ಪವರ್ ಫುಲ್ ಪಾತ್ರದ ಮೂಲಕ ಕಿರುತೆರೆಗೆ ರೀ ಎಂಟ್ರಿ ಕೊಟ್ಟ ಸಿಲ್ಲಿ ಲಲ್ಲಿ ಲಲಿತಾಂಬ ಖ್ಯಾತಿಯ ನಟಿ ಮಂಜು ಭಾಷಿಣಿ

0 0

ಕನ್ನಡ ಕಿರುತೆರೆಯಲ್ಲಿ ಹಾಸ್ಯ ಧಾರಾವಾಹಿಗಳ ಹೆಸರು ಬಂದಾಗ ಅಲ್ಲಿ ತಪ್ಪದೇ ಇರುವ ಒಂದು ಧಾರಾವಾಹಿಯ ಹೆಸರು ‘ಸಿಲ್ಲಿ ಲಲ್ಲಿ’ ಧಾರಾವಾಹಿ. ಈ ಧಾರಾವಾಹಿಯಲ್ಲಿ ಸಮಾಜಸೇವಕಿ ಲಲಿತಾಂಬ ಪಾತ್ರದ ಮೂಲಕ ಜನರ ಅಪಾರವಾದ ಆದರ, ಅಭಿಮಾನ ಹಾಗೂ ಮೆಚ್ಚುಗೆಯನ್ನು ಪಡೆದುಕೊಂಡ ನಟಿ ಮಂಜುಭಾಷಿಣಿ ಅವರು. ಈ ನಟಿ ಕಳೆದ ಕೆಲವು ವರ್ಷಗಳಿಂದಲೂ ಸಹ ಕಿರುತೆರೆಯಿಂದ ದೂರವೇ ಉಳಿದಿದ್ದರು. ಆದರೆ ಈಗ ಸಣ್ಣ ಬ್ರೇಕ್ ನ ನಂತರ ಹೊಸ ಧಾರಾವಾಹಿಯೊಂದರ ಪ್ರಮುಖ ಪಾತ್ರವೊಂದರ ಮೂಲಕ ಕಿರುತೆರೆಗೆ ಮಂಜುಭಾಷಿಣಿ ಅವರು ಕಮ್ ಬ್ಯಾಕ್ ಮಾಡಿದ್ದಾರೆ.

ನಿರ್ದೇಶಕ ಆರೂರು ಜಗದೀಶ್ ಅವರ ನಿರ್ದೇಶನ ಸಾರಥ್ಯದಲ್ಲಿ ಮೂಡಿ ಬರಲು ಸಜ್ಜಾಗಿದೆ ಹೊಸ ಧಾರವಾಹಿ ‘ಪುಟ್ಟಕ್ಕನ ಮಕ್ಕಳು’. ಕನ್ನಡ ಚಿತ್ರರಂಗದ ಹಿರಿಯ ನಟಿ, ಪ್ರತಿಭಾವಂತ ನಟಿ ಉಮಾಶ್ರೀಯವರು ಮುಖ್ಯಪಾತ್ರವಾದ ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರೋಮೋ ಈಗಾಗಲೇ ಪ್ರಸಾರ ಕಂಡಿದ್ದು, ಅದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಕಿರುತೆರೆ ಪ್ರೇಕ್ಷಕರು ಕಾಮೆಂಟುಗಳನ್ನು ಮಾಡಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಇದೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಒಂದು ಪ್ರಮುಖ ಹಾಗೂ ಪವರ್ ಫುಲ್ ಪಾತ್ರದಲ್ಲಿ ಮಂಜುಭಾಷಿಣಿ ಅವರು ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕನ ತಾಯಿಯಾಗಿ ಒಂದು ಪವರ್ ಫುಲ್ ಪಾತ್ರದಲ್ಲಿ ಮಂಜುಭಾಷಿಣಿ ಯವರು ನಟಿಸುತ್ತಿದ್ದಾರೆ. ತನ್ನ ಪಾತ್ರದ ಕುರಿತಾಗಿ ನಟಿಯು ಮಾಧ್ಯಮವೊಂದರ ಸಂದರ್ಶನದಲ್ಲಿ ಕೆಲವು ಆಸಕ್ತಿಕರ ವಿಷಯಗಳನ್ನು ಮಂಜು ಹಂಚಿಕೊಂಡಿದ್ದಾರೆ.

ಧಾರಾವಾಹಿಯಲ್ಲಿ ತಾನು ನಾಯಕನ ತಾಯಿಯಾಗಿ, ಅವಶ್ಯಕತೆ ಇದ್ದವರಿಗೆ ಸಾಲವನ್ನು ಕೊಡುವ ಗಟ್ಟಿಗಿತ್ತಿ ಹೆಣ್ಣಿನ ಪಾತ್ರವನ್ನು ಮಾಡುತ್ತಿದ್ದು, ಪ್ರಾಮಾಣಿಕ ಕಾರಣವಿದ್ದು, ಜೀವನದಲ್ಲಿ ಏನಾದರೂ ಸಾಧಿಸುವ ಸಂಕಲ್ಪ ಉಳ್ಳವರಿಗೆ ಹಣ ನೀಡುವ ಹಾಗೂ ನ್ಯಾಯದ ಪರವಾಗಿ ನಿಲ್ಲುವ ಮಹಿಳೆಯ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಮಂಜುಭಾಷಿಣಿ ಯವರು ಕಡೆಯದಾಗಿ ನಟಿಸಿದ್ದು 2018ರಲ್ಲಿ ಪ್ರಸಾರ ಕಾಣುತ್ತಿದ್ದ ಧಾರಾವಾಹಿ ರಾಜ ರಾಣಿಯಲ್ಲಿ.

ಅನಂತರ ಅವರು ಕಿರುತೆರೆಯಿಂದ ದೂರ ಉಳಿದಿದ್ದರು. ತಾವು ಹಾಗೂ ತಮ್ಮ ಪತಿ ನಡೆಸುತ್ತಿರುವ ಬಿಸಿನೆಸ್ ವಿಚಾರವಾಗಿ ಬ್ಯುಸಿಯಾಗಿರುವ ಕಾರಣ,ಆ ಕೆಲಸದ ವಿಚಾರವಾಗಿ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುವ ಅವಶ್ಯಕತೆ ಇರುತ್ತಿದ್ದ ಕಾರಣ ನಟನೆಗೆ ಅನೇಕ ಅವಕಾಶಗಳು ಬಂದರೂ ಅದನ್ನು ಒಪ್ಪಿಕೊಳ್ಳಲು ಆಗಲಿಲ್ಲ. ಆದರೆ ಕೊರೊನಾ ನಂತರ ಹೊರಗೆ ಸುತ್ತಾಡಲು ಸಾಧ್ಯವಾಗಲಿಲ್ಲ ಎಂದಿರುವ ಅವರು, ಲಲಿತಾಂಬಾ ಪಾತ್ರಕ್ಕೆ ಜನ ಕೊಟ್ಟಿರುವ ಪ್ರೀತಿಯನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.

Leave A Reply

Your email address will not be published.