ ಕಂಟೆಸ್ಟೆಂಟುಗಳಿಗಿಂತ ಹೆಚ್ಚು ಒತ್ತಡದಲ್ಲಿ ಇರುತ್ತಿದ್ದುದು ಸ್ವತಃ ಅಪ್ಪು. ಎಲ್ಲರೂ ದುಡ್ಡು ಗೆಲ್ಲಬೇಕು, ಎಲ್ಲರೂ ಖುಷಿಯಾಗಿರಬೇಕು ಎಂದು ಪ್ರಾಮಾಣಿಕವಾಗಿ ಆಸೆಪಡುತ್ತಿದ್ದ ಒಳ್ಳೆ ಮನಸ್ಸು. ಮೂರು ಲಕ್ಷ ಇಪ್ಪತ್ತು ಸಾವಿರದ ನಂತರ ಪ್ರತಿ ಪ್ರಶ್ನೆಯೂ ಅವರನ್ನು ಸಿಕ್ಕಾಪಟ್ಟೆ ನರ್ವಸ್ ಮಾಡುತ್ತಿತ್ತು. ತಪ್ಪು ಉತ್ತರ ಕೊಟ್ಟಾಗ ಕಂಟೆಸ್ಟೆಂಟುಗಳಿಗಿಂತ ಹೆಚ್ಚು ನಿರಾಶೆ ಆಗುತ್ತಿದ್ದದ್ದು ಅಪ್ಪುಗೆ. ಸರಿ ಉತ್ತರ ಕೊಟ್ಟಾಗ ಅವರ ದನಿಯಲ್ಲಿ ಸಿಕ್ಕಾಪಟ್ಟೆ ಎಕ್ಸೈಟ್ಮೆಂಟ್.

ಯಾರಾದ್ರೂ ಕೋಟಿ ಗೆಲ್ಲಬೇಕು ಎಂದು ಸಾವಿರ ಸಲ ಹೇಳುತ್ತಿದ್ದರು. ತಪ್ಪು ಉತ್ತರ ಕೊಟ್ಟು ಯಾರಾದರೂ ದುಡ್ಡು ಸೋತರೆ ಶೂಟಿಂಗ್ ಮುಗಿದ ಮೇಲೆ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಳ್ಳುತ್ತಿದ್ದರು. ಗೆಲ್ಲದ ಎಷ್ಟೋ ಜನರಿಗೆ ತಾವೇ ದುಡ್ಡು ಕೊಡುತ್ತಿದ್ದರು ಮತ್ತು ಅದು ಎಲ್ಲೂ ಸುದ್ದಿಯಾಗದ ಹಾಗೆ ನೋಡಿಕೊಳ್ಳುತ್ತಿದ್ದರು. ಎಲ್ಲರಿಗೂ ಸಿಕ್ಕಾಪಟ್ಟೆ ದುಡ್ಡು ಸಿಗಬೇಕು, ಯಶಸ್ಸು ಸಿಗಬೇಕು, ಎಲ್ಲರೂ ದೇಶ ಸುತ್ತಬೇಕು, ಖುಷಿಯಾಗಿರಬೇಕು ಅಂತ ಬಹಳ ಪ್ರಾಮಾಣಿಕವಾಗಿ ಆಸೆ ಪಡುತ್ತಿದ್ದ ವ್ಯಕ್ತಿ ಎಂದು ಹೇಳಿದ್ದಾರೆ.

Leave a Comment