ಇಂದಿನ ಯುವ ಜನತೆಗೆ ಯಾವುದೇ ಜವಾಬ್ದಾರಿಗಳು ಇಲ್ಲದೇ, ಬೇಕಾಬಿಟ್ಟಿಯಾಗಿ ಸುತ್ತುತ್ತಾ, ಅಪ್ಪ ಅಮ್ಮ ಕಷ್ಟ ಪಟ್ಟು ದುಡಿದು ನೀಡುವ ಹಣವನ್ನು ಖರ್ಚು ಮಾಡುತ್ತಾ ಶೋಕಿಯ ಜೀವನವನ್ನು ನಡೆಸುವವರೇ ಹೆಚ್ಚು ಎಂದು ಬಹಳಷ್ಟು ಜನರು ಅದರಲ್ಲೂ ವಿಶೇಷವಾಗಿ ಹಿರಿಯರು ಹೇಳುವುದನ್ನು ನಾವೆಲ್ಲಾ ಕೇಳಿದ್ದೇವೆ. ಕೆಲವೊಂದು ಘಟನೆಗಳನ್ನು ನೋಡಿದಾಗ ಹಾಗೂ ಕೆಲವರ ವರ್ತನೆಯನ್ನು ನೋಡಿದಾಗ ಈ ಮಾತುಗಳು ನಿಜ ಕೂಡಾ ಎನಿಸುತ್ತದೆ. ಯಾವುದೇ ಗುರಿ, ಧ್ಯೇಯಗಳು ಇಲ್ಲದೇ ಸುತ್ತುವುದು, ಹಿರಿಯರೆನ್ನುವ ಗೌರವ ಇಲ್ಲದಂತೆ ವರ್ತಿಸುವುದನ್ನು ನಾವು ನೋಡುತ್ತೇವೆ.
ಆದರೆ ಇಂತಹವರ ಮಧ್ಯೆಯೇ ವಿರಳ ಎಂಬಂತೆ ಕೆಲವು ಯುವಜನರು ತಮ್ಮ ಜೀವನದ ಬಗ್ಗೆ ಗೌರವ, ಶ್ರಮದ ಬಗ್ಗೆ ನಂಬಿಕೆ ಇಟ್ಟು, ಸ್ವಾವಲಂಬಿ ಜೀವನವನ್ನು ನಡೆಸಲು,ತಮ್ಮ ಕಷ್ಟಗಳನ್ನು ಮೀರಿ ಜೀವನವನ್ನು ನಡೆಸಲು ಸಜ್ಜಾಗುತ್ತಾರೆ. ಅಂತಹವರನ್ನು ನೋಡಿದಾಗ ಅನೇಕರಿಗೆ ಸಂತೋಷ ಆಗುವುದು ಮಾತ್ರವೇ ಅಲ್ಲದೇ, ಇವರು ಅನೇಕರಿಗೆ ಸ್ಪೂರ್ತಿ ಕೂಡಾ ಆಗುತ್ತಾರೆ. ಈಗ ಅಂತಹುದೇ ಶ್ರಮ ಜೀವಿಗಳಾದ ಯುವ ಜನರ ಕುರಿತಾಗಿ ನಟ ಶಂಕರ್ ಅಶ್ವಥ್ ಅವರು ಒಂದು ಆಸಕ್ತಿಕರ ಪೋಸ್ಟ್ ಹಂಚಿಕೊಂಡಿದ್ದಾರೆ.
ಶಂಕರ್ ಅಶ್ವಥ್ ಅವರು ತಮ್ಮ ಪೋಸ್ಟ್ ನಲ್ಲಿ, ಮೆಚ್ಚಿದ ನವ ಯುವಕರನ್ನು ಶಭಾಷ್!! ಎಷ್ಟೋ ಜನಕ್ಕೆ ಮಾದರಿಯಾದರು ಈ ಯುವಕರು! ಈಗಿನ ಕಾಲದಲ್ಲಿ ಮಕ್ಕಳು ದಡ ಸೇರುವವರೆಗೆ ತಂದೆ ತಾಯಿಯರೇ ಎಲ್ಲಾ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕಾಗುತ್ತೆ. ಅದಕ್ಕೆ ಅವರ ಏನೆಲ್ಲಾ ಹೇಗೆಲ್ಲಾ ಕಷ್ಟ ಪಡಬೇಕಾಗುತ್ತದೆ. ಎಷ್ಟೋ ಮಕ್ಕಳು ಪಿತೃಗಳು ಸರಿಯಾಗಿ ತಮ್ಮನ್ನ ಸಾಕಲಿಲ್ಲ ಎಂದು ನಿಂದಿಸುವುದೂ ಉಂಟು, ಅಂತಹದರಲ್ಲಿ ಈ ಯುವಕರು ಇಂಜನಿಯರಿಂಗ್ ಓದುತ್ತಾ ಬಿಡವು ಸಿಕ್ಕಾಗ ಸಮಾರಂಭಗಳಿಗೆ ಅಡುಗೆ ಮಾಡಿ ಬಡೆಸುತ್ತಾರೆ.
ಅದರಿಂದ ಸಂಪಾದನೆ ಮಾಡಿದ ಹಣ ತಮ್ಮ ವ್ಯಾಸಾಂಗಕ್ಕೆ ತಮ್ಮ ಸ್ವಂತ ಖರ್ಚಿಗೆ ಉಪಯೋಗಿಸುತ್ತಾರೆ. ಎಂತಹ ಶ್ರೇಷ್ಠವಾದ ಯೋಚನೆ ಉತ್ತಮವಾದ ಯೋಜನೆ, ನಿಮ್ಮೆಲ್ಲರಿಗೂ ನಾನು ಕೈ ಎತ್ತಿ ಮುಗಿಯುವೆ, ಇಂದು ಉಬರ್ ಚಾಲಕನಾಗಿ ನಿಮ್ಮ ಕಾಲೇಜ್ ಹಾಸ್ಟಲ್ ನಿಂದ ಚೌಲಟ್ರಿಗೆ ನಿಮ್ಮ ಸೇವೆ ಮಾಡಿದ್ದು ನನ್ನ ಭಾಗ್ಯವೇ ಸರಿ ಎಂದು ಬರೆದುಕೊಂಡು, ಯುವಕರ ಕಾರ್ಯವನ್ನು ಮೆಚ್ಚಿಕೊಂಡಿದ್ದು ಮಾತ್ರವೇ ಅಲ್ಲದೇ ಅವರ ಸೇವೆಯಲ್ಲಿ ಭಾಗಿಯಾಗಿದ್ದಕ್ಕೆ ಭಾಗ್ಯ ಎಂದು ಎಂದು ಹೇಳಿದ್ದಾರೆ.