ಪಾಠ ಬೋಧಿಸುವ ಗುರುಗಳನ್ನು ಇನ್ಮುಂದೆ ‘ಸರ್’, ‘ಮೇಡಂ’ ಎನ್ನುವ ಹಾಗಿಲ್ಲ: ಈ ಪ್ರಯತ್ನದ ಹಿಂದಿದೆ ಅರ್ಥಪೂರ್ಣ ಕಾರಣ
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ಲಿಂಗಾನುಸಾರವಾಗಿ ಅಂದರೆ ಪುರುಷ ಶಿಕ್ಷಕರನ್ನು ಸರ್ ಎಂದು ಮಹಿಳಾ ಶಿಕ್ಷಕಿಯರನ್ನು ಮೇಡಂ ಎಂದು ಕರೆಯುವುದು ಪ್ರಚಲಿತದಲ್ಲಿದೆ. ಹೀಗೆ ಕರೆಯುವುದು ಬಹಳ ಹಿಂದಿನಿಂದಲೂ ಸಹಾ ನಡೆದು ಬರುತ್ತಿದೆ. ಇಂದಿಗೂ ಮಕ್ಕಳು ಸರ್, ಮೇಡಂ ಎಂದೇ ತಮ್ಮ ಗುರುಗಳನ್ನು ಕರೆಯುವುದು ಸಾಮಾನ್ಯ. ಆದರೆ ಇದೀಗ ಕೇರಳದ ಒಂದು ಶಾಲೆಯಲ್ಲಿ ಇಂತಹ ಒಂದು ಪದ್ಧತಿಗೆ ಪೂರ್ಣ ವಿರಾಮವನ್ನು ಇಡುವ ಪ್ರಯತ್ನಕ್ಕೆ ಶ್ರೀ ಕಾರವನ್ನು ಹಾಕಲಾಗಿದ್ದು, ಈ ವಿಚಾರವೀಗ ಎಲ್ಲರ ಗಮನವನ್ನು ಸೆಳೆದಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಲಶ್ಶೇರಿ ಗ್ರಾಮದ ಸರ್ಕಾರಿ ಅನುದಾನಿತ ಪ್ರಾಥಮಿಕ ಪಾಠಶಾಲೆಯಲ್ಲಿ ಇನ್ನು ಮುಂದೆ ಲಿಂಗಾನುಸಾರ ಗುರುಗಳನ್ನು ಸರ್ ಅಥವಾ ಮೇಡಂ ಎಂದು ಕರೆಯುವ ಪದ್ಧತಿಗೆ ಕೊನೆ ಹಾಡಲಾಗಿದ್ದು, ಇನ್ಮುಂದೆ ಲಿಂಗ ಬೇಧವಿಲ್ಲದೇ ವಿದ್ಯಾರ್ಥಿಗಳು ಎಲ್ಲಾ ಶಿಕ್ಷಕ/ಶಿಕ್ಷಕಿಯರನ್ನು ಟೀಚರ್ ( Teacher ) ಎಂದು ಮಾತ್ರವೇ ಕರೆಯಬೇಕು ಎನ್ನಲಾಗಿದೆ. ಇಂತಹುದೊಂದು ಪ್ರಯತ್ನಕ್ಕೆ ಮುಂದಾದ ಮೊದಲ ಶಾಲೆ ಎನ್ನುವ ಹೆಗ್ಗಳಿಕೆಗೆ ಈ ಸರ್ಕಾರಿ ಶಾಲೆ ಪಾತ್ರವಾಗಿದೆ.
ಸರ್ಕಾರಿ ಕಛೇರಿಗಳಲ್ಲಿ ಸರ್ ಎನ್ನುವ ಪದ್ಧತಿಯನ್ನು ತೊಡೆದುಹಾಕಲು ಈಗಾಗಲೇ ಅಭಿಯಾನವನ್ನು ಆರಂಭಿಸಲಾಗಿದ್ದು, ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತ ಬೋಬನ್ ಮಟ್ಟುಮಂದ ಅವರಿಂದ ಸ್ಪೂರ್ತಿಯನ್ನು ಪಡೆದು ಶಾಲೆಯಲ್ಲಿ ಇಂತಹುದೊಂದು ಹೊಸ ಪ್ರಯತ್ನಕ್ಕೆ ಮುಂದಾಗಿರುವುದಾಗಿ ಮುಖ್ಯೋಪಾಧ್ಯಾಯರಾದ ಹೆಚ್.ವೇಣುಗೋಪಾಲನ್ ಅವರು ಮಾದ್ಯಮಗಳಿಗೆ ತಿಳಿಸಿದ್ದಾರೆ.
ಅಲ್ಲದೇ ತಮ್ಮ ಗ್ರಾಮದಿಂದ ಹದಿನಾಲ್ಕು ಕಿಮೀ ದೂರದಲ್ಲಿರುವ ಮಾತೂರು ಪಂಚಾಯಿತಿಯಲ್ಲಿ ಸಹಾ ಕಳೆದ ವರ್ಷ ಜುಲೈನಲ್ಲಿ ಲಿಂಗ ಸಮಾನತೆಯ ದೃಷ್ಟಿಯಿಂದ ಹುದ್ದೆಯ ಹೆಸರಿನಲ್ಲಿ ಸಂಭೋದಿಸುವುದನ್ನು ಕೈ ಬಿಡಲಾಗಿತ್ತು. ಇವೆಲ್ಲವುಗಳ ಪ್ರೇರಣೆಯ ಫಲವಾಗಿ ಶಾಲೆಯಲ್ಲಿ ಇಂತಹುದೊಂದು ಪ್ರಯತ್ನಕ್ಕೆ ಮುಂದಾಗಿರುವುದಾಗಿಯೂ ಮುಖ್ಯೋಪಾಧ್ಯಾಯರು ಹೇಳಿದ್ದಾರೆ. ಇದಕ್ಕೆ ಮಕ್ಕಳ ಪೋಷಕರು ಸಹಾ ಮೆಚ್ಚುಗೆ ನೀಡಿದ್ದಾರೆನ್ನಲಾಗಿದೆ.