ನಿಯತ್ತು ಅಂದ್ರೆ ಇದು: 25 ವರ್ಷ ಹಿಂದಿನ ಸಾಲ ವಾಪಸ್ಸು ನೀಡಲು 75 ವಯಸ್ಸಿನ ವ್ಯಕ್ತಿ ಮಾಡಿದ್ದೇನು?? ರಿಯಲಿ ಗ್ರೇಟ್ !!

Entertainment Featured-Articles News Wonder

ಬಹಳಷ್ಟು ಜನರು ಸಾಲವನ್ನು ಪಡೆಯುವಾಗ ತೋರಿಸುವ ಆಸಕ್ತಿಯನ್ನು ಹಾಗೂ ಶ್ರದ್ಧೆಯನ್ನು ಸಾಲ ತೀರಿಸುವಾಗ ತೋರಿಸುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಸಾಲ ಕೊಟ್ಟವರ ಮೇಲೆ ಜಗಳಕ್ಕೆ ನಿಲ್ಲುವುದುಂಟು. ಕೆಲವೊಂದು ಸಂದರ್ಭಗಳಲ್ಲಿ ಸಾಲ ಕೊಟ್ಟವರು ದೌ ರ್ಜ ನ್ಯ ಮಾಡಿದರೆ ಇನ್ನೂ ಕೆಲವು ಸಂದರ್ಭಗಳಲ್ಲಿ ಸಾಲ ಪಡೆದವರು ಅದನ್ನು ತೀರಿಸುವ ಸಾಮರ್ಥ್ಯವಿಲ್ಲದೇ, ಅಗತ್ಯಕ್ಕೆ ಮೀರಿದ ಸಾಲ ಮಾಡಿ, ಅದರಿಂದ ತಪ್ಪಿಸಿಕೊಳ್ಳಲು ನೂರು ಕಾರಣಗಳನ್ನು ಹೇಳುವರು. ಯಾವುದೇ ಕಾರಣವೂ ಕೈಗೂಡಲಿಲ್ಲ ಎಂದಾಗ ಬೇರೆ ಹೊಸ ದಾರಿಯನ್ನು ಹುಡುಕುವರು.

ಆದರೆ ಇಂತಹವರ ಮಧ್ಯೆ ಕೂಡಾ ಪ್ರಾಮಾಣಿಕರು ಇಂದಿಗೂ ಇದ್ದಾರೆ. ಪಡೆದ ಸಾಲವನ್ನು ಮರೆಯದೆ ಮರಳಿಸುತ್ತಾರೆ. ಸೂರತ್ ನ ಟೆಕ್ಸ್ ಟೈಲ್ ಮಾರ್ಕೆಟ್ ನಲ್ಲಿ ಒಂದು ಕಡೆ ವ್ಯಾಪಾರಿಗಳು ಸಾಲ ನೀಡಿದ ನಂತರ ತಮ್ಮ ಸ್ವಂತ ಹಣಕ್ಕಾಗಿಯೇ ಗ್ರಾಹಕರ ಅಂಗಡಿಗಳು ಹಾಗೂ ಕಚೇರಿಗಳಿಗೆ ಸುತ್ತುತ್ತಲೇ ಇರುತ್ತಾರೆ. ನೀಡಿದ ಸಾಲದ ಹಣವನ್ನು ಮರಳಿ ಪಡೆದುಕೊಳ್ಳಲು ನಿರಂತರವಾಗಿ ಫೋನಿನ ಮೂಲಕ ಗ್ರಾಹಕರ ಜೊತೆ ಸಂಪರ್ಕದಲ್ಲಿರುತ್ತಾರೆ. ಆದರೆ ಸಾಲ ವಸೂಲಾತಿ ಮಾತ್ರ ಸುಲಭವಾಗಿ ಆಗುವುದಿಲ್ಲ. ಆದರೆ ಇನ್ನೊಂದು ಕಡೆ ಇಪ್ಪತ್ತೈದು ವರ್ಷಗಳ ಹಿಂದಿನ ಸಾಲವನ್ನು ಮರುಪಾವತಿ ಮಾಡಲು ತಂದೆ ಮಗ ಇಬ್ಬರೂ ಸೂರತ್ ನ ಜವಳಿ ಮಾರುಕಟ್ಟೆಗೆ ಬಂದ ಘಟನೆ ವರದಿಯಾಗಿದೆ.

ಸೂರತ್ ನ ಜವಳಿ ಮಾರುಕಟ್ಟೆಯಲ್ಲಿ ಪ್ರತಿದಿನ ಲಕ್ಷಗಳು, ಕೋಟಿಗಳ ಮೊತ್ತದಲ್ಲಿ ಹಣ ವಂಚನೆಗಳು ನಡೆಯುವ ಪ್ರಕರಣಗಳು ದಾಖಲಾಗುತ್ತಲೇ ಇರುತ್ತದೆ. ಇಂತಹ ಮಾರುಕಟ್ಟೆಗೆ ಆಂಧ್ರಪ್ರದೇಶದ ವಿಜಯವಾಡದ ಜವಳಿ ಮಾರುಕಟ್ಟೆಯ ವ್ಯಾಪಾರಿಯೊಬ್ಬರು ಬರೋಬ್ಬರಿ 25 ವರ್ಷಗಳ ಹಿಂದಿನ ಸಾಲವನ್ನು ವಾಪಸ್ಸು ನೀಡುವ ಸಲುವಾಗಿ ತಮ್ಮ ಮಗನ ಜೊತೆಗೆ ಬಂದಿದ್ದಾರೆ. ಸೂರತ್ ಗೆ ಬಂದ ತಂದೆ-ಮಗ ಇಬ್ಬರೂ ಒಬ್ಬರು, ಇಬ್ಬರಲ್ಲ ಬರೋಬ್ಬರಿ ಆರು ಜನ ಜವಳಿ ವ್ಯಾಪಾರಿಗಳಿಗೆ ಸಾಲ ಮರುಪಾವತಿ ಮಾಡಿದ್ದಾರೆ.

ಸಾಲ ಕೊಟ್ಟವರೇ ಆ ವಿಷಯವನ್ನು ಮರೆತು ಹೋಗಿದ್ದ ದಿನಗಳಲ್ಲಿ ಒಟ್ಟು 12 ಲಕ್ಷ ರೂಪಾಯಿಗಳ ಸಾಲವನ್ನು ವಾಪಸು ನೀಡುವ ಮೂಲಕ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ ಈ ವ್ಯಕ್ತಿ. ಮಾಹಿತಿಗಳ ಪ್ರಕಾರ ವಿಜಯವಾಡದ ಜವಳಿ ಮಾರುಕಟ್ಟೆಯ ವ್ಯಾಪಾರಿ ಚಂದ್ರಶೇಖರ್ ರಾವ್ ಅವರು 1997 ರಲ್ಲಿ ಸೂರತ್ ನ ಜವಳಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಂದ ಬಟ್ಟೆಯನ್ನು ಸಾಲವಾಗಿ ಪಡೆದಿದ್ದರು. 1998 ರಲ್ಲಿ ಅವರಿಗೆ ವ್ಯಾಪಾರದಲ್ಲಿ ದೊಡ್ಡ ನಷ್ಟ ಎದುರಾದ ಕಾರಣ, ಚಂದ್ರಶೇಖರ್ ರಾವ್ ಅವರು ತಮ್ಮ ಅಂಗಡಿಯನ್ನು ಮುಚ್ಚಿ ಹೊರಟು ಹೋಗಿದ್ದರು.

ಅವರಿಗೆ ಸಾಲ ನೀಡಿದವರು ಕೂಡ ಆ ಸಾಲವನ್ನು ಮರೆತಿದ್ದರು. ಏಕೆಂದರೆ ಈಗಾಗಲೇ ಇಪ್ಪತ್ತೈದು ವರ್ಷಗಳು ಕಳೆದಿದ್ದವು. ಕಳೆದ ಬುಧವಾರದಂದು ಚಂದ್ರಶೇಖರ್ ರವರು ಮಗನೊಂದಿಗೆ ಸೂರತ್ ಗೆ ಬಂದು, ತಾನು ಸಾಲ ಪಡೆದಿದ್ದ ವ್ಯಾಪಾರಿಗಳಿಗೆ ಹಣವನ್ನು ಹಿಂತಿರುಗಿಸಿದ್ದಾರೆ. ವಿಚಿತ್ರ ಏನೆಂದರೆ ಅವರಿಗೆ ಸಾಲ ಕೊಟ್ಟ ವ್ಯಾಪಾರಿಗಳಿಗೆ ಎಷ್ಟು ಹಣವನ್ನು ಸಾಲವಾಗಿ ನೀಡಿದ್ದೆವು ಎನ್ನುವುದು ನೆನಪಿರಲಿಲ್ಲ. ಚಂದ್ರಶೇಖರ್ ರವರು ಹೇಳಿದ ಮೊತ್ತವನ್ನೇ ಸರಿ ಎಂದು ಪರಿಗಣಿಸಿ ಅವರಿಂದ ಹಣವನ್ನು ಸ್ವೀಕರಿಸಿದ್ದಾರೆ. ಒಬ್ಬ ವ್ಯಾಪಾರಿಯಂತೂ ಈಗಾಗಲೇ ಮೃತರಾಗಿದ್ದಾರೆ ಎನ್ನಲಾಗಿದೆ.

ಅಭಿನಂದನ್ ಮಾರ್ಕೆಟ್ ನ ವ್ಯಾಪಾರಿ ಓತ್ಮಲ್ ಜೈನ್ ಅವರ ಬಳಿ ಮಾತಾಡುತ್ತಾ ಚಂದ್ರಶೇಖರ್ ರಾವ್ ಅವರು, ತನಗೆ ವ್ಯಾಪಾರದಲ್ಲಿ ನಷ್ಟವಾದ ನಂತರ ಕೆಲವು ದಿನಗಳ ಕಾಲ ಅಂಗಡಿ ಮುಚ್ಚಿದ್ದೆ. ಆನಂತರ ಬನಾರಸ್ ಮತ್ತು ಬೆಂಗಳೂರು ರೇಷ್ಮೆಯನ್ನು ಖರೀದಿ ಮಾಡಿ ವ್ಯಾಪಾರ ಆರಂಭಿಸಿದೆ. ಮತ್ತೆ ವ್ಯಾಪಾರದಲ್ಲಿ ಅಭಿವೃದ್ಧಿ ಕಂಡೆ ಎಂದು ಹೇಳಿದ್ದು, 2 ವರ್ಷಗಳ ಹಿಂದೆಯೇ ಅವರು ಸಾಲ ಮರು ಪಾವತಿ ಮಾಡಲು ಯೋಚನೆ ಮಾಡಿದರಾದರೂ ಕೊರೋನಾ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ ಎನ್ನುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಚಂದ್ರಶೇಖರ್ ಅವರ ಪ್ರಾಮಾಣಿಕತೆಯ ವಿಷಯ ಸುದ್ದಿ ಆದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಜನರು ಅವರ ಈ ಕಾರ್ಯವನ್ನು ಮೆಚ್ಚಿಕೊಂಡು ಶ್ಲಾಘಿಸುತ್ತಿದ್ದಾರೆ. 75 ರ ಇಳಿ ವಯಸ್ಸಿನಲ್ಲಿ 25 ವರ್ಷಗಳ ಹಿಂದಿನ ಸಾಲವನ್ನು ಮರು ಪಾವತಿ ಮಾಡಲು ಬಂದ ಚಂದ್ರಶೇಖರ್ ರಾವ್ ಅವರ ಪ್ರಾಮಾಣಿಕತೆ ಖಂಡಿತ ಒಂದು ಸಂದೇಶವನ್ನು ನೀಡುತ್ತದೆ. ಇಂತಹವರು ಜಗತ್ತಿನಲ್ಲಿ ಒಳ್ಳೆಯತನ ಇನ್ನೂ ಉಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ.

Leave a Reply

Your email address will not be published.