ನಟನೆಗೂ ಸೈ ಎಂದ ಚಿನ್ನದ ಹುಡುಗ ನೀರಜ್ ಚೋಪ್ರಾ: ಹೊಸ ಅವತಾರದಲ್ಲಿ ಕಂಡ ನೀರಜ್, ವೀಡಿಯೋ ಸಖತ್ ವೈರಲ್

Entertainment Featured-Articles News Viral Video

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಗೆದ್ದು, ಭಾರತೀಯ ಅಥ್ಲೆಟಿಕ್ಸ್ ಇತಿಹಾಸದಲ್ಲಿ ಒಂದು ಹೊಸ ದಾಖಲೆಯನ್ನು ಬರೆದು ಭಾರತದ ಚಿನ್ನದ ಹುಡುಗನೆಂಬ ಹೆಸರನ್ನು ಪಡೆದುಕೊಂಡ ನೀರಜ್ ಚೋಪ್ರಾ ಇಡೀ ದೇಶದ ಕಣ್ಮಣಿಯಾಗಿದ್ದಾರೆ. ಎಲ್ಲೆಲ್ಲೂ ನೀರಜ್ ಚೋಪ್ರಾ ಅವರ ಫೋಟೋಗಳು ಹಾಗೂ ವಿಡಿಯೋಗಳು ಇನ್ನೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಅವರ ಅಭಿಮಾನಿಗಳಿಗೆ ಅವರ ಮೇಲೆ ಇರುವ ಪ್ರೀತಿಗೆ ಒಂದು ಉದಾಹರಣೆಯಾಗಿ ಕಾಣಿಸಿಕೊಳ್ಳುತ್ತಿದೆ.

ಇದೀಗ ನೀರಜ್ ಚೋಪ್ರಾ ಅವರು ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಜಾಹೀರಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ಹೊಸ ಜಾಹೀರಾತಿನಲ್ಲಿ ನೀರಜ್ ಅವರ ನಟನಾ ಕೌಶಲ ಸಾಕಷ್ಟು ಜನರ ಗಮನವನ್ನು ಸೆಳೆದಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ವೇದಿಕೆಯಾಗಿರುವ ಬೆಂಗಳೂರು ಮೂಲದ ‘ಕ್ರೆಡ್’ (Cred) ಕಂಪನಿಯ ಹೊಸ ಜಾಹೀರಾತಿನಲ್ಲಿ 23 ವರ್ಷದ ಅಥ್ಲೀಟ್, ಯುವ ಜನರ ಕ್ರೇಜ್ ಆಗಿರುವ ನೀರಜ್ ಕಾಣಿಸಿಕೊಂಡಿದ್ದಾರೆ.

ಜಾಹೀರಾತಿನಲ್ಲಿ ಅವರು ವಿವಿಧ ಅವತಾರಗಳಲ್ಲಿ ನಮ್ಮ ಮುಂದೆ ಬಂದಿದ್ದಾರೆ. ಹೌದು, ಕಂಪನಿ ಸಿಇಒ, ಟಿವಿ ವರದಿಗಾರ, ಬ್ಯಾಂಕ್ ನೌಕರ, ಸಿನಿಮಾ ನಿರ್ದೇಶಕ ಸಹಿತ ಹಲವು ವೇಷಗಳಲ್ಲಿ ನೀರಜ್ ಚೋಪ್ರಾ ಮಿಂಚಿದ್ದಾರೆ. ಚಿನ್ನದ ಹುಡುಗ ಕಾಣಿಸಿಕೊಂಡಿರುವ ಈ ಜಾಹೀರಾತಿನ ಹೊಸ ವಿಡಿಯೋ ಭರ್ಜರಿ ವೈರಲ್‌ ಆಗಿದ್ದು, ನಟನೆಯಲ್ಲೂ ಅವರು ‘ಚಿನ್ನದ ಎಸೆತ’ ಎಂಬಂತೆ ನೋಡುಗರ ಮನಕ್ಕೆ ಲಗ್ಗೆ ಹಾಕಿದ್ದಾರೆ.

ಈ ಹಿಂದೆ ಇದೇ ಕಂಪನಿಯ ಜಾಹೀರಾತಿನಲ್ಲಿ ಭಾರತದ ಮಾಜಿ ಕ್ರಿಕೆಟ್ ಆಟಗಾರರಾದ ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಸೇರಿದಂತೆ ಹಲವು ಆಟಗಾರರು ಕಾಣಿಸಿಕೊಂಡಿದ್ದರು. ಈಗ ಅವರೆಲ್ಲರ ನಂತರ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ಈ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದಾರೆ.

ಟೋಕಿಯೋ ಒಲಂಪಿಕ್ಸ್ ನಲ್ಲಿ ಹೊಸ ಇತಿಹಾಸವನ್ನು ಬರೆದು ಬಂದ ನಂತರ ಭಾರತದಲ್ಲಿ ನೀರಜ್ ಅವರ ಅವರ ಬ್ರಾಂಡ್ ಮೌಲ್ಯ ಹೆಚ್ಚಾಗಿದೆ. ಹಲವು ಕಾರ್ಪೊರೇಟ್ ಕಂಪನಿಗಳು ಅವರನ್ನು ತಮ್ಮ ಬ್ರಾಂಡ್ ಗೆ ರಾಯಭಾರಿಯನ್ನಾಗಿ ಮಾಡಿಕೊಳ್ಳಲು ಹಾತೊರೆಯುತ್ತಿವೆ. ಒಲಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದ ನಂತರ ನೀರಜ್ ಚೋಪ್ರಾ ಕಾಣಿಸಿಕೊಂಡಿರುವ ಮೊದಲ ಜಾಹೀರಾತು ಇದಾಗಿದ್ದು ಸಖತ್ ಕ್ರೇಜ್ ಅನ್ನು ಹುಟ್ಟುಹಾಕಿದೆ.

ನೀರಜ್ ಚೋಪ್ರಾ ಒಲಂಪಿಕ್ಸ್ ನಿಂದ ದೇಶಕ್ಕೆ ವಾಪಸಾದ ಮೇಲೆ ಇಲ್ಲಿ ಅವರ ಕ್ರೇಜ್ ಹೇಗಿತ್ತು ಎನ್ನುವುದನ್ನು ಜಾಹಿರಾತಿನ ವಿಡಿಯೋದಲ್ಲಿ ನೋಡಬಹುದಾಗಿದೆ. ನೀರಜ್ ಬಗ್ಗೆ ಫಿದಾ ಆದ ವಿವಿಧ ಕ್ಷೇತ್ರಗಳ ಜನರ ಪಾತ್ರಗಳಲ್ಲಿ ಖುದ್ದು ನೀರಜ್ ಚೋಪ್ರಾ ಅವರೇ ಕಾಣಿಸಿಕೊಂಡು ಗಮನಸೆಳೆದಿದ್ದಾರೆ. ನೀರಜ್ ತಮ್ಮ ಸಾಮಾಜಿಕ ಜಾಲತಾಣದ ಜಾಲತಾಣದ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಬಹಳಷ್ಟು ಜನರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

Leave a Reply

Your email address will not be published. Required fields are marked *