ಪುಟ್ಟ ಹುಡುಗನ ದೊಡ್ಡ ಗುಣ: ಇಂತಹ ಗುಣ ಎಲ್ಲರಿಗೂ ಇದ್ರೆ ಚೆನ್ನ ಎಂದ ಜನ, ವೈರಲ್ ಆಯ್ತು ವೀಡಿಯೋ

Entertainment Featured-Articles News Viral Video

ಮಾನವೀಯತೆ, ಸಹಾನುಭೂತಿ, ಅಂತಃಕರಣ ಇಂತಹ ಪದಗಳೆಲ್ಲಾ ಇಂದಿನ ಕಾಲದಲ್ಲಿ ಕೇವಲ ಪುಸ್ತಕಗಳು ಹಾಗೂ ಭಾಷಣಗಳಿಗೆ ಮೀಸಲಾಗಿದೆಯೇನೋ ಎನ್ನುವಂತಾಗಿದೆ. ಜನರು ತಾವಾಯಿತು, ತಮ್ಮ ಪಾಡಾಯಿತು ಎಂದು ತಮ್ಮ ಬಗ್ಗೆ ಮಾತ್ರವೇ ಆಲೋಚನೆ ಮಾಡುತ್ತಾ ಜೀವನವನ್ನು ಯಾಂತ್ರಿಕವಾಗಿ ಕಳೆಯುತ್ತಿದ್ದಾರೆ. ನಿಸ್ವಾರ್ಥ ಗುಣದಿಂದ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವ ಗುಣವುಳ್ಳವರ ಸಂಖ್ಯೆ ಕಡಿಮೆಯಾಗುತ್ತಿದೆಯೇನೋ ಎನಿಸುವಂತಾಗಿದೆ.

ಇಂತಹ ಒತ್ತಡದ ಜೀವನದಲ್ಲಿ ಯಾರಾದರೂ, ಎಲ್ಲಾದರೂ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾ ಮಾನವೀಯತೆಯನ್ನು ಮೆರೆದರೆ ಅಂತಹ ವಿಷಯಗಳು ದೊಡ್ಡ ಸುದ್ದಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯಗಳು ವೈರಲ್ ಆಗುತ್ತವೆ. ಜನರಿಂದ ಅಪಾರವಾದ ಮೆಚ್ಚುಗೆಗಳು ಹರಿದು ಬರುತ್ತವೆ. ನೆಟ್ಟಿಗರು ಇಂತಹವರ ಸಂಖ್ಯೆ ಹೆಚ್ಚಾಗಬೇಕು ಎಂದು ಆಶಯವನ್ನು ವ್ಯಕ್ತಪಡಿಸುತ್ತಾರೆ. ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಅಂತಹುದೇ ಒಂದು ವೀಡಿಯೋ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆದಿದೆ.

ಇದು ಬಿರು ಬೇಸಿಗೆಯ ಕಾಲ, ಜನ ಬಿಸಿಲಿನ ಝಳಕ್ಕೆ ಬಸವಳಿಯುತ್ತಿದ್ದಾರೆ. ಇಂತಹ ಬಿಸಿಲಿನ ಬೇಗೆಯ ವೇಳೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರ ಸಂಕಷ್ಟ ನಿಜಕ್ಕೂ ಮನಕಲಕುವ ಹಾಗಿರುತ್ತದೆ. ಈಗ ವೈರಲ್ ಆಗಿರುವ ವೀಡಿಯೋದಲ್ಲಿ ಹೀಗೆ ರಸ್ತೆ ಬದಿಯಲ್ಲಿ ಹೂ ಮಾರುತ್ತಿದ್ದವರಿಗೆ ಬಾಲಕನೊಬ್ಬ ನೀರಿನ ಬಾಟಲಿಗಳನ್ನು ಹಂಚಿರುವ ಒಂದು ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಮೆಚ್ಚುಗೆಗಳು ಹರಿದು ಬರುತ್ತಿವೆ. ಹಾಗಾದರೆ ಈ ಘಟನೆ ನಡೆದಿದ್ದೆಲ್ಲಿ? ಬನ್ನಿ ತಿಳಿಯೋಣ.

ಬಾಲಕನ ಹೆಸರು ಅಯಾನ್ ಎನ್ನಲಾಗಿದ್ದು, ಈತ ಒಂದು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ನೀರಿನ ಬಾಟಲಿಗಳನ್ನು ತಂದು, ಬಿಸಲಿನಲ್ಲಿ ಹೂ ಮಾರುತ್ತಿದ್ದವರಲ್ಲಿ ನೀರು ಅಗತ್ಯವಿದ್ದವರಿಗೆ ಬಾಟಲಿಗಳನ್ನು ಹಂಚಿದ್ದಾನೆ. ಈ ವೇಳೆ ವೃದ್ಧೆಯೊಬ್ಬರು ಬಾಲಕನಿಗೆ ಆಶೀರ್ವಾದ ಮಾಡುತ್ತಿರುವುದು ಸಹಾ ಈ ವೀಡಿಯೋದಲ್ಲಿ ರೆಕಾರ್ಡ್ ಆಗಿದ್ದು, ಇಂತಹುದೊಂದು ಸುಂದರ ವೀಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವೀಡಿಯೋ ಶೇರ್ ಮಾಡಿಕೊಂಡ ಅವನೀಶ್ ಅವರು ಅದರ ಶೀರ್ಷಿಕೆಯಲ್ಲಿ, “ನಿನ್ನ ಒಂದು ಸಣ್ಣ ದಯಾಗುಣವು ಕೆಲವರ ಜೀವನವನ್ನು ವಿಶೇಷ ಮಾಡಲಿದೆ” ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಎಂಟು ಸಾವಿರಕ್ಕೂ ಅಧಿಕ ಜನರು ಲೈಕ್ ನೀಡಿದ್ದಾರೆ. ನೂರಾರು ಜನರು ಕಾಮೆಂಟ್ ಗಳನ್ನು ಮಾಡಿದ್ದು, ಅನೇಕರು ಬಾಲಕನ ಒಳ್ಳೆಯ ಗುಣಕ್ಕೆ ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ.

Leave a Reply

Your email address will not be published. Required fields are marked *