ಪುನೀತ್ ಆತ್ಮದೊಡನೆ ಮಾತನಾಡಿದೆ ಎಂದ ವಿದೇಶಿಗನಿಗೆ ಚಳಿ ಬಿಡಿಸಿದ ಅಭಿಮಾನಿಗಳು

Entertainment Featured-Articles News
83 Views

ಕರ್ನಾಟಕದ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ 11 ದಿನಗಳಾಗಿವೆ. ಅಪ್ಪು ಅವರ ಕುಟುಂಬ ಆ ನೋವಿನಲ್ಲೇ ಇಂದು ಹನ್ನೊಂದನೇ ದಿನದ ಕಾರ್ಯವನ್ನು ಮುಗಿಸಿದೆ. ಇನ್ನೊಂದೆಡೆ ಪ್ರತಿದಿನ ಸಾವಿರಾರು ಜನ ಅಭಿಮಾನಿಗಳು ಪುನೀತ್ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಗೌರವ ನಮನವನ್ನು ಸಲ್ಲಿಸುತ್ತಿದ್ದಾರೆ. ಜನರಿಗೆ ಇನ್ನೂ ಸಹಾ ಈ ನೋವಿನಿಂದ ಹೊರ ಬರುವುದಕ್ಕೆ ಸಾಧ್ಯವಾಗಿಲ್ಲ. ಇವೆಲ್ಲವುಗಳ ನಡುವೆ ಈಗ ಹೊಸದೊಂದು ಸುದ್ದಿ ಹೊರ ಬಂದಿದ್ದು, ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ‌.

ಇತ್ತೀಚಿಗೆ ಸೆಲೆಬ್ರಿಟಿಗಳು ನಿಧನರಾದಾಗ ಕೆಲವು ವಿದೇಶಿಯರು ಅದನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಸೆಲೆಬ್ರಿಟಿಗಳ ಆತ್ಮದೊಡನೆ ನಾವು ಮಾತನಾಡಿದ್ದೇವೆ ಎನ್ನುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಸುದ್ದಿಯಾಗುತ್ತಾರೆ. ಈಗ ಅದೇ ರೀತಿ ವಿದೇಶಿಗನೊಬ್ಬನು ತಾನು ಪುನೀತ್ ಆತ್ಮದ ಜೊತೆ ಮಾತನಾಡಿರುವುದಾಗಿ ಯೂಟ್ಯೂಬ್ ನಲ್ಲಿ ವೀಡಿಯೋ ಹಂಚಿಕೊಂಡಿದ್ದು, ಇದರಿಂದ ಪುನೀತ್ ಅಭಿಮಾನಿಗಳು ಬೇಸರಗೊಂಡಿದ್ದಾರೆ.

ಚಾರ್ಲಿ ಚಿಟ್ಟೆಂಡನ್ ಹೆಸರಿನ ಈ ವಿದೇಶದ ವ್ಯಕ್ತಿಯು ತನ್ನ ಮುಂದೆ ಸ್ಪೀಕರ್ ನಂತಹ ವಸ್ತುವೊಂದನ್ನು ಇಟ್ಟುಕೊಂಡು, ನೋಟ್ಸ್ ಹಿಡಿದು ಪ್ರಶ್ನೆಗಳನ್ನು ಕೇಳುತ್ತಾ ಉತ್ತರ ಕೊಡುತ್ತಿರುವುದು ಪುನೀತ್ ಅವರ ಆತ್ಮ ಎಂದು ಆತ ಹೇಳಿಕೊಂಡಿದ್ದಾನೆ. ಅಲ್ಲದೇ ಆತ ನಿಮ್ಮ ಮಕ್ಕಳಿಗೆ ಏನಾದ್ರೂ ಸಂದೇಶ ಇದೆಯೇ ಎಂದು ಕೇಳಿದಾಗ ಧ್ವನಿಯು ಐ ಲವ್ ದೆಮ್ ಎನ್ನುವ ಉತ್ತರ ನೀಡಿದೆ. ಚಾರ್ಲಿ ಶೇರ್ ಮಾಡಿದ ಈ ವೀಡಿಯೋ ನೋಡಿ ಅಪ್ಪು ಅವರ ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಕಾಮೆಂಟ್ ಅಲ್ಲೇ ಚಾರ್ಲಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಭಿಮಾನಿಗಳು ಚಾರ್ಲಿಗೆ ಈಗ ಸುಳ್ಳು ಸುದ್ದಿ ಹಬ್ಬಿಸಿ ಮೋಸ ಮಾಡ್ತಾ ಇದ್ದಾನೆ, ಯಾರೂ ಇದನ್ನು ನಂಬಬೇಡಿ ಎಂದಿದ್ದಾರೆ. ಅಲ್ಲದೇ ಅಪ್ಪು ಅವರ ಹೆಸರು ಹೇಳಿ ಗೂಬೆ ಕೂರಿಸಬೇಡ ಎಂದು ಹೇಳಿದ್ದಾರೆ. ವೀಡಿಯೋ ದಲ್ಲಿ ಧ್ವನಿ ಸ್ಪಷ್ಟವಾಗಿಲ್ಲ. ಇದನ್ನು ಕೇಳಿದ ಅಭಿಮಾನಿಗಳು ಇದು ಪುನೀತ್ ಅವರ ಧ್ವನಿಯೇ ಅಲ್ಲ ಎಂದು ಹೇಳಿದ್ದಾರೆ.

ಈ ಹಿಂದೆ ಕೂಡಾ ಸುಶಾಂತ್ ಸಿಂಗ್, ಸಿದ್ಧಾರ್ಥ್ ಶುಕ್ಲಾ ನಿಧನದ ನಂತರವೂ ಇಂತಹ ವೀಡಿಯೋಗಳು ವೈರಲ್ ಆಗಿದ್ದವು. ಇನ್ನೂ ಈ ವ್ಯಕ್ತಿ ತಾನು ಸಾಯಿ ಬಾಬಾ ಜೊತೆ, ಹಿರಿಯ ನಟಿ ಸಾವಿತ್ರಿ ಅವರ ಜೊತೆ ಕೂಡಾ ಮಾತನಾಡಿರುವುದಾಗಿ ಹೇಳಿದ್ದಾನೆ. ಒಟ್ಟಾರೆ ಸೆಲೆಬ್ರಿಟಿಗಳು ನಿಧನ ಹೊಂದಿದಾಗ ಅವರ ಆತ್ಮಗಳ ಜೊತೆ ಮಾತನಾಡುತ್ತೇವೆ ಎಂದು ಹೇಳುವ ವೀಡಿಯೋಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಇದನ್ನು ನಂಬುತ್ತಿದ್ದಾರೆ ಕೂಡಾ.

Leave a Reply

Your email address will not be published. Required fields are marked *