ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ಜನಪ್ರಿಯ ಸೀರಿಯಲ್ ಗಳಲ್ಲಿ ಸತ್ಯ ಕೂಡಾ ಸೇರಿದೆ. ಈ ಧಾರಾವಾಹಿ ಆರಂಭದಿಂದಲೂ ಸಹಾ ಅನೇಕರ ಪ್ರಿಯವಾದ ಧಾರಾವಾಹಿ ಆಗಿದೆ. ಏಕೆಂದರೆ ಇದರಲ್ಲಿ ನಾಯಕಿ ಸತ್ಯ, ತಾನು ಗಂಡಿಗಿಂತ ಯಾವುದೇ ವಿಚಾರದಲ್ಲೂ ಕಡಿಮೆ ಏನಿಲ್ಲ ಎನ್ನುವುದನ್ನು ಸಾಬೀತು ಮಾಡುವಂತೆ ಬದುಕುತ್ತಿರುವ ಛಲಗಾತಿ. ಹೆಣ್ಣಿನಂತೆ ಅಲ್ಲದೇ, ಗಂಡಿನಂತೆ ವಸ್ತ್ರ ಧರಿಸಿ, ಪುಂಡರು, ಪೋಲಿಗಳ ಪಾಲಿಗೆ ದುಸ್ವಪ್ನವೂ ಆಗಿರುವ ಸತ್ಯ ಸೀರಿಯಲ್ ನಲ್ಲಿ ಈಗ ಊಹೆ ಮೀರಿದ ತಿರುವು, ಸತ್ಯಳ ಬದುಕಲ್ಲಿ ಒಂದು ಹೊಸ ಆಯಾಮವು ಆರಂಭವಾಗಿದೆ.
ಹೌದು, ಸತ್ಯ ನಾಯಕ ಕಾರ್ತಿಕ್ ನನ್ನು ಪ್ರೇಮಿಸಿದ್ದಳು. ಅವನಿಗೂ ಅವಳ ಮೇಲೆ ಪ್ರೀತಿ ಇದ್ದರೂ ಅದು ಬದಲಾಗಿದೆ. ಅವನಿಗೆ ಸತ್ಯಳ ಮೇಲೆ ಎಲ್ಲಿಲ್ಲದ ಕೋಪ. ಅಲ್ಲದೇ ಈಗಾಗಲೇ ಅವನ ಮದುವೆ ಕೂಡಾ ಸತ್ಯಳ ಅಕ್ಕ ದಿವ್ಯ ಜೊತೆ ನಿಶ್ಚಯವಾಗಿ ಒಂದು ಬಾರಿ ನಿಂತು, ಎರಡನೇ ಬಾರಿಗೆ ಮಂಟಪದ ವರೆಗೂ ಬಂದಿತ್ತು. ಆದರೆ ಬಾಲನ ವ್ಯಾಮೋಹದಲ್ಲಿ ಸಿಕ್ಕಿರುವ ದಿವ್ಯ ಸತ್ಯಳಿಗೆ ಏಮಾರಿಸಿ ಮದುವೆ ಮಂಟಪದಿಂದ ಬಾಲನ ಜೊತೆ ಓಡಿ ಹೋಗುವಲ್ಲಿ ಯಶಸ್ವಿ ಆಗಿದ್ದಾಳೆ.
ಎರಡನೇ ಬಾರಿಯೂ ಮಗನ ಮದುವೆ ಹೀಗಾಯ್ತಲ್ಲ ಎಂದು ರಾಮಚಂದ್ರ ರಾಯರು ಚಿಂತಿಸುವಾಗಲೇ ಅಲ್ಲಿಗೆ ಆಗಮಿಸಿದ ಗುರುಗಳು ಕಾರ್ತಿಕ್ ಸತ್ಯ ಜಾತಕದ ವಿಚಾರ ನೆನಪಿಸಿದ್ದು, ವಿಧಿ ಬರಹದಲ್ಲಿ ಕಾರ್ತಿಕ್ ಸತ್ಯ ಜೋಡಿಯಾಗುವುದೇ ಒಳ್ಳೆಯದು ಎಂದು ಹೇಳಿದ ಮೇಲೆ , ಸೀತಮ್ಮ ನಿಗೆ ಸತ್ಯ ಇಷ್ಟ ಇಲ್ಲದೇ ಹೋದರೂ ಗುರುಗಳ ಮಾತು, ಗಂಡನಿಗೆ ಕೊಟ್ಟ ಮಾತಿಗೆ ಕಟ್ಟು ಬಿದ್ದು ಸತ್ಯ , ಕಾರ್ತಿಕ್ ಮದುವೆಯನ್ನು ಮಾಡಿಸಿದ್ದಾರೆ. ಕಾರ್ತಿಕ್ ಒಲ್ಲದ ಮನಸ್ಸಿನಿಂದ ತಾಳಿ ಕಟ್ಟಿದ್ದಾನೆ.
ಮದುವೆಯೇ ಆಗಲ್ಲ ಎಂದು ಎಲ್ಲರೂ ಭಾವಿಸಿದ್ದ ಸತ್ಯಳ ಬದುಕಲ್ಲಿ ಈಗ ಹೊಸ ಅಧ್ಯಾಯ ಆರಂಭವಾಗಿದೆ. ಗಂಡಿನ ಹಾಗೆ ಇದ್ದ ಸತ್ಯ ಈಗ ಒಬ್ಬನ ಹೆಂಡತಿಯಾಗಿದ್ದಾಳೆ. ಒಂದು ದೊಡ್ಡ ಮನೆಯ ಸೊಸೆಯಾಗಿದ್ದಾಳೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯಳ ಮುಂದಿನ ನಡೆ ಏನು ಎನ್ನುವುದು ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿರುವಾಗಲೇ ಮತ್ತೊಂದು ಹೊಸ ಟ್ವಿಸ್ಟ್ ಧಾರಾವಾಹಿಯಲ್ಲಿ ರೋಚಕ ಕ್ಷಣವನ್ನು ತಂದಿದೆ.
ಹೌದು, ಮದುವೆಯ ನಂತರ ಕಾರಲ್ಲಿ ಸತ್ಯಳನ್ನು ಮನೆ ತುಂಬಿಸಿಕೊಳ್ಳಲು ಗಂಡು ಹೆಣ್ಣು ಬರುವಾಗ, ಅರ್ಧ ದಾರಿಯಲ್ಲೇ ಕಾರು ನಿಲ್ಲಿಸಿದ ಕಾರ್ತಿಕ್, ಸತ್ಯಳನ್ನು ಕಾರಿನಿಂದ ಕೆಳಗೆ ಇಳಿಸಿದ್ದಾನೆ. ನೀನು ನನ್ನ ಹೆಂಡ್ತಿ ಅಲ್ಲಾ, ನಾನು ನಿನ್ನ ಮನೆಗೆ ಕರ್ಕೊಂಡು ಹೋಗಲ್ಲ ಎಂದು ಅವಳನ್ನು ನಡು ರಸ್ತೆಯಲ್ಲಿ ಬಿಟ್ಟು ತಾನು ಹೊರಟಿದ್ದಾನೆ. ಎಲ್ಲಾ ವಿಚಾರದಲ್ಲೂ ಧೈರ್ಯವಾಗಿದ್ದ ಸತ್ಯ ಈಗ ಮೌನವಾಗಿ ರಸ್ತೆಯಲ್ಲಿ ನಿಂತಿದ್ದಾಳೆ. ಸತ್ಯ ಮುಂದಿನ ನಡೆ ಏನಾಗಲಿದೆ? ಅತ್ತೆ ಮನೆಗೆ ಹೋಗುವಳಾ? ಅಲ್ಲಿ ಅವರ ಮನೆ ಶಾಸ್ತ್ರ ಸಂಪ್ರದಾಯಗಳಿಗಾಗಿ ತನ್ನ ವ್ಯಕ್ತಿತ್ವ ಬದಲಾಯಿಸಿಕೊಳ್ಳುವಳಾ?? ಕಾದು ನೋಡಬೇಕಾಗಿದೆ.