ನಾನು ಮೊಘಲರ ಸೊಸೆ, ಕೆಂಪು ಕೋಟೆ ನನಗೆ ಸೇರಬೇಕು: ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ
ಭಾರತದ ಪ್ರಾಚೀನ ನಿರ್ಮಾಣಗಳಲ್ಲಿ ಮೊಘಲರ ಕಾಲದಲ್ಲಿ ನಿರ್ಮಾಣವಾಗಿ ಪ್ರಸ್ತುತ ಕೂಡಾ ದೇಶದ ಪ್ರಮುಖ ಐತಿಹಾಸಿಕ ಕಟ್ಟಡ ಎನಿಸಿಕೊಂಡಿದೆ ಕೆಂಪು ಕೋಟೆ. ಈಗ ಕೆಂಪು ಕೋಟೆ ಭಾರತ ಸರ್ಕಾರದ ಆಸ್ತಿಯಾಗಿದೆ. ಆದರೆ ಕೆಂಪು ಕೋಟೆ ನನ್ನದು, ತಾನು ಮೊಘಲರ ಸೊಸೆ ಎಂದು ಹೇಳಿ ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲನ್ನು ಏರಿರುವ ವಿಚಿತ್ರ ಘಟನೆಯೊಂದು ನಡೆದಿದೆ. ಕೊಳಗೇರಿಯಲ್ಲಿ ವಾಸಿಸುವ ಮಹಿಳೆ ಕೆಂಪು ಕೋಟೆ ನನ್ನದು ಎನ್ನುವ ಮಾತನ್ನು ಹೇಳುವ ಮೂಲಕ ಈಗ ಸುದ್ದಿಯಾಗಿದ್ದಾರೆ ಹಾಗೂ ಕೋರ್ಟ್ ಆಕೆಯ ಅರ್ಜಿಯನ್ನು ವಜಾ ಗೊಳಿಸಿದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಹೌರಾದ ಕೊಳಗೇರಿಯ ನಿವಾಸಿಯಾಗಿರುವ ಸುಲ್ತಾನಾ ಬೇಗಂ ಎನ್ನುವ ಹೆಸರಿನ ಮಹಿಳೆ ಕೆಂಪುಕೋಟೆ ನನ್ನದು, ಅದನ್ನು ಭಾರತ ಸರ್ಕಾರವು ಅಕ್ರಮವಾಗಿ ಆಕ್ರಮಿಸಿಕೊಂಡಿದೆ ಎಂದು ದೆಹಲಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಮಹಿಳೆ ಸಲ್ಲಿಸಿದ್ದ ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡ ಹೈಕೋರ್ಟ್ ಸುಲ್ತಾನಾ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೇ ಆಕೆಯನ್ನು ಇಷ್ಟು ದಿನ ಎಲ್ಲಿದ್ದಿರಿ ಎಂದು ಕೋರ್ಟ್ ಪ್ರಶ್ನೆ ಮಾಡಿದೆ.
ಕೆಂಪುಕೋಟೆ ನನ್ನದು ಎಂದು ಅರ್ಜಿಯನ್ನು ಸಲ್ಲಿಸಿರುವ ಸುಲ್ತಾನಾ ಬೇಗಂ, ತನ್ನನ್ನು ತಾನು ಮೊಘಲರ ಅರಸ ಬಹದ್ದೂರ್ ಶಾ ಜಾಫರ್ ಅವರ ಮೊಮ್ಮಗ ಮಿರ್ಜಾ ಮಹಮ್ಮದ್ ಬೇಡರ್ ಬಕ್ತ್ ನ ವಿಧವೆ ಎಂದು ಹೇಳಿಕೊಂಡಿದ್ದಾರೆ. 68 ವರ್ಷ ವಯಸ್ಸಿನ ಸುಲ್ತಾನ ಬೇಗಂ ತಮ್ಮ ಅರ್ಜಿಯಲ್ಲಿ ಸರ್ಕಾರವು ಅ ಕ್ರ ಮವಾಗಿ ಕೆಂಪು ಕೋಟೆಯನ್ನು ವಶಪಡಿಸಿಕೊಂಡಿರುವುದರಿಂದ ತನಗೆ ಪರಿಹಾರವನ್ನು ನೀಡಬೇಕೆಂದು ಕೋರಿದ್ದಾರೆ.
ಅಲ್ಲದೇ ಅರ್ಜಿಯಲ್ಲಿ 1960 ರಲ್ಲಿ ಬೇಡರ್ ಬಕ್ತ್ ನನ್ನು ಬಹದ್ದೂರ್ ಶಾ II ನ ಉತ್ತರಾಧಿಕಾರಿಯಾಗಿ ಭಾರತ ಸರ್ಕಾರ ಗುರುತಿಸಿದೆ ಎಂದು ಹೇಳಲಾಗಿದೆ. ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರಾದ ರೇಖಾ ಪಲ್ಲಿ ಈ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಿಲೇರಲು ಇಷ್ಟು ತಡವಾಗಿದ್ದು ಹೇಗೆ ಎಂಬುದರ ವಿವರ ನೀಡಬೇಕೆಂದು ಸುಲ್ತಾನಾ ಬೇಗಂ ಪರ ವಕೀಲರನ್ನು ಕೇಳಿದ್ದಾರೆ. ಅಲ್ಲದೇ ಅರ್ಜಿಯ ಪ್ರಾರಂಭದಲ್ಲೇ ಈಸ್ಟ್ ಇಂಡಿಯಾ ಕಂಪನಿಯಿಂದ ಅನ್ಯಾಯವಾಗಿದೆ ಎಂದು ನಮೂದಿಸಿರುವುದರಿಂದ ಕೆಂಪುಕೋಟೆಗೆ ನೀವು ಮಾಲೀಕರಾಗುವಿರೋ, ಇಲ್ಲವೋ ಎನ್ನುವುದನ್ನು ಮರೆತುಬಿಡಿ ಎಂದು ಹೇಳಿದ್ದಾರೆ.