2020 ರ ಪದ್ಮಶ್ರೀ ಬಾಲಿವುಡ್ ಮಂದಿಗೆ ಮಾತ್ರ: ದಕ್ಷಿಣದ ದಿಗ್ಗಜರಿಗೆ ಏಕಿಲ್ಲ ಪದ್ಮಶ್ರೀ??

0 0

ಜನವರಿ 26, 2020 ರಂದು ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗಳಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿರುವ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದಾಗ ಪ್ರದರ್ಶನ ಕಲಾ ಕ್ಷೇತ್ರದಲ್ಲೂ ಮೂವರಿಗೆ ನೀಡುವ ಈ ಪ್ರಶಸ್ತಿಯನ್ನು ಬಾಲಿವುಡ್ ಸಿನಿಮಾಗಳ ನಿರ್ಮಾಪಕರಾದ ಕರಣ್ ಜೋಹರ್, ಏಕ್ತಾ ಕಪೂರ್ ಮತ್ತು ನಟಿ ಕಂಗನಾ ರಣಾವತ್ ಅವರಿಗೆ ಘೋಷಣೆ ಮಾಡಲಾಗಿತ್ತು. ಈಗ ನವೆಂಬರ್ 8 ರಂದು ಈ ಪ್ರಶಸ್ತಿ ಪ್ರಧಾನ ಸಮಾರಂಭವು ದೆಹಲಿಯಲ್ಲಿ ನಡೆಯಲಿದ್ದು ಇವರು ಸಮಾರಂಭದಲ್ಲಿ ತಮ್ಮ ಪ್ರಶಸ್ತಿಗಳನ್ನು ಸ್ವೀಕಾರ ಮಾಡಲಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭದ ಕುರಿತಾಗಿ ಘೋಷಣೆಯಾಗಿದೆ.

ಸರ್ಕಾರದ ಈ ಸಮಾರಂಭಕ್ಕೆ ಪ್ರಶಸ್ತಿ ವಿಜೇತರು ಭಾಗಿಯಾಗಲು ಈಗಾಗಲೇ ಸರ್ಕಾರದ ವತಿಯಿಂದ ಇವರಿಗೆ ಆಹ್ವಾನವನ್ನು ನೀಡಲಾಗಿದೆ. ಶೀಘ್ರದಲ್ಲೇ ಕರಣ್ ಜೋಹರ್, ಏಕ್ತಾ ಕಪೂರ್ ಮತ್ತು ಕಂಗನಾ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕಾರ ಮಾಡಲಿದ್ದಾರೆ. ಈ ಸಮಾರಂಭಕ್ಕೆ ಏಕ್ತಾ ಕಪೂರ್ ಅವರ ತಂದೆ ಬಾಲಿವುಡ್ ಸಿನಿಮಾಗಳ ಹಿರಿಯ ನಟ ಜಿತೇಂದ್ರ ಅವರು ಸಹಾ ತೆರಳಲಿದ್ದು, ಮಗಳಿಗೆ ಪ್ರಶಸ್ತಿ ಪಡೆಯುವುದನ್ನು ನೇರವಾಗಿ ನೋಡಲು ಇಚ್ಚಿಸಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ನಟಿ ಕಂಗನಾ ತನಗೆ ಪ್ರಶಸ್ತಿ ದೊರೆತಿರುವುದಕ್ಕೆ ತಾನು ಬಹಳ ವಿನಮ್ರಳಾಗಿದ್ದೇನೆ, ಈ ಗೌರವಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಕನಸು ಕಾಣುವ ಧೈರ್ಯವಿರುವ ಪ್ರತಿ ಮಹಿಳೆಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಇವರಿಗೆ ಪ್ರಶಸ್ತಿ ಬಂದಿರುವುದೇನೋ ಸರಿ, ಆದರೆ ಇದೇ ವೇಳೆ ದಕ್ಷಿಣದ ಸಿನಿಮಾಗಳನ್ನು ಅಲಕ್ಷ್ಯ ಮಾಡಿರುವುದು ಇಲ್ಲಿ ಎದ್ದು ಕಾಣಿಸುತ್ತಿದ್ದು ಅನೇಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ದಶಕಗಳ ಕಾಲದಿಂದ ಸಕ್ರಿಯವಾಗಿರುವ ಅನಂತ್ ನಾಗ್ ಅವರಿಗೆ ಪದ್ಮಶ್ರೀ ನೀಡಬೇಕೆಂದು ಅಸಂಖ್ಯಾತ ಕನ್ನಡಿಗರು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದರು. ಆದರೆ ಸರ್ಕಾರಕ್ಕೆ ಕನ್ನಡ ಸಿನಿಮಾ ರಂಗದ ಸಾಧಕರು ಅಥವಾ ದಕ್ಷಿಣ ಸಿನಿ ರಂಗದ ದಿಗ್ಗಜರು ಪದ್ಮಶ್ರೀ ಪ್ರಶಸ್ತಿಗೆ ಕಾಣದಿರುವುದು ನಿಜಕ್ಕೂ ವಿಷಾದನೀಯ ಎನಿಸುತ್ತದೆ. ಸಿನಿಮಾ ರಂಗವೆಂದರೆ ಕೇವಲ ಬಾಲಿವುಡ್ ಅಲ್ಲ ಎನ್ನುವುದು ಅನೇಕರ ಅಭಿಪ್ರಾಯವಾಗಿದೆ.

Leave A Reply

Your email address will not be published.