ನಾನು ಮಹಿಳಾ ಪಕ್ಷಪಾತಿಯಾಗಲು ಆಕೆಯೇ ಕಾರಣ: ಮೆಗಾಸ್ಟಾರ್ ಚಿರಂಜೀವಿ ಮನದ ಮಾತು

Entertainment Featured-Articles News

ಇಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ.‌ ವಿಶ್ವದಾದ್ಯಂತ ಮಹಿಳೆಯರನ್ನು ಗೌರವಿಸುವ ವಿಶೇಷವಾದ ದಿನ ಇದಾಗಿದೆ. ತನ್ನ ಜೀವನದಲ್ಲಿ ವೈವಿದ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಾ ತನ್ನ ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನೂ ಧಾರೆಯೆರೆಯುವ ಸಾಧಕಿಯಾದ ಮಹಿಳೆಗೆ ಮನದಾಳದಿಂದ ಗೌರವ ನೀಡುವ ದಿನ ಇದಾಗಿದೆ. ಈ ವಿಶೇಷವಾದ ದಿನದಂದು ಸಿನಿಮಾ ಸೆಲೆಬ್ರಿಟಿಗಳು ಸಹಾ ತಮ್ಮ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಮಹಿಳೆಯರ ಬಗ್ಗೆ ತಮ್ಮ ಮಾತನ್ನು ಹಂಚಿಕೊಂಡು ಗೌರವವನ್ನು ಸೂಚಿಸುತ್ತಿದ್ದಾರೆ.

ದಕ್ಷಿಣ ಸಿನಿಮಾ ರಂಗದಲ್ಲಿ ಮೆಗಾಸ್ಟಾರ್ ಎನ್ನುವ ಬಿರುದು ಪಡೆದಿರುವ ನಟ ಚಿರಂಜೀವಿ ಅವರು ಮಹಿಳಾ ದಿನಾಚರಣೆಯ ದಿನ ತಮ್ಮ ಪತ್ನಿ ಸುರೇಖ ಅವರ ಬಗ್ಗೆ ತಮ್ಮ‌ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಇಂದು ಸ್ಥಿರವಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ಕಾರಣ ಪತ್ನಿ ಸುರೇಖ ನೀಡಿದ ಸಹಕಾರವೇ ಕಾರಣ. ಮನೆಯ ಜವಾಬ್ದಾರಿ ಗಳನ್ನೆಲ್ಲಾ ಆಕೆ ತನ್ನ ಹೆಗಲಿಗೆ ಏರಿಸಿಕೊಂಡು, ನಿಭಾಯಿಸಿದ್ದರಿಂದಲೇ ನಾನು ನನ್ನ ಸಂಪೂರ್ಣ ಗಮನವನ್ನು ಸಿನಿಮಾದ ಕಡೆ ನೀಡಲು ಸಾಧ್ಯವಾಯಿತು.

ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಚಾರಿಟಬಲ್ ಟ್ರಸ್ಟ್ ಕಡೆಯಿಂದ ಒಂದು ವಿಶೇಷ ಕಾರ್ಯಕ್ರಮವನ್ನು ನಡೆಸಿದ್ದು, ಅವರ ಪತ್ನಿ ಸುರೇಖ ಹಾಗೂ ಅವರ ಸಹೋದರಿ ಇದರಲ್ಲಿ ಭಾಗಿಯಾಗಿ, ಸಿನಿರಂಗಕ್ಕೆ ಸಂಬಂಧಿಸಿದ ಮಹಿಳಾ ಕಾರ್ಮಿಕರಿಗೆ ಸೀರೆಗಳನ್ನು ಹಂಚುವ ಮೂಲಕ ಅವರನ್ನು ಸತ್ಕರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ತಮ್ಮ ತಾಯಿ ಅಂಜನಾ ದೇವಿ ಮತ್ತು ಪತ್ನಿ ಸುರೇಖ ಅವರನ್ನು ಪ್ರಶಂಶಿಸಿದ್ದಾರೆ.

ಒಂದು ಕುಟುಂಬದಲ್ಲಿ ಮಹಿಳೆಗೆ ಬಹಳಷ್ಟು ಜವಾಬ್ದಾರಿಗಳಿರುತ್ತವೆ. ನಾನು ಚಿಕ್ಕವನಾಗಿದ್ದಾಗ ನನ್ನ ತಾಯಿ ಬಹಳ ಕಷ್ಟಪಟ್ಟಿದ್ದಾರೆ. ಆಕೆಯ ಕಾರಣದಿಂದಲೇ ನಾನು ಮಹಿಳಾ ಪಕ್ಷಪಾತಿಯಾಗಿ ಬದಲಾದೆ. ನಂತರ ನಾನು ಸಿನಿಮಾ ರಂಗದಲ್ಲಿ ಸಕ್ಸಸ್ ಫುಲ್ ಹೀರೋ ಆಗಿ ನಿಲ್ಲಲು ಪ್ರಮುಖ ಕಾರಣ ನನ್ನ ಪತ್ನಿ ಸುರೇಖ. ಮನೆಯಲ್ಲಿ ನನ್ನ ಜವಾಬ್ದಾರಿಗಳನ್ನೆಲ್ಲಾ ಆಕೆ ತೆಗೆದುಕೊಂಡಳು. ಅದು ನಾನು ಸಿನಿಮಾಗಳ ಕಡೆಗೆ ಹೆಚ್ಚು ಗಮನ ನೀಡಲು ನೆರವಾಯಿತು. ಪ್ರತಿ ಪುರುಷನ ವಿಜಯದ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎನ್ನುವುದಕ್ಕೆ ಸುರೇಖ ಮತ್ತೊಂದು ಉದಾಹರಣೆ ಎಂದಿದ್ದಾರೆ ಮೆಗಾಸ್ಟಾರ್.

ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತರಾಗದೇ ಇಂದು ಅವರು ಅಂತರಿಕ್ಷದವರೆಗೆ ಹೋಗಿದ್ದಾರೆ. ಒಲಂಪಿಕ್ಸ್ ನಲ್ಲಿ ಸಾಧನೆ ಮಾಡಿದ್ದಾರೆ. ಮಹಿಳೆಯರ ಸಾಧನೆಗೆ ಎಲ್ಲರೂ ನೆರವನ್ನು ನೀಡಬೇಕಾಗಿದೆ. ಪ್ರಪಂಚವು ಹೆಮ್ಮೆ ಪಡುವಂತಹ ಸ್ಥಾನದಲ್ಲಿ ಮಹಿಳೆಯರು ಇರಬೇಕು. ಮನೆಗಳಲ್ಲಿ ತಾಯಿ, ಪತ್ನಿ, ಸಹೋದರಿಯರು ಎಲ್ಲರಿಗೂ ನಾವು ಸದಾ ನಮ್ಮ ನೆರವನ್ನು ನೀಡಬೇಕು ಎನ್ನುವ ಮಾತುಗಳನ್ನು ಚಿರಂಜೀವಿ ಹೇಳಿದ್ದಾರೆ.

Leave a Reply

Your email address will not be published.