ಪಂಚತಾರಾ ಹೊಟೇಲ್ ನಿಂದ ಪಾಕಿಸ್ತಾನ ಕ್ರಿಕೆಟಿಗರನ್ನು ಹೊರದಬ್ಬಿದ ಹೊಟೇಲ್ ಸಿಬ್ಬಂದಿ
ಪಾಕಿಸ್ತಾನದ ಖ್ಯಾತ ಕ್ರಿಕೆಟಗರನ್ನು ಪಂಚತಾರಾ ಹೋಟೇಲೊಂದರಿಂದ ಹೊರ ಹಾಕಿದ ಘಟನೆಯೊಂದು ವರದಿಯಾಗಿದೆ. ಪಾಕ್ ನಲ್ಲಿ ಅಗ್ರ ದೇಶೀಯ ಕ್ರಿಕೆಟ್ ಟೂರ್ನಿಗಳು ನಡೆಯುತ್ತಿವೆ. ಖ್ವೈದ್ ಎ ಅಜಂ ಟ್ರೋಫಿಯ ಫೈನಲಿಸ್ಟ್ ತಂಡಗಳಾಗಿರುವಂತಹ ಪಖ್ತುಂಕ್ವಾ ಮತ್ತು ನಾರ್ತನ್ ತಂಡವು ಒಂದು ಪಂಚತಾರಾ ಹೊಟೇಲ್ ನಲ್ಲಿ ವಾಸ್ತವ್ಯವನ್ನು ಹೂಡಿತ್ತು. ಆದರೆ ಡಿಸೆಂಬರ್ 22 ರ ನಂತರ ಅವರ ವಾಸ್ತವ್ಯಕ್ಕೆ ಯಾವುದೇ ರೀತಿಯ ಬುಕ್ಕಿಂಗ್ ಮಾಡಿರಲಿಲ್ಲ ಎಂದು ಹೇಳಲಾಗಿದ್ದು, ಹೊಟೇಲ್ ಮ್ಯಾನೇಜ್ಮೆಂಟ್ ಎರಡು ತಂಡಗಳನ್ನು ಹೊಟೇಲ್ ನಿಂದ ಹೊರ ಹಾಕಿದೆ.
ಇನ್ನು ಈ ವಿಚಾರವಾಗಿ ಮಾಹಿತಿ ಯನ್ನು ನೀಡಿರುವ ಹೊಟೇಲ್ ಸಿಬ್ಬಂದಿಯು ಪಿಸಿಬಿ ಅಧಿಕಾರಿಗಳು ಕ್ರಿಕೆಟ್ ಆಟಗಾರರಿಗಾಗಿ ಡಿಸೆಂಬರ್ 22 ರವರೆಗೆ ಮಾತ್ರವೇ ಹೊಟೇಲ್ ರೂಮುಗಳನ್ನು ಬುಕ್ ಮಾಡಿದ್ದರು. ಅಲ್ಲದೇ ಅವರು ಡಿಸೆಂಬರ್ 22 ಕ್ಕೆ ಬುಕ್ಕಿಂಗ್ ದೃಢೀಕರಣ ನಡೆಸಲಾಗುವುದು ಎಂದು ಸಹಾ ಹೇಳಿದ್ದರು ಎನ್ನಲಾಗಿದ್ದು, ನಿರ್ದಿಷ್ಟ ದಿನಾಂಕ ಮುಗಿದರೂ ಕೂಡಾ ಪಿಸಿಬಿ ಅಧಿಕಾರಿಗಳ ಕಡೆಯಿಂದ ಯಾವುದೇ ರೀತಿಯ ಮಾಹಿತಿಯಾಗಲೀ, ಕೊಠಡಿಗಳನ್ನು ದೃಢೀಕರಣ ಮಾಡುವ ಕುರಿತಾಗಿ ಸಂದೇಶ ಬಂದಿಲ್ಲ.
ಇಂತಹ ಒಂದು ಸನ್ನಿವೇಶದಲ್ಲಿ ಹೊಟೇಲ್ ನಲ್ಲಿ ತಂಗಿದ್ದ ಎರಡೂ ತಂಡದ ಆಟಗಾರರಿಗೆ ಹೊಟೇಲ್ ಮ್ಯಾನೇಜ್ಮೆಂಟ್ ರೂಮ್ ಗಳನ್ನು ಖಾಲಿ ಮಾಡುವಂತೆ ಸೂಚನೆಯನ್ನು ನೀಡಿತ್ತು ಎನ್ನಲಾಗಿದ್ದು, ಆದರೆ ಅವರು ಹೊಟೇಲ್ ಆಡಳಿತದ ಸೂಚನೆಯನ್ನು ಪಾಲಿಸದೇ ಹೊಟೇಲ್ ನಲ್ಲೇ ತಂಗಲು ಮುಂದಾಗಿದ್ದರಿಂದ ಬೇರೆ ದಾರಿಯಿಲ್ಲದೇ ಅವರನ್ನು ಹೊಟೇಲ್ ನಿಂದ ಹೊರ ಹಾಕಲೇಬೇಕಾಯಿತು ಎಂದು ಹೊಟೇಲ್ ಆಡಳಿತ ಮಂಡಳಿಯು ಹೇಳಿದೆ.
ಪಾಕ್ ನ ಕ್ರಿಕೆಟ್ ಮಂಡಳಿಯ ನಿರ್ಲಕ್ಷ್ಯದ ಕಾರಣ ಕ್ರಿಕೆಟ್ ಆಟಗಾರರು ಬೀದಿಗೆ ಬರುವಂತಾಗಿದೆ. ಇದರಲ್ಲಿ ಹೊಟೇಲ್ ಸಿಬ್ಬಂದಿಯ ಯಾವುದೇ ತಪ್ಪಿಲ್ಲ ಅವರು ತಮ್ಮ ಕೆಲಸವನ್ನು ಮಾತ್ರವೇ ಮಾಡಿದ್ದಾರೆ ಎಂದು ಹೊಟೇಲ್ ನ ಆಡಳಿತವು ಸಮರ್ಥನೆಯನ್ನು ನೀಡಿದೆ. ಇನ್ನೂ ವಿಚಿತ್ರ ಏನೆಂದರೆ ಇದೇ ಹೊಟೇಲ್ ನಲ್ಲಿ ಪಾಕ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಕೂಡಾ ಉಳಿದುಕೊಂಡಿದ್ದರು ಎನ್ನಲಾಗಿದೆ.