ನನ್ನ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ಥ್ಯಾಂಕ್ಸ್: ನಟಿ ಸಾಯಿ ಪಲ್ಲವಿಗೆ ಧನ್ಯವಾದ ಹೇಳುತ್ತಲೇ ತನ್ನಾಸೆ ತಿಳಿಸಿದ ಮೆಗಾಸ್ಟಾರ್

Written by Soma Shekar

Published on:

---Join Our Channel---

ತೆಲುಗು ಚಿತ್ರರಂಗದಲ್ಲಿ ನಟಿ ಸಾಯಿ ಪಲ್ಲವಿ ಒಂದು ವಿಶೇಷವಾದ ಸ್ಥಾನವನ್ನು ಪಡೆದುಕೊಂಡು, ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಸಾಯಿಪಲ್ಲವಿ ಅವರು ಸ್ಟಾರ್ ನಟ ನಾಗಚೈತನ್ಯ ಜೊತೆಗೆ ನಾಯಕಿಯಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ಸಿನಿಮಾ ಲವ್ ಸ್ಟೋರಿ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಚಿತ್ರತಂಡವು ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ವೇಳೆ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರು ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಸಹಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸಾಯಿ ಪಲ್ಲವಿ ಅವರ ಸಂಭಾಷಣೆಯು ಬಹಳಷ್ಟು ಗಮನ ಸೆಳೆದು, ಸುದ್ದಿಯಾಗುತ್ತಿದೆ. ಕಾರ್ಯಕ್ರಮದ ವೇದಿಕೆಯ ಮೇಲೆ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಕುಟುಂಬದ ಕುಡಿಯಾದ ವರುಣ್ ತೇಜ್ ಜೊತೆಗೆ ಸಾಯಿ ಪಲ್ಲವಿ ನಟಿಸಿದ್ದ ಫಿದಾ ಸಿನಿಮಾದ ಬಗ್ಗೆ ಮಾತನಾಡುತ್ತಾ, ಸಾಯಿಪಲ್ಲವಿ ಒಬ್ಬ ಅದ್ಭುತವಾದ ನಟಿ ಮತ್ತು ಡಾನ್ಸರ್ ಎಂದು ಹಾಡಿ ಹೊಗಳಿದ್ದಾರೆ.

ಇದೇ ವೇಳೆ ಮತ್ತೊಂದು ಆಸಕ್ತಿಕರ ವಿಚಾರವನ್ನು ಸಹಾ ಮೆಗಾಸ್ಟಾರ್ ಚಿರಂಜೀವಿ ಅವರು ಹಂಚಿಕೊಂಡಿದ್ದಾರೆ. ನಟಿ ಸಾಯಿ ಪಲ್ಲವಿ ತನ್ನ ಜೊತೆ ಸಿನಿಮಾ ಮಾಡುವ ಅವಕಾಶವನ್ನು ತಿರಸ್ಕಾರ ಮಾಡಿದ ಘಟನೆಯನ್ನು ಅವರು ಬಹಿರಂಗ ಪಡಿಸಿದ್ದಾರೆ. ತಮಿಳಿನ ವೇದಾಲಂ ಸಿನಿಮಾವನ್ನು ತೆಲುಗಿನಲ್ಲಿ ಬೋಲಾ ಶಂಕರ್ ಎನ್ನುವ ಹೆಸರಿನಲ್ಲಿ ರೀಮೇಕ್ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಅವರ ತಂಗಿ ಪಾತ್ರಕ್ಕೆ ಸಾಯಿ ಪಲ್ಲವಿ ಅವರ ಜೊತೆ ಮಾತುಕತೆ ನಡೆಸಲಾಗಿತ್ತಂತೆ.

ಚಿತ್ರತಂಡ ಈ ವಿಚಾರವನ್ನು ಚಿರಂಜೀವಿ ಅವರಿಗೆ ತಿಳಿಸಿದಾಗ ಚಿರಂಜೀವಿ ಅವರು ತಮ್ಮ ಮನಸ್ಸಿನಲ್ಲಿ ಸಾಯಿ ಪಲ್ಲವಿ ಈ ಸಿನಿಮಾದ ಪಾತ್ರವನ್ನು ತಿರಸ್ಕರಿಸಿದರೆ ಸಾಕು ಎಂದು ಬೇಡಿಕೊಂಡಿದ್ದರಂತೆ. ಅದೃಷ್ಟವಶಾತ್ ಸಾಯಿ ಪಲ್ಲವಿ ಆ ಆಫರ್ ಅನ್ನು ತಿರಸ್ಕರಿಸಿದರು. ಆಗ ನನಗೆ ಬಹಳ ಸಂತೋಷವಾಯಿತು ಎಂದು ಚಿರಂಜೀವಿ ಅವರು ಹೇಳಿದ್ದಾರೆ. ಸಾಯಿ ಪಲ್ಲವಿ ಅವರು ಆಗ ತಾನು ರಿಮೇಕ್ ಸಿನಿಮಾಗಳ ಪಾತ್ರ ಮಾಡಲು ಹೆದರುವ ಕಾರಣದಿಂದಲೇ ಆ ಸಿನಿಮಾ ತಿರಸ್ಕರಿಸಿದೆ ಎಂದು ಅಸಲಿ ಕಾರಣ ಹೇಳಿದ್ದಾರೆ.

ಆಗ ಚಿರಂಜೀವಿ ಅವರು, ನಾನು ನಿಮ್ಮೊಂದಿಗೆ ನಟಿಸುವ ಮೂಲಕ ನಾನು ಒಬ್ಬ ಡಾನ್ಸರ್ ಎಂದು ಸಾಬೀತುಪಡಿಸಲು ಬಯಸುತ್ತೇನೆ. ನಾನು ನಿಮ್ಮೊಂದಿಗೆ ರೋಮ್ಯಾಂಟಿಕ್ ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆಯೇ ಹೊರತು ಸಹೋದರನಾಗಿ ಅಲ್ಲ ಎಂದು ಹೇಳಿದ್ದಾರೆ. ಕೂಡಲೇ ವೇದಿಕೆಯ ಮೇಲೆಯೇ ಸಾಯಿ ಪಲ್ಲವಿ ನಿಮ್ಮ ಮುಂದಿನ ಸಿನಿಮಾದಲ್ಲಿ ನನಗೆ ಅವಕಾಶ ನೀಡಿ ಎಂದು ಮೆಗಾಸ್ಟಾರ್ ಮುಂದೆ ಕೋರಿಕೆ ಇಟ್ಟಿದ್ದಾರೆ.

ಸಾಯಿ ಪಲ್ಲವಿ ಅವರ ಈ ಆಸೆಯನ್ನು ಚಿರಂಜೀವಿ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಈಡೇರಿಸುವರೋ, ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಾಗಿದೆ. ಆದರೆ ಮೆಗಾಸ್ಟಾರ್ ಖುದ್ದಾಗಿ ಸಾಯಿಪಲ್ಲವಿ ಒಬ್ಬ ಅದ್ಭುತ ಡಾನ್ಸರ್ ಮತ್ತು ನಟಿ ಎಂದು ಹೊಗಳಿಕೆ ನೀಡಿರುವುದು ಸಾಯಿ ಪಲ್ಲವಿ ಅವರ ಪ್ರತಿಭೆಗೆ ಸಿಕ್ಕಂತಹ ಒಂದು ದೊಡ್ಡ ಪ್ರಶಸ್ತಿ ಎಂದು ಹೇಳಬಹುದು.

Leave a Comment