ನನ್ನ ಮಗನ ಭವಿಷ್ಯ ಹಾಗೂ ಅವಕಾಶಗಳಿಗೆ ನಾನೇ ಮಣ್ಣು ಹಾಕಿ ಬಿಟ್ಟೆ: ನವರಸ ನಾಯಕ ಜಗ್ಗೇಶ್ ಅಸಮಾಧಾನ

Written by Soma Shekar

Published on:

---Join Our Channel---

ಕನ್ನಡ ಚಿತ್ರರಂಗದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ವರ್ಷಗಳ ಹಿಂದೆ ಇಳಿದರಾದರೂ, ಅವರಿಗೆ ನಿರೀಕ್ಷಿತ ಮಟ್ಟದ ಯಶಸ್ಸು ಸಿಗಲಿಲ್ಲ. ಅನಂತರ ಚಿತ್ರರಂಗದಿಂದ ಸದಾ ಅಂತರವನ್ನು ಕಾಯ್ದುಕೊಂಡು ಬಂದಿದ್ದ ಗುರುರಾಜ್ ಅವರು ಈಗ ಹೊಸದೊಂದು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಈ ಹೊಸ ಸಿನಿಮಾಕ್ಕೆ ‘ಕಾಗೆ ಮೊಟ್ಟೆ’ ಎನ್ನುವ ವಿಭಿನ್ನವಾದ ಶೀರ್ಷಿಕೆಯನ್ನು ಇಡಲಾಗಿದ್ದು,ಶೀರ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ.

ತಮ್ಮ ಹಿರಿಮಗ ಗುರುರಾಜ್ ನಟನೆಯ ಕಾಗೆ ಮೊಟ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ನಟ, ನವರಸನಾಯಕ ಜಗ್ಗೇಶ್ ಅವರು ಮಾತನಾಡುತ್ತಾ, ತಮ್ಮ ಮಗನ ಭವಿಷ್ಯ ಹಾಗೂ ಜೀವನದ ವಿಷಯದಲ್ಲಿ ತಾನು ಮಾಡಿದಂತಹ ಒಂದು ಬಹಳ ದೊಡ್ಡ ತಪ್ಪಿನ ಬಗ್ಗೆ ಭಾರವಾದ ಮನಸ್ಸಿನಿಂದ ಮಾತನಾಡಿ, ಮಗನ ಭವಿಷ್ಯಕ್ಕೆ ತಾನೇ ಹೇಗೆ ಸಮಸ್ಯೆ ಆಗಿಬಿಟ್ಟೆ ಎನ್ನುವ ವಿಚಾರವನ್ನು ಈ ಸಂದರ್ಭದಲ್ಲಿ ಜಗ್ಗೇಶ್ ಅವರು ಎಲ್ಲರೊಡನೆ ಹಂಚಿಕೊಂಡಿದ್ದಾರೆ.

ಗುರು ಗೆ ಬೇರೆ ಬೇರೆ ಭಾಷೆಗಳಿಂದ ಒಳ್ಳೆಯ ಅವಕಾಶಗಳು ಬರುತ್ತಿದ್ದವು. ಆದರೆ ಅವನು ಅಲ್ಲಿಗೆ ಹೋಗದಂತೆ ನಾನೇ ತಡೆದೆ. ನಾನು ಹಾಗೆ ಮಾಡಬಾರದಿತ್ತು ಎಂದು ಈಗ ಅನಿಸುತ್ತದೆ. ನಾನು ಅವನನ್ನು ತಡೆಯದೆ ಇದ್ದಿದ್ದರೆ ಇಂದು ಅವನು ತೆಲುಗು ಹಾಗೂ ತಮಿಳಿನಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದಿರುತ್ತಿದ್ದ. ಆದರೆ ನಾನೇ ಅವನ ಅವಕಾಶಗಳಿಗೆ ಮಣ್ಣೆರಚಿದೆ. ಅದು ನನ್ನ ಜೀವನದಲ್ಲಿ ನಾನು ಮಾಡಿದ ಬಹಳ ದೊಡ್ಡ ತಪ್ಪು ಎಂದು ಅವರು ಹೇಳಿದ್ದಾರೆ.

ಬಹಳ ದೊಡ್ಡ ದೊಡ್ಡ ಬ್ಯಾನರ್ ಗಳು ಹಾಗೂ ನಿರ್ದೇಶಕರು ಅವನನ್ನು ನಟಿಸುವಂತೆ ಕೋರಿಕೊಂಡರು. ಆದರೆ ನಾನು ಅವನನ್ನು ಕಳಿಸಲಿಲ್ಲ. ಏನೇ ಆದರೂ ಇಲ್ಲೇ ಮಾಡೋಣ, ಇಲ್ಲೇ ತಿನ್ನೋಣ ಎಂದು ಹೇಳಿದೆ. ಆ ಸಮಯದಲ್ಲಿ  ನನಗೆ ಅಂತಹ ಕೆಟ್ಟ ಬುದ್ಧಿ ಹೇಗೆ ಬಂತೋ ಗೊತ್ತಿಲ್ಲ, ನಾನೇ ಅವನ ಭವಿಷ್ಯಕ್ಕೆ ಮಣ್ಣು ಹಾಕಿದೆ, ಅವನ ಮನಸ್ಸಿನಲ್ಲಿ ಈ ವಿಷಯಕ್ಕೆ ಬೇಸರ ಇದ್ದರೂ ಇರಬಹುದು ಎಂದು ಜಗ್ಗೇಶ್ ಅವರು ಹೇಳಿದ್ದಾರೆ.

ಅಭಿನಯದ ವಿಷಯದಲ್ಲಿ ಅವನೊಬ್ಬ ಒಳ್ಳೆಯ ನಟ. ಅವನಿಗೆ ನಟನೆಯ ಯುನಿವರ್ಸಿಟಿ ಎಂದರೆ ಅದು ನಾನೇ. ಚಿಕ್ಕವಯಸ್ಸಿನಿಂದಲೂ ನನ್ನ ಸಿನಿಮಾಗಳನ್ನು ನೋಡಿದ್ದಾ‌ನೆ, ನನ್ನ ಜೊತೆ ಹಲವಾರು ಸಿನಿಮಾಗಳ ಶೂಟಿಂಗ್ ಗಳಿಗೆ ಬಂದಿದ್ದಾನೆ. ಮೇಕಪ್ ಹಾಕಿದ ಮೇಲೆ ನಾನು ಪಾತ್ರವಾಗಿ ಬದಲಾಗುವುದನ್ನು ಅವನು ಗಮನವಿಟ್ಟು ನೋಡಿದ್ದಾನೆ. ಅದನ್ನೆಲ್ಲ ಚೆನ್ನಾಗಿ ಕಲಿತಿದ್ದಾನೆ ಎಂದು ಅಭಿನಯದ ವಿಷಯದಲ್ಲಿ ಮಗನನ್ನು ಮೆಚ್ಚಿಕೊಂಡಿದ್ದಾರೆ ನವರಸನಾಯಕ ಜಗ್ಗೇಶ್ ಅವರು.

Leave a Comment